ಹೊಸದಿಲ್ಲಿ: ಈ ಹಬ್ಬದ ಋತುವಿನಲ್ಲಿ ಬಹುತೇಕ ಭಾರತೀಯ ಗ್ರಾಹಕರು ಚೀನ ಉತ್ಪನ್ನಗಳಿಂದ ದೂರವಿರುವ ಮೂಲಕ “ಆತ್ಮನಿರ್ಭರ ಭಾರತ’ಕ್ಕೆ ಜೈ ಎಂದಿದ್ದಾರೆ. ಹೀಗೆಂದು ಲೋಕಲ್‌ಸರ್ಕಲ್ಸ್ ಸಂಸ್ಥೆಯ ಸಮೀಕ್ಷೆ ತಿಳಿಸಿದೆ. ಅದರ ಪ್ರಕಾರ ದೀಪಾವಳಿ ಸಮಯದಲ್ಲಿ 71 ಪ್ರತಿಶತ ಭಾರತೀಯರು “”ಮೇಡ್ ಇನ್ ಚೀನ’ ಟ್ಯಾಗ್ ಇದ್ದ ಉತ್ಪನ್ನಗಳನ್ನು ಖರೀದಿಸಿಲ್ಲ. 204 ಜಿಲ್ಲೆಗಳ 14 ಸಾವಿರಕ್ಕೂ ಅಧಿಕ ಗ್ರಾಹಕರ ಮೇಲೆ ಈ ಆನ್‌ಲೈನ್ ಸಮೀಕ್ಷೆ ನಡೆದಿತ್ತು.
ದೀಪಾವಳಿಗೆ ಕೇವಲ 29 ಪ್ರತಿಶತ ಭಾರತೀಯರಷ್ಟೇ ಚೀನ ನಿರ್ಮಿತ ಸ್ಮಾರ್ಟ್‌ಫೋನ್‌ಗಳು, ಗೃಹಾಲಂಕಾರ ವಸ್ತುಗಳು, ಎಲೆಕ್ಟ್ರಿಕ್ ವಸ್ತುಗಳನ್ನು ಖರೀದಿಸಿದ್ದಾರಂತೆ. ಚೀನ ನಿರ್ಮಿತ ಉತ್ಪನ್ನಗಳು ಅಗ್ಗದ ದರದಲ್ಲಿರುತ್ತವೆ, ಸ್ಥಳೀಯ ಉತ್ಪನ್ನಗಳಿಗಿಂತಲೂ ಅವುಗಳ ಗುಣಮಟ್ಟ ಉತ್ತಮವಾಗಿರುತ್ತದೆ ಎನ್ನುವುದು 29 ಪ್ರತಿಶತ ಗ್ರಾಹಕರ ಅಭಿಪ್ರಾಯ.
ಕೆಲ ವರ್ಷಗಳಿಂದ ಚೀನದ ಉತ್ಪನ್ನಗಳನ್ನು ಬಹಿಷ್ಕರಿಸುವ ವಿಚಾರದಲ್ಲಿ ಚರ್ಚೆ ಹೆಚ್ಚಾಗಿದೆ. ಗಡಿ ಭಾಗದಲ್ಲಿ ಚೀನ-ಭಾರತದ ನಡುವೆ ಬಿಕ್ಕಟ್ಟು ಸೃಷ್ಟಿಯಾದಾಗಿನಿಂದಲೂ ಚೀನಿ ಕಂಪನಿಗಳು, ಹೂಡಿಕೆಗಳು, ಆ್ಯಪ್ ಮಾರುಕಟ್ಟೆಗೆ ಭಾರತ ಪೆಟ್ಟು ಕೊಡಲಾರಂಭಿಸಿದೆ. ಚೀನ ವಸ್ತುಗಳ ವಿರುದ್ಧದ ಸಮರ ಗೆಲ್ಲಲು ಇನ್ನೂ ಸಮಯ ಹಿಡಿಯಲಿದೆಯಾದರೂ, ಭಾರತೀಯ ಗ್ರಾಹಕರಿಂದ ಹಾಗೂ ಖುದ್ದು ವ್ಯಾಪಾರಿ ಒಕ್ಕೂಟದಿಂದ ಆಶಾದಾಯಕ ಬೆಳವಣಿಗೆ ಕಾಣಿಸಲಾರಂಭಿಸಿದೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಖರೀದಿ ಹೆಚ್ಚಾಗಲಾರಂಭಿಸಿದೆ.
ಅಖೀಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರಕಾರ ಈ ಬಾರಿಯ ದೀಪಾವಳಿ ವೇಳೆ ಚೀನಗೆ ಸುಮಾರು 40 ಸಾವಿರ ಕೋಟಿ ರೂ.ಗಳ ಹಾನಿಯುಂಟಾಗಿದೆ. ಮೇಡ್ ಇನ್ ಚೀನದ ಆಟಿಕೆಗಳು, ಪಾತ್ರೆಗಳು, ಪೀಠೊಪಕರಣಗಳು, ಅಲಂಕಾರಿಕ ವಸ್ತುಗಳನ್ನು ಜನ ತಿರಸ್ಕರಿಸಿದ್ದೇ ಇದಕ್ಕೆ ಕಾರಣ.