Advertisement

ಭ್ರಷ್ಟರನ್ನು ಬಹಿಷ್ಕರಿಸಿ ಬದಲಾವಣೆ ತನ್ನಿ: ಸಂತೋಷ್‌ ಹೆಗ್ಡೆ

11:37 AM Jul 23, 2017 | |

ಮೈಸೂರು: ಯುವಜನತೆ ಸಮಾಜದಲ್ಲಿನ ಭ್ರಷ್ಟಚಾರ ಹಾಗೂ ಭ್ರಷ್ಟರನ್ನು ಬಹಿಷ್ಕರಿಸುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ಡಾ. ಸಂತೋಷ್‌ ಹೆಗ್ಡೆ ಹೇಳಿದರು.

Advertisement

ನಗರದ ಸಂಧ್ಯಾ ಸ್ಪಂದನಾ ಟ್ರಸ್ಟ್‌, ಅಟಲ್‌ ಜೀ ಸಂಸ್ಕಾರ ಭಾರತ್‌ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದ ಶಾರದ ವಿಲಾಸ ಕಾಲೇಜಿನ ಶತಮಾನೋತ್ಸವ ಭ‌ವನದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕಾರ, ಸಮಾಜ ಸೇವೆ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನ ದುರಾಸೆಯೇ ಭ್ರಷ್ಟಚಾರದ ಮೂಲ ಕಾರಣವಾಗಿದ್ದು, ಇದನ್ನು ತಡೆಯುವ ಮೂಲಕ ತೃಪ್ತಿಪಡುವುದನ್ನು ಇಂದಿನ ಯುವಜನತೆ ಕಲಿಯಬೇಕು. ಹೀಗಾಗಿ ಕೇವಲ ಹಣ, ಶ್ರೀಮಂತಿಕೆ, ಭ್ರಷ್ಟಚಾರ ತುಂಬಿರುವ ಸಮಾಜದಲ್ಲಿ ಬದಲಾವಣೆ ಮೂಡಿಸಲು ಇಂದಿನ ಯುವಪೀಳಿಗೆಯಿಂದ ಮಾತ್ರ ಸಾಧ್ಯ ಎಂದರು.

ಹೀಗೆಂದ ಮಾತ್ರಕ್ಕೆ ಯುವಜನತೆ ಕೇವಲ ಭ್ರಷ್ಟಚಾರದ ವಿರುದ್ಧವಾಗಿ ಮಾತನಾಡದೆ ಅದನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು. ದೇಶದಲ್ಲಿ ಪ್ರತಿ ವರ್ಷವೂ ಒಂದಲ್ಲ ಒಂದು ಹಗರಣಗಳು ಬಯಲಿಗೆ ಬರುತ್ತಿದ್ದು, ಇಂತಹ ಭ್ರಷ್ಟರನ್ನು ಸಮಾಜದಿಂದ ಹೊಗಲಾಡಿಸುವ ಕೆಲಸವಾಗಬೇಕಿದೆ. ಹೀಗಾಗಿ ಯುವಪೀಳಿಗೆ ತಮ್ಮ ಜೀವನದಲ್ಲಿ ತೃಪ್ತಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಮಾತನಾಡಿ, ಶಿಸ್ತಿನಿಂದ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದ್ದು, ಹೀಗಾಗಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಬೆಳಸಿಕೊಳ್ಳುವ ಜತೆಗೆ ಮಾನವೀಯ ಗುಣಗಳನ್ನೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ರಾಮಚಂದ್ರಗೌಡ ಅವರಿಗೆ ಅಟಲ್‌ ಜೀ ರಾಷ್ಟ್ರೀಯ ಪ್ರಶಸ್ತಿ, ಕಾಂಗ್ರೆಸ್‌ ಮುಖಂಡ ಜಿ.ರವಿ.ಅವರಿಗೆ ಗುಂಡೂರಾವ್‌ ರಾಜ್ಯ ಪ್ರಶಸ್ತಿ ನೀಡಲಾಯಿತು. ಇದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕ ಜಿ.ಆರ್‌.ವಿದ್ಯಾರಣ್ಯ, ಸಾಹಿತಿಗಳಾದ ಪುಷ್ಪ ಐಯ್ಯಂಗಾರ್‌, ಪ್ರೊ.ಕೆ.ಭೈçರವಮೂರ್ತಿ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ. ರಾಜಣ್ಣ, ಕಸಾಪ ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್‌,

-ಚಂದ್ರಶೇಖರ್‌, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಕರ್ನಾಟಕ ಸೇನಾಪಡೆಯ ಅಧ್ಯಕ್ಷ ತೇಜಸ್‌ ಲೋಕೇಶ್‌ಗೌಡ ಹಾಗೂ ಯೋಗಪಟು ಯೋಗಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 235 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 55 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್‌, ವಿಶ್ವೇಶ್ವರ ಭಟ್‌, ಸಮಾಜ ಸೇವಕ ಕೆ.ರಘುರಾಂ, ಮುಡಾ ಮಾಜಿ ಅಧ್ಯಕ್ಷ ಕೆ.ಆರ್‌.ಮೋಹನ್‌ಕುಮಾರ್‌, ಅಖೀಲ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷ ನಟರಾಜ ಜೋಯಿಸ್‌, ಉಪಾಧ್ಯಕ್ಷ ಬಿ.ವಿ.ಮಂಜುನಾಥ್‌, ಹಿರಿಯ ಪ್ರಾಧ್ಯಾಪಕಿ ಎಸ್‌.ಸುಶೀಲ, ಶಾರದ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರ್ಥಸಾರಥಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next