Advertisement

ಚೀನ ಆಮದಿತ ವಸ್ತುಗಳನ್ನು ಬಹಿಷ್ಕರಿಸಿ; ಪರಿಸರಸಹ್ಯ, ಸರಳ ನಾಗರಪಂಚಮಿ ಆಚರಿಸಿ

12:56 PM Jul 24, 2020 | mahesh |

ಉಡುಪಿ: ವರ್ಷಾರಂಭದ ಮೊದಲ ಹಬ್ಬ ನಾಗರಪಂಚಮಿಯನ್ನು ಶನಿವಾರ ಆಚರಿಸಲಾಗುತ್ತದೆ. ನಾಗರ ಪಂಚಮಿ ಎಂದಾಕ್ಷಣ ತನುತಂಬಿಲ ನಾಗನ ಕಲ್ಲಿಗೆ ಎರೆಯುವುದು ವಾಡಿಕೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಾಗರಪಂಚಮಿಯನ್ನು ಸರಳವಾಗಿ ಆಚರಿಸುವಂತೆ ಸರಕಾರವೇ ಸೂಚಿಸಿದೆ. ನಾಗರಪಂಚಮಿ ದಿನ ಆಯಾ ಕುಟುಂಬಿಕರೆಲ್ಲರೂ ಒಟ್ಟುಗೂಡಿ ಮೂಲ ಸ್ಥಾನದಲ್ಲಿ ಆಚರಿಸುವುದು ಹಿಂದಿನಿಂದ ಬಂದ ಸಂಪ್ರದಾಯ. ಈ ಬಾರಿ ದೇಗುಲ, ಮೂಲಸ್ಥಾನಗಳಲ್ಲಿ ಸಾಮೂಹಿಕ ಆಚರಣೆ ಇಲ್ಲ. ಸಾಂಪ್ರದಾಯಿಕವಾಗಿ ಪುರೋಹಿತರ ಉಪಸ್ಥಿತಿಯಲ್ಲಿ ನಡೆಸಲು ಹೆಚ್ಚಿನವರು ನಿರ್ಧರಿಸಿದ್ದಾರೆ.

Advertisement

ಪರಿಸರ ಸಂರಕ್ಷಿಸಿ
ನಾಗನಿಗೆ ಬೇಕಾಗಿರುವುದೇ ಪ್ರಕೃತಿದತ್ತ ಹಚ್ಚಹಸುರಿನ ಪರಿಸರ. ಆದರೆ ಇತ್ತೀಚೆಗೆ ನಾವು ಇದನ್ನೇ ಹಾಳುಗೆಡವುತ್ತಿದ್ದೇವೆ. ಸರಳ ಆಚರಣೆಯಾದರೂ ಪ್ಲಾಸ್ಟಿಕ್‌ ಚೀಲ ಸಹಿತ ಒಂದಿಷ್ಟು ಪರಿಸರನಾಶಕ ವಸ್ತುಗಳೊಂದಿಗೇ ನಾಗಬನಕ್ಕೆ ಹೋಗುವುದು ಸಹಜ ಎಂಬ ಜೀವನ ಮಟ್ಟಕ್ಕೆ ತಲುಪಿದ್ದೇವೆ. ಈ ವರ್ಷದಿಂದಲಾದರೂ ಇದನ್ನು ಕೈಬಿಡುವುದು ಉತ್ತಮ.
ಪರಿಸರ ಅಸಹ್ಯ ಅಗರ್‌ಬತ್ತಿ!

ಭಕ್ತಿಯಿಂದ ಅರ್ಪಿಸುವ ಈಗಿನ ಅಗರ್‌ಬತ್ತಿ (ಊದು ಬತ್ತಿ) ಎಷ್ಟು ಪರಿಸರ ಅಸಹ್ಯ? ಎಷ್ಟು ರಾಷ್ಟ್ರಘಾತಕ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಇದಕ್ಕೆ ಬಳಸುವುದು ಇದ್ದಿಲು ಪೌಡರ್‌, ಮರದ ಹುಡಿ, ರಾಸಾಯನಿಕ ಪರಿಮಳದ್ರವ್ಯ (ಕೆಮಿಕಲ್‌ ಸೆಂಟ್‌), ಬಿದಿರಿನ ಕಡ್ಡಿ. ಹಿಂದೆ ಇದೆಲ್ಲವೂ ಚೀನದಿಂದ ಬರುತ್ತಿತ್ತು. ಇತ್ತೀಚೆಗೆ ಕೆಲವು ಸಾಮಗ್ರಿಗಳ ಆಮದು ನಿಂತಿದೆಯೇ ವಿನಾ ಕೆಮಿಕಲ್‌ ಸೆಂಟ್‌, ಬಿದಿರಿನ ಕಡ್ಡಿ ಬರುವುದು ಚೀನ, ವಿಯೆಟ್ನಾಂನಿಂದಲೇ. ಇಡೀ ದೇಶಕ್ಕೆ ಒಂದು ತಿಂಗಳಿಗೆ 3,000 ರಿಂದ 4,000 ಟನ್‌ ಬಿದಿರು ಚೀನ, ವಿಯೆಟ್ನಾಂನಿಂದ ಆಮದು ಆಗುತ್ತಿದೆ. ಚೆನ್ನೈಗೆ ಹಡಗಿನ ಮೂಲಕ 300 ಕಂಟೈನರ್‌ (1 ಕಂಟೈನರ್‌ನಲ್ಲಿ 20 ಟನ್‌) ಕೆಮಿಕಲ್‌ ಸೆಂಟ್‌ ಚೀನದಿಂದ ಆಮದು ಆಗುತ್ತಿದೆ.

ಪರಿಶುದ್ಧ ಎಣ್ಣೆ ಸಿಗುತ್ತದೆಯೆ? ದೇವರಿಗೆ ಅರ್ಪಿಸುವ ದೀಪದೆಣ್ಣೆ ಕಥೆಯೇ ಬೇರೆ. ಒಂದು ಕೆಜಿ ಎಳ್ಳಿಗೆ ಸುಮಾರು 150 ರೂ. ಬೆಲೆ ಇದೆ. ಯಾಂತ್ರಿಕ ಮಾರ್ಗದಲ್ಲಿ ಶೇ. 48 ಎಣ್ಣೆ ಸಿಗುತ್ತದೆ. ಹಿಂದಿನ ಕಾಲದ ಗಾಣದ ಮಾರ್ಗದಲ್ಲಿ ಶೇ.40 ಎಣ್ಣೆ ಸಿಗುತ್ತದೆ. ಯಾಂತ್ರಿಕ ಮಾರ್ಗದಲ್ಲಿ 200 ಡಿಗ್ರಿ ಸೆಲಿಯಸ್‌ ಉಷ್ಣಾಂಶ ಹೊರಹೊಮ್ಮಿ ಎಣ್ಣೆಯ ಗುಣಮಟ್ಟ ಕುಸಿಯುತ್ತದೆ. ಮಾರುಕಟ್ಟೆಯಲ್ಲಿ ಅತಿ ಅಗ್ಗದ ಅಂದರೆ ಲೀ.ಗೆ 90 ರೂ.ಗೆ ದೀಪದೆಣ್ಣೆ ಮತ್ತು 360 ರೂ.ಗೆ ಅತ್ಯಂತ ಪರಿಶುದ್ಧ ಎಂದು ಹೇಳುವ ಎಳ್ಳೆಣ್ಣೆ ಸಿಗುತ್ತದೆ. ಆದರೆ ಎಳ್ಳಿನ ಬೆಲೆ, ಎಣ್ಣೆ ಮಿಲ್‌ಗೆ ಬಂಡವಾಳ ಹೂಡಿಕೆ, ನೌಕರರ ವೇತನ, ಲಾಭಾಂಶ ಸೇರಿದರೆ 360 ರೂ.ಗೂ ಸಿಗುವುದು ಅಸಂಭವ. ಗಾಣದ ರೀತಿಯಲ್ಲಿ ಕೆಲವು ಕಡೆ ಎಣ್ಣೆ ತೆಗೆಯುತ್ತಾರೆ. ಇದು ಸ್ವಲ್ಪ ದುಬಾರಿ ಇರುತ್ತದೆ. ಅದನ್ನು ಕೇಳಿ ಖರೀದಿಸಬೇಕು. ಅಪರಿಶುದ್ಧ ಎಣ್ಣೆಯ ದೀಪದಿಂದ ಪರಿಸರದ ಮೇಲೆ ಎಂತಹ ಪರಿಣಾಮ ಬೀರಬಹುದು?

ಬಾಳೆಹಣ್ಣು, ಹಾಲಿನ ಕಥೆ…
ಬಾಳೆಹಣ್ಣಿನ ಕಥೆಯೂ ಇದೇ ಆಗಿದೆ. ಮನೆಯಲ್ಲಿನ ಬಾಳೆಗಿಡದ ಹಣ್ಣು ಹೊರತು ಪಡಿಸಿ ಹೊರಗಡೆ ಹೆಚ್ಚಾಗಿ ರಾಸಾಯನಿಕ ಬಳಸಿ ಹಣ್ಣಾಗಿಸಿರುವ ಹಣ್ಣುಗಳೇ ಸಿಗು
ವುದು. ದೇವರ ಹೆಸರಿನಲ್ಲಿ ಖರೀದಿಸಿ ದರೂ ಅನಂತರ ಸೇವಿಸುವುದು ಮಾನವರು. ದೇವರಿಗೆ ಸಮರ್ಪಿಸುವ ಹಾಲಿನ ಕಥೆಯೂ ಇದಕ್ಕಿಂತ ಭಿನ್ನವಲ್ಲ. ದೇಸೀ ತಳಿಯ ದನಗಳನ್ನು ಸಾಕುವುದು, ಅಂತಹ ಪರಿಶುದ್ಧ ಹಾಲನ್ನು ಸ್ವೀಕರಿಸು ವುದು ಬಹಳ ಮುಖ್ಯ.

Advertisement

ಗೋಮಯದಿಂದ ಆಮ್ಲಜನಕ
ಕೆಮಿಕಲ್‌ ಸೆಂಟ್‌ನಿಂದ ಪರಿಮಳ ಬರಬಹುದೇ ವಿನಾ ಪ್ರಕೃತಿಗೆ ಪೂರಕವಾಗುತ್ತದೋ? ಇದು ಇಂಗಾಲಾಮ್ಲವನ್ನು ಹೊರಸೂಸುತ್ತದೆ. ನಮ್ಮ ಪದ್ಧತಿ ಇದಲ್ಲ. ಧೂಪವನ್ನು ಹಚ್ಚುವ ಬದಲು ಅಗರ್‌ಬತ್ತಿ ಕ್ರಮ ಚಾಲ್ತಿಗೆ ಬಂತು. ನಾವು ಧೂಪವನ್ನು ಬಳಸಬೇಕಾಗಿದೆ. ಇದು ಆಮ್ಲಜನಕವನ್ನು ಉತ್ಪಾದಿಸಿ ಜೀವಿಗಳಿಗೆ ಉಪಕಾರಿಯಾಗುತ್ತದೆ. ಇಂತಹ ಕಾರಣದಿಂದಾಗಿಯೇ ಧೂಪ-ದೀಪ-ನೈವೇದ್ಯ ಎಂಬ ಮಾತು ರೂಢಿಗೆ ಬಂತು. ಹಿಂದೆ ಧೂಪದ ಮರಗಳೇ ಸಾಲುಮರಗಳಾಗಿದ್ದವು. ಇದರ ತೊಗಟೆಯಿಂದ ಬರುವ ಮೇಣ, ದೇಸೀ ಹಸುಗಳ ಗೋಮಯ, ಭದ್ರಮುಷ್ಟಿ, ತುಪ್ಪವನ್ನು ಬಳಸಿ ಧೂಪದ ಕಡ್ಡಿಯನ್ನು ತಯಾರಿಸಲು ಸಾಧ್ಯ. ಇದನ್ನು ನಾವು ಅನೇಕರಿಗೆ ತರಬೇತಿ ಕೊಟ್ಟು ತಯಾರಿಸುತ್ತಿದ್ದೇವೆ. ಚೀನದ ವಸ್ತುಗಳನ್ನು ಖರೀದಿಸಿದರೆ ಶತ್ರುರಾಷ್ಟ್ರಗಳಿಗೆ ಸಹಾಯ ಮಾಡಿದಂತಲ್ಲವೆ ಎಂದು ಪ್ರಶ್ನಿಸುತ್ತಾರೆ ಆರೂರು ಪುಣ್ಯಕೋಟಿ ಗೋಶಾಲೆಯ ಭಕ್ತಿಭೂಷಣರು.

Advertisement

Udayavani is now on Telegram. Click here to join our channel and stay updated with the latest news.

Next