Advertisement

ಐಸ್‌ ಮಾರುವ ಹುಡುಗ; ಬಜಾರಿ ಹುಡುಗಿ: ಪ್ರೀತಿ ಮಹಲು

11:35 AM Sep 08, 2017 | |

“ನಿಮ್‌ ಸಿನಿಮಾ ಏನ್‌ “ತಾಜ್‌ ಮಹಲ್‌’ ಸಿನಿಮಾ ತರಹಾನಾ?’ ಅಂತ ಅದೆಷ್ಟೋ ಜನ ಕೇಳಿದ್ದಾರಂತೆ ಕಿಶೋರ್‌ ನಾಯ್ಕಗೆ. ಯಾರು ಕೇಳಿದರೂ, ಅವರು ಹೇಳುವುದು ಒಂದೇ ಉತ್ತರ. ಆ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಅಂತ.

Advertisement

“ಐಸ್‌ ಮಹಲ್‌’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲೂ ಅವರು ಹೇಳಿದ್ದು ಅದೇ ಮಾತನ್ನ. “ಆ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. “ತಾಜ್‌ ಮಹಲ್‌’ ಹಿಟ್‌ ಆಯ್ತು ಅಂತ ಆ ಹೆಸರನ್ನೂ ಇಟ್ಟಿಲ್ಲ. ಇಷ್ಟಕ್ಕೂ ನಾನು ಯಾಕೆ “ಐಸ್‌ ಮಹಲ್‌’ ಅಂತ ಹೆಸರಿಟ್ಟಿರಬಹುದು ಅಂತ ಯಾರಿಂದಲೂ ಊಹಿಸೋಕೂ ಸಾಧ್ಯವಿಲ್ಲ. ಐಸ್‌ ಅಂದರೆ ಅದು ಕರಗುವ ಪದಾರ್ಥ ಅಂತ ಹೇಳಬಹುದು. ಮಹಲ್‌ ಅಂದರೇನು? ಅದಕ್ಕೊಂದು ಪ್ರಮುಖವಾದ ಅರ್ಥ ಇದೆ. ಅದೇ ಚಿತ್ರದ ಹೈಲೈಟ್‌’ ಎನ್ನುತ್ತಾರೆ ಅವರು. 

“ಐಸ್‌ ಮಹಲ್‌’ ಎಂಬ ಚಿತ್ರಕ್ಕೆ ಕಿಶೋರ್‌ ನಾಯಕ್‌ ಆಲ್‌ ಇನ್‌ ಒನ್‌ ಎಂದರೆ ತಪ್ಪಿಲ್ಲ. ಈ ಚಿತ್ರಕ್ಕೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿರುವುದಷ್ಟೇ ಅಲ್ಲ, ಸಂಗೀತ ನಿರ್ದೇಶನ ಮಾಡಿ, ಚಿತ್ರದ ನಾಯಕನ ಪಾತ್ರವನ್ನೂ ಅವರೇ ನಿರ್ವಹಿಸಿದ್ದಾರೆ.
ಒಂದು ಫೈಟ್‌ ಹೊರತುಪಡಿಸಿದರೆ, ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಈ ಮಧ್ಯೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ನಟಿ ಮಮತಾ ರಾಹುತ್‌ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡರು ಬಂದಿದ್ದರು. 

ಅವರಿಬ್ಬರೂ ಹಾಡುಗಳನ್ನು ಬಿಡುಗಡೆ ಮಾಡುವ ಮುನ್ನ ಚಿತ್ರದ ಬಗ್ಗೆ ಚಿತ್ರತಂಡದವರು ಒಂದಿಷ್ಟು ಮಾತಾಡಿದರು. ಕಿಶೋರ್‌ ನಾಯ್ಕ ಅವರು ಸಾಕಷ್ಟು ಕಷ್ಟಪಟ್ಟು ಈ ಚಿತ್ರ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಅವರಿಗೆ ಸಾಕಷ್ಟು ಕೆಟ್ಟ ಅನುಭಗಳು, ನೋವು ಎಲ್ಲವೂ ಆಯಿತಂತೆ. ಅದರಿಂದ ಅವರು ಹಲವು ಪಾಠಗಳನ್ನೂ ಕಲಿತರಂತೆ. ಹಾಗಂತ ಅವರಿಗೆ ಬೇಸರವಿಲ್ಲ. “ಮೊದಲು ಈ ಸಿನಿಮಾನೂ ಆಗೋಲ್ಲ ಅಂದುಕೊಂಡಿದ್ದೆ. ಕೊನೆಗೆ ಎಲ್ಲಾ ಬಗೆಹರಿಯಿತು. ತುಂಬಾ ಪಾಠ ಕಲಿತಿದ್ದೇನೆ. ಅದರಿಂದ ಚಿತ್ರಕ್ಕೆ ತೊಂದರೆಯಾಗಲಿಲ್ಲ ಅನ್ನೋದಷ್ಟೇ ಸಮಾಧಾನ. ಚಿತ್ರವನ್ನ ಮೊದಲು 25 ದಿನಗಳಲ್ಲಿ ಮುಗಿಸುವ ಯೋಚನೆ ಇತ್ತು. ಕೊನೆಗೆ 65 ದಿನಗಳಾಯಿತು. ಇನ್ನೂ ನಾಲ್ಕೈದು ದಿನಗಳ ಚಿತ್ರೀಕರಣವಿದೆ.

ಬೆಂಗಳೂರಿನಲ್ಲಿ ಒಂದು ಶಾಟ್‌ ಸಹ ತೆಗೆದಿಲ್ಲ. ಎಲ್ಲವನ್ನೂ ಚಿಕ್ಕಮಗಳೂರು ಜಿಲ್ಲೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ’ ಎಂದರು. ಇನ್ನು ಅವರ ಪಾತ್ರದ ಬಗ್ಗೆ ಕೇಳಿದರೆ, ಟೈಮ್‌ಪಾಸ್‌ ಗಾಗಿ ಐಸ್‌ಕ್ಯಾಂಡಿ ಮಾರುವ ಹುಡುಗನ ಪಾತ್ರ ಎಂದರು. ಕಿಶೋರ್‌ಗೆ ನಾಯಕಿಯಾಗಿ ಕೀರ್ತಿ ಭಟ್‌
ಅಭಿನಯಿಸುತ್ತಿದ್ದಾರೆ. ಅವರದ್ದು ಈ ಚಿತ್ರದಲ್ಲಿ ಬಜಾರಿ ಪಾತ್ರವಂತೆ. ಇನ್ನು ಚಿತ್ರಕ್ಕೆ ಶಶಿಕುಮಾರ್‌ ನಾಯ್ಕ ಎನ್ನುವವರು ಸಾಹಿತ್ಯ ಬರೆಯುವುದರ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಅವರು ನಿರ್ದೇಶಕರ ಕೆಲಸವನ್ನು ಕೊಂಡಾಡಿದರು. ನಂತರ ಗಣ್ಯರೆಲ್ಲಾ ಚಿತ್ರದ ಬಗ್ಗೆ ನಾಲ್ಕಾಲ್ಕು  ಮಾತುಗಳನ್ನಾಡುವುದರ ಮೂಲಕ ಆಡಿಯೋ ಬಿಡುಗಡೆ ಸಮಾರಂಭ ಮುಗಿಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next