ಮಣಿಪಾಲ : ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ ಎಂದು ಮಗನ ಕೈಯಿಂದ ತಾಯಿ ಮೊಬೈಲ್ ಕಿತ್ತುಕೊಂಡ ಕಾರಣಕ್ಕೆ ಸಿಟ್ಟುಮಾಡಿಕೊಂಡ ಬಾಲಕ ತನ್ನ ಫ್ಲಾಟ್ ನ ಬಾತ್ ರೂಮ್ ನಲ್ಲಿ ಚಿಲಕ ಹಾಕಿ ಗಂಟೆಗಟ್ಟಲೆ ಕುಳಿತ ಘಟನೆ ಮಣಿಪಾಲದ ವಸತಿ ಸಮ್ಮುಚ್ಛಯದಲ್ಲಿ ಶನಿವಾರ ನಡೆದಿದೆ.
ವಸತಿ ಸಮ್ಮುಚ್ಛಯದ ನಾಲ್ಕನೇ ಮಹಡಿಯಲ್ಲಿ ಈ ಘಟನೆ ನಡೆದಿದೆ, ತನ್ನ ಮಗ ಶುಕ್ರವಾರ ರಾತ್ರಿಯಿಡೀ ಮೊಬೈಲ್ ನಲ್ಲಿ ಗೇಮ್ಸ್ ಆಡುತ್ತಿದ್ದ ಎಂದು ಆತನ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದಾರೆ, ಆದರೆ ಮಗ ತನ್ನ ತಾಯಿ ಮೊಬೈಲ್ ಕಿತ್ತುಕೊಂಡ ಕಾರಣಕ್ಕೆ ಸಿಟ್ಟುಗೊಂಡು ಬಾತ್ ರೂಮ್ ನಲ್ಲಿ ಚಿಲಕ ಹಾಕಿ ಕುಳಿತಿದ್ದಾನೆ, ಕೆಲವು ಹೊತ್ತಿನ ಬಳಿಕ ಮಗ ಬಾತ್ ರೂಮ್ ನಿಂದ ಹೊರ ಬಾರದೆ ಇದ್ದದನ್ನು ಕಂಡು ಕರೆಯಲು ಹೋಗಿದ್ದಾರೆ ಆದರೆ ಮಗ ಮಾತ್ರ ಯಾವುದೇ ರೀತಿಯಲ್ಲೂ ಪ್ರತಿಕ್ರೀಯೆ ನೀಡಿರಲಿಲ್ಲ ಇದರಿಂದ ಗಾಬರಿಗೊಂಡ ತಾಯಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಇದನ್ನೂ ಓದಿ:ಸಚಿವ ಸಂಪುಟ ರಚನೆಯ ವಿಚಾರದಲ್ಲಿ ಸಿಎಂ ಗೆ ಪರಮಾಧಿಕಾರ: ಡಿ.ವಿ ಸದಾನಂದಗೌಡ
ಕೂಡಲೇ ಕಾರ್ಯ ಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ಏಳು ಅಂತಸ್ತಿನ ಕಟ್ಟಡದ ಮೇಲಿನಿಂದ ಹಗ್ಗದ ಮೂಲಕ ನಾಲ್ಕನೇ ಮಹಡಿಗೆ ಇಳಿದ ಅಗ್ನಿಶಾಮಕ ಸಿಬ್ಬಂದಿ ಬಾತ್ ರೂಮ್ ನ ಕಿಟಕಿಯ ಮೂಲಕ ಒಳ ಹೊಕ್ಕು ಬಾಲಕನ ರಕ್ಷಣೆ ಮಾಡಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಅಗ್ನಿ ಶಾಮಕದಳದ ಮುಖ್ಯ ಅಧಿಕಾರಿ ವಸಂತ್ ಕುಮಾರ್, ಅಶ್ವಿನ್ ಸನಿಲ್, ಸುಧಾಕರ್ ದೇವಾಡಿಗ, ರವಿ ನಾಯಕ್, ಚಾಲಕ ಅಲ್ವಿನ್ ಪ್ರಶಾಂತ್, ಗೃಹರಕ್ಷಕರಾದ ಪ್ರಭಾಕರ್ ದಾವೂದ್ ಹಕೀಮ್ ಪಾಲ್ಗೊಂಡಿದ್ದರು.