ಮುದ್ದೇಬಿಹಾಳ: 5 ವರ್ಷದ ಬಾಲಕನೊಬ್ಬ ಆಟವಾಡುತ್ತ ಮನೆ ಮುಂದಿನ ನೀರು ಸಂಗ್ರಹಿಸುವ ಟ್ಯಾಂಕ್ (ಸಂಪ್) ನೊಳಗೆ ಬಿದ್ದು ಉಸಿರುಗಟ್ಡಿ ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯ ತಾಲೂಕು ಆಡಳಿತ ಸೌಧ ಹಿಂಭಾಗದಲ್ಲಿರುವ ಕುಂಚಗನೂರ ದೇಸಾಯಿ ಕಟ್ಟಡದಲ್ಲಿ ನಡೆದಿದೆ.
ಶ್ರೇಯಸ್ ಆನಂದ ನಿಡೋಣಿ ಮೃತ ಬಾಲಕ.
ನಿಡಗುಂದಿ ತಾಲೂಕು ಕಿರಿಶ್ಯಾಳ ಗ್ರಾಮದ ನಿವಾಸಿ ಆನಂದ ನಿಡೋಣಿ ಒಂದೆರಡು ವರ್ಷದ ಹಿಂದೆ ಹೊಟ್ಟೆಪಾಡಿಗಾಗಿ ದುಡಿಯಲು ಪತ್ನಿ, ಇಬ್ಬರು ಗಂಡು ಮಕ್ಕಳ ಸಮೇತ ಇಲ್ಲೇ ವಾಸವಾಗಿದ್ದರು.
ಬಾಲಕನ ತಂದೆ ಆನಂದ ಎಂಬವರು ಕಟ್ಟಡದಲ್ಲಿ ಬಾಡಿಗೆ ಇದ್ದು, ಬೇಕರಿ ಪದಾರ್ಥ ತಯಾರಿಸಿ ಕೊಡುವ ಕೆಲಸ ಮಾಡುತ್ತಿದ್ದರು. ತಾವು ವಾಹನ ತೊಳೆಯುವಾಗ ವಾಹನ ತೊಳೆಯುವಾಗ ಬಾಲಕ ಹೊರಗಡೆಯೇ ಇದ್ದ. ಬಹಳ ಹೊತ್ತಾದರೂ ಅವನು ಮನೆ ಒಳಗೆ ಬರದಿರುವುದನ್ನು ಕಂಡು ಪಾಲಕರು ಎಲ್ಲ ಕಡೆ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಬಳಿಕ ಟ್ಯಾಂಕ್‌ನಲ್ಲಿ ಜಗ್ ತೇಲಾಡುತ್ತಿರುವುದನ್ನು ನೋಡಿ ಸಂಶಯಗೊಂಡು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಬಂದು ನೋಡಿದಾಗ ಬಾಲಕ ಟ್ಯಾಂಕ್‌ನೊಳಗೆ ಶವವಾಗಿ ಪತ್ತೆ ಆಗಿದ್ದಾನೆ.
ಮಗನ ದುರಂತ ಸಾವಿಗೆ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ವಾಹನ ತೊಳೆಯುವ ಸಂದರ್ಭ ಜಗ್ಗನಲ್ಲಿ ನೀರು ತುಂಬಿಸಿಕೊಳ್ಳುತ್ತಿರುವಾಗ ಬಾಲಕ ಆಯತಪ್ಪಿ ಟ್ಯಾಂಕ್‌ನೊಳಗೆ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.