ಮುಂಬಯಿ: ಅತ್ಯಂತ ವಿಲಕ್ಷಣ ಘಟನೆಯೊಂದರಲ್ಲಿ ನಗರದ ಶಾಲೆಯೊಂದರಲ್ಲಿ ನಡೆಯುತ್ತಿದ್ದ ವಾರ್ಷಿಕ ನಾಟಕ ಸ್ಪರ್ಧೆಯ ವೇಳೆ ದಕ್ಷಿಣ-ಮಧ್ಯ ಮುಂಬಯಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತನ ಕುತ್ತಿಗೆಯನ್ನೇ ಚಾಕುವಿನಿಂದ ಕೊಯ್ದಿದ್ದು ಸದ್ಯ ಬಾಲಕನ ಕುತ್ತಿಗೆಗೆ 6 ಹೊಲಿಗೆಗಳನ್ನು ಹಾಕಲಾಗಿದ್ದು ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಾಟಕದಲ್ಲಿ ಬಾಲಕ ತನ್ನ ಸ್ನೇಹಿತನನ್ನು ಹತ್ಯೆಗೈಯ್ಯುವ ದೃಶ್ಯವಿತ್ತು. ನಾಟಕದ ರಿಹರ್ಸಲ್‌ನ ಸಂದರ್ಭದಲ್ಲಿ ಆತ ಮೊಂಡಾದ ಚಾಕುವನ್ನು ಬಳಸುತ್ತಿದ್ದರೆ ಸ್ಪರ್ಧೆಯ ವೇಳೆ ಈ ಚಾಕುವನ್ನು ಎಲ್ಲೋ ಇರಿಸಿದ್ದರಿಂದಾಗಿ ಬ್ರೆಡ್ ಕೊಯ್ಯಲು ಬಳಸುವ ಚಾಕನ್ನೇ ಕೊನೇಕ್ಷಣದಲ್ಲಿ ಆತ ಬಳಸಿದ್ದನು. ಆದರೆ ಈ ಬಗ್ಗೆ ಆತನಿಗೆ ಮಾಹಿತಿ ಇರಲಿಲ್ಲ. ರಿಹರ್ಸಲ್‌ನಲ್ಲಿ ಅಭ್ಯಸಿಸಿದ ಮಾದರಿಯಲ್ಲಿಯೇ ನಾಟಕದ ವೇಳೆ ಚಾಕುವಿನಿಂದ ಬಲವಾಗಿ ಸ್ನೇಹಿತನ ಕುತ್ತಿಗೆಗೆ ಆತ ಕೊಯ್ದಿದ್ದನು.
ಗಾಯಾಳು ಬಾಲಕ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು ನಾಟಕದಲ್ಲಿ ಈತ ಸಾವಿಗೀಡಾಗುವುದರಿಂದ ಸುಮಾರು ಏಳು ನಿಮಿಷಗಳ ಕಾಲ ಆತ ವೇದಿಕೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದನು. ಆತ ಸಾವನ್ನಪ್ಪಿರುವುದನ್ನು ತೋರಿಸಲು ಆತನ ಮೇಲೆ ಕೆಂಪು ನೀರನ್ನು ಎರಚಲಾಗಿತ್ತು. ಇದರಿಂದ ಅಲ್ಲಿದ್ದ ಇತರರಿಗೂ ಈತನಿಗೆ ಗಾಯವಾಗಿರುವುದು ಗಮನಕ್ಕೆ ಬಂದಿರಲಿಲ್ಲ. ನಾಟಕ ಮುಗಿದ ಬಳಿಕ ವೇದಿಕೆಯ ಹಿಂಭಾಗಕ್ಕೆ ಓಡಿದ ಆತ ತನ್ನ ಕುತ್ತಿಗೆಗೆ ಗಾಯವಾಗಿರುವುದನ್ನು ಸ್ನೇಹಿತರಿಗೆ ತಿಳಿಸಿದನು. ತತ್‌ಕ್ಷಣವೇ ಶಾಲೆಯಲ್ಲಿನ ಅರೆವೈದ್ಯಕೀಯ ಸಿಬಂದಿ ಗಾಯಾಳು ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರಾದರೂ ಶಿಕ್ಷಕರು ತತ್‌ಕ್ಷಣವೇ ಸಮೀಪದ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದರು.
ಆಸ್ಪತ್ರೆಯ ವೈದ್ಯರು ಬಾಲಕನ ಕುತ್ತಿಗೆಗೆ ಆರು ಹೊಲಿಗೆಗಳನ್ನು ಹಾಕಿದ್ದು ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಘಟನೆ ಸಂಬಂಧ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿರುವರಾದರೂ ಬಾಲಕನ ಪೋಷಕರು ದೂರು ನೀಡಲು ಆಸಕ್ತಿಯನ್ನು ತೋರಿಲ್ಲ. ಅಚ್ಚರಿ ಎಂದರೆ ಈ ಬಾಲಕನ ತಂಡ ಅಭಿನಯಿಸಿದ ನಾಟಕಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.