ಗೇಟಿನ ಶಬ್ದದೊಡನೆ ಅಪ್ಪನ ಸ್ವಾಗತ ಕೇಳಿಸಿತ್ತು. ಶಿಷ್ಟಾಚಾರದ ಮಾತುಗಳು ಮುಗಿದು ಶಿರಾ, ಉಪ್ಪಿಟ್ಟಿನ ಸರಬರಾಜಿನ ನೆಪದಲ್ಲಿ ನನ್ನನ್ನು ಪರೀಕ್ಷಾ ಕೋಣೆಗೆ ಕಳಿಸಲಾಯಿತು. ಎದೆಯ ಬಡಿತ ನಗಾರಿಯಾಗಿತ್ತಾದರೂ, ಕಿವಿಯಲ್ಲಿ ಪಿಸುಗುಟ್ಟಿದ ಅಮ್ಮನ ಅಣತಿಯಂತೆ ಮುಖದಲ್ಲಿ ಮೆಲುನಗೆಯನ್ನು ತೇಲಿಸಿದ್ದೆ.
ಓದು ಮುಗಿದ ವರ್ಷವದು. ಶುಭಮಾಸದ ಸುಮುಹೂರ್ತದಲ್ಲಿ ನನ್ನ ಜಾತಕ ಹೊರಹಾಕಿದ್ದರು. ನಮ್ಮ ಹವ್ಯಕ ಬ್ರಾಹ್ಮಣರ ಪದ್ಧತಿಯಲ್ಲೂ ಗಂಡೇ ಹೆಣ್ಣಿನ ಮನೆಗೆ ಕನ್ಯೆ ನೋಡಲು ಬರುವುದು ವಾಡಿಕೆ. ಅಂತೆಯೇ ಅಂದು ನನ್ನನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದರು. ನನಗೋ ಅದು ಮೊದಲ ಅನುಭವ. ಸಲ್ವಾರ್ ಕಮೀಜ್‌ನಲ್ಲೇ ಕಾಲೇಜಿಗೆ ಮಣ್ಣು ಹೊತ್ತಿದ್ದರಿಂದ ಐದೂವರೆ ಮೀಟರ್ ಸೀರೆ ಉಡುವುದು (ಸುತ್ತುವ) ಕಷ್ಟ ಅನಿಸಿದ್ದರೂ, ನೀಟಾಗಿಯೇ ಉಟ್ಟಾಗಿತ್ತು.
ಮನೆಯಲ್ಲಿ ಅಪ್ಪ, ಅಮ್ಮ ಮತ್ತು ನಾನು ಮಾತ್ರ. ಅಮ್ಮನೋ ಶಿರಾ, ಉಪ್ಪಿಟ್ಟಿನ ತಯಾರಿಯ ಸಂಭ್ರಮದಲ್ಲಿದ್ದರೆ, ಅಪ್ಪ ಬರುವವರ ಹಾದಿ ಕಾಯುತ್ತಿದ್ದರು. ಗೆಳತಿಯರ ವಧುಪರೀಕ್ಷೆಯ ಅನುಭವಗಳನ್ನು ಕೇಳಿ ತಿಳಿದಿದ್ದ ನಾನು, ಕುತೂಹಲದಿಂದ ಒಳಕೋಣೆಯಲ್ಲಿ ಕುಳಿತು, ನನ್ನದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದೆ.
ಗೇಟಿನ ಶಬ್ದದೊಡನೆ ಅಪ್ಪನ ಸ್ವಾಗತ ಕೇಳಿಸಿತ್ತು. ಶಿಷ್ಟಾಚಾರದ ಮಾತುಗಳು ಮುಗಿದು ಶಿರಾ, ಉಪ್ಪಿಟ್ಟಿನ ಸರಬರಾಜಿನ ನೆಪದಲ್ಲಿ ನನ್ನನ್ನು ಪರೀಕ್ಷಾ ಕೋಣೆಗೆ ಕಳಿಸಲಾಯಿತು. ಎದೆಯ ಬಡಿತ ನಗಾರಿಯಾಗಿತ್ತಾದರೂ, ಕಿವಿಯಲ್ಲಿ ಪಿಸುಗುಟ್ಟಿದ ಅಮ್ಮನ ಅಣತಿಯಂತೆ ಮುಖದಲ್ಲಿ ಮೆಲುನಗೆಯನ್ನು ತೇಲಿಸಿದ್ದೆ. ಜೊತೆಗೆ, ಕಾಲಿಗೆ ಸೀರೆ ತೊಡರದಂತೆ, ಕೈಯಲ್ಲಿ ಹಿಡಿದ ತಿಂಡಿಯ ಟ್ರೇ ಅಲುಗದಂತೆ ಎಚ್ಚರ ವಹಿಸುತ್ತಾ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತಾ ನಡೆದದ್ದು, ಹಗ್ಗದ ಮೇಲೆ ನಡೆಯುವ ದೊಂಬರಾಟದ ಹುಡುಗಿಯನ್ನು ನೆನಪಿಸಿತ್ತು.
“ಇವಳು ನನ್ನ ಮಗಳು, ಲತಾ…’ (ದಸರಾ ಗೊಂಬೆಯಂತೆ ಅಲಂಕರಿಸಿಕೊಂಡ ನನ್ನ ಗೆಟಪ್ಪೇ ಸಾರಿ ಸಾರಿ ಹೇಳುತ್ತಿತ್ತು ನಾನೇ ಹುಡುಗಿ ಅಂತ. ಮತ್ತಿದು ಬೇಕಿತ್ತೇ?) ಎಂಬ ಅಪ್ಪನ ಲೋಕಾರೂಢಿ ಮಾತಿಗೆ ನಗು ಬಂದಿತ್ತು. ನಗುತ್ತಲೇ ಮುಖವೆತ್ತಿ ನೋಡಿದ್ದೆ. ಪರಿಚಯಸ್ಥೆ ಚಂಪಕ್ಕಳ ಜೊತೆಗೆ ಇಬ್ಬರು ಗಂಡುಗಳು ವಿರಾಜಮಾನರಾಗಿದ್ದರು! ಇಬ್ಬರ ಮುಖದಲ್ಲೂ ಮುಗುಳುನಗೆ ರಾಚಿತ್ತು. ಸಮವಯಸ್ಕರಂತೆ ಕಂಡಿದ್ದ ಇಬ್ಬರೂ ಚೆಂದದ ಗಂಡುಗಳೇ ಹೌದು. ಆದರೆ ಇಬ್ಬರಲ್ಲಿ ನನ್ನನ್ನು ನೋಡಲು ಬಂದ ಗಂಡು ಯಾರಿರಬಹುದು? ಅಗತ್ಯವಿಲ್ಲದಿದ್ದರೂ ನನ್ನನ್ನು ಪರಿಚಯಿಸಿದ ಅಪ್ಪ, ಆತನನ್ನೂ ಪರಿಚಯಿಸಬಾರದಿತ್ತೇ?… ಈಗ ನಾನು ಯಾರನ್ನು ನೋಡಲಿ? ಹಾಗಂತ ಇಬ್ಬರನ್ನೂ ಮಿಕಮಿಕನೆ ನೋಡಿದರೆ, ಅವರೆಲ್ಲಾ ಹೋದಮೇಲೆ ಅಮ್ಮನಿಂದ ಮಂತ್ರಾಕ್ಷತೆಯ ಸುರಿಮಳೆ ಶತಸಿದ್ಧ. ಇಲ್ಲದ ಉಸಾಬರಿ ನನಗೇಕೆ ಎಂದುಕೊಂಡು, ನನ್ನ ಸಮಸ್ಯೆ ತೋರಗೊಡದೆ ಗಂಭೀರಳಾಗಿ ತಿಂಡಿ ತೀರ್ಥದ ವಿತರಣೆ ಮಾಡಿ¨ªೆ. ಅಷ್ಟರಲ್ಲಿ ಅಪ್ಪ ಕುಳಿತುಕೊಳ್ಳಲು ಹೇಳಿದ್ದರಿಂದ ಪರೀಕ್ಷೆ ಎದುರಿಸಲು ಸನ್ನದ್ಧಳಾಗಿ ಕುಳಿತೆ.
ನನ್ನ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ಬಂದಿದ್ದರೂ, “ಏನು ಕಲಿತದ್ದು?, ಯಾವ ಕಾಲೇಜು, ಅಡುಗೆ ಮಾಡೋಕೆ ಬರುತ್ತಾ? …’ ಮುಂತಾದ ಆಗಿನ ಕಾಲಕ್ಕೆ ತಕ್ಕಂಥ ಪ್ರಶ್ನಾವಳಿಗಳ ಸರಮಾಲೆ ಶುರುವಾಗಿತ್ತು. ಪ್ರಶ್ನೆಗಳ ರೂವಾರಿಯೇ ಗಂಡು ಎಂಬುದನ್ನು ಊಹಿಸಿ ಆತನನ್ನು ಸಿಕ್ಕಷ್ಟು ಸಮಯದಲ್ಲಿ ಅಲ್ಪ ಸ್ವಲ್ಪ ನೋಡಿದ್ದೆ. ಕಟ್ಟುಪಾಡುಗಳಿದ್ದ ಕಾಲವದು. ಹುಡುಗಿ, ತಲೆಯೆತ್ತಿ ನಿರ್ಭಿಡೆಯಿಂದ ಹುಡುಗನನ್ನು ನೋಡುವಂತಿರಲಿಲ್ಲ. ಹುಡುಗಿ ತುಂಬಾ ಬೋಲ್ಡ್, ಗಂಡುಬೀರಿ, ನಯನಾಜೂಕು ಇಲ್ಲದವಳು … ಮುಂತಾದ ಬಿರುದಾವಳಿಗಳ ಜೊತೆಗೆ ಅದೇ ಕಾರಣಕ್ಕಾಗಿಯೇ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗುವ ಆತಂಕವಿತ್ತು!
ಫಲಿತಾಂಶ ತಿಳಿಸುತ್ತೇವೆಂದು ಅವರು ಹೊರಟರು. ಹುಡುಗ ಆಗಿನ ಕಾಲದ ಚಾಕಲೇಟ್ ಹೀರೊ ಅನಂತನಾಗ್‌ನಂತಿದ್ದ. ಆ ಹಾಲುಬಣ್ಣದ ಸುಂದರ, ಮಾಸಲು ಬಣ್ಣದ ನನ್ನನ್ನು ಒಪ್ಪಲಾರ. ಇದರಿಂದ ವಧುಪರೀಕ್ಷೆ ಎದುರಿಸಲೊಂದು ತಾಲೀಮು ಸಿಕ್ಕಂತಾಯಿತು ಎಂದು ಪಾಸಾಗುವ ಭರವಸೆಯನ್ನು ಎಳ್ಳಷ್ಟೂ ಇಟ್ಟುಕೊಳ್ಳದೆ ನಿರುಮ್ಮಳಳಾಗಿದ್ದೆ. ಆದರೆ, ನಡೆದಿದ್ದೇ ಬೇರೆ. ವಧುಪರೀಕ್ಷೆಯನ್ನು ಫಸ್ಟ್ ಅಟೆಂನ್ಸ್ ನಲ್ಲೇ ಪಾಸು ಮಾಡಿ, ಮಿಲ್ಕ್ ಚಾಕೊಲೇಟ್ ಹೀರೋನೇ ನನ್ನ ಬಾಳ ಸಂಗಾತಿಯಾಗಿ ಮೂವತ್ತೆರಡು ವರ್ಷಗಳು ಯಶಸ್ವಿಯಾಗಿ ಉರುಳಿವೆ.
(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ uv.avalu@gmail.comಗೆ ಬರೆದು ಕಳಿಸಿ.)
– ಲತಾ ಹೆಗಡೆ