Advertisement
ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಮತ್ತು ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಅವರ ಮಾರ್ಗ ದರ್ಶನದಲ್ಲಿ ಆಟಗಾರರೆಲ್ಲ ಸಾಕಷ್ಟು ಬೆವರು ಸುರಿಸಿದರು. ಮುಖ್ಯವಾಗಿ ಆರಂಭಕಾರ ಶುಭಮನ್ ಗಿಲ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಸುದೀರ್ಘ ಅಭ್ಯಾಸದೊಂದಿಗೆ ಗಮನ ಸೆಳೆದರು. ಹಾಗೆಯೇ ಕೆ.ಎಲ್. ರಾಹುಲ್ ಕೂಡ ಹೆಚ್ಚಿನ ವೇಳೆ ಕಳೆದರು.“ನಾವೀಗ ಮೆಲ್ಬರ್ನ್ನಲ್ಲಿದ್ದೇವೆ. ಇಲ್ಲಿ ರೆಡ್ ಬಾಲ್ ಟೆಸ್ಟ್ ನಡೆಯಲಿದ್ದು, ಪುನರ್ ಸಂಘಟಿತರಾಗಲು ಇದು ಸಕಾಲ’ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಅಡಿಲೇಡ್‌ನಲ್ಲಿ ನಡೆದ ಪಿಂಕ್ ಟೆಸ್ಟ್ ಪಂದ್ಯದಲ್ಲಿ 36 ರನ್ನಿಗೆ ಕುಸಿದು ಹೀನಾಯ ಸೋಲಿಗೆ ತುತ್ತಾದ ಕಾರಣ, ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಬಹಳಷ್ಟು ಬದಲಾವಣೆ ಗೋಚರಿಸುವ ಸಾಧ್ಯತೆ ಇದೆ. ಗಿಲ್, ಜಡೇಜ ಅವರ ಸೇರ್ಪಡೆ ಬಹುತೇಕ ಖಚಿತವಾಗಿದೆ. ಕೀಪರ್ ಸಾಹಾ ಬದಲು ರಿಷಭ್ ಪಂತ್ ಆಡಲೂಬಹುದು. ಅವರು ಸಾಹಾಗಿಂತ ಮೊದಲು ಅಭ್ಯಾಸಕ್ಕೆ ಇಳಿದರು.
Related Articles
Advertisement
ಗಾಯಾಳಾಗಿ ಹೊರಬಿದ್ದಿರುವ ಮೊಹಮ್ಮದ್ ಶಮಿ ಸ್ಥಾನಕ್ಕಾಗಿ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ರೇಸ್‌ನಲ್ಲಿದ್ದಾರೆ. ಇವರಿಬ್ಬರೂ ರಹಾನೆಗೆ ಬಹಳ ಹೊತ್ತು ಬೌಲಿಂಗ್ ನಡೆಸಿದರು.