Advertisement
ಹಲವು ವರ್ಷಗಳಿಂದ ಕ್ಲಬ್‌ನ ಮೂರು ಲಾಕರ್‌ಗಳಿಂದ ಕಾನೂನು ಬಾಹಿರವಾಗಿ ಹಣ, ಆಭರಣ,ಆಸ್ತಿ ದಾಖಲೆಗಳನ್ನು ಬಚ್ಚಿಟ್ಟು ಯಾಮಾರಿಸಿದ್ದ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಅವಿನಾಶ್ ಅಮರ್‌ಲಾಲ್ ಕುಕ್ರೇಜಾ ಇದೀಗ ತಾನೇ ಆದಾಯ ತೆರಿಗೆ ಇಲಾಖೆ ಬಲೆಗೆ ಬಿದ್ದಿದ್ದಾರೆ.
Related Articles
Advertisement
ಈ ಬೆಳವಣಿಗೆಗಳ ನಡುವೆಯೇ, ನಂಜಪ್ಪ ಸರ್ಕಲ್ ಸಮೀಪದಲ್ಲಿರುವ ಅವಿನಾಶ್ ಮನೆ, ಆತ ಹಾಗೂ ಆತನ ಕುಟುಂಬಸ್ಥರು ನಡೆಸುವ ಉದ್ಯಮ ಗಳ ಕಚೇರಿಗಳು, ಆತನ ಸದಸ್ಯತ್ವ ಹೊಂದಿದ್ದ ಬೆಂಗಳೂರು ಕ್ಲಬ್ ಸೇರಿ ಇನ್ನಿತರ ಕ್ಲಬ್‌ಗಳಲ್ಲಿಯೂ ಕಾರ್ಯಾಚರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಜತೆಗೆ, ಲಾಕರ್‌ನಲ್ಲಿ ದೊರೆತ ನೂರಾರು ಕೋಟಿ ರೂ. ಮೌಲ್ಯದ ಆಸ್ತಿದಾಖಲೆ ಗಳು ಬಹುತೇಕ ದೇವನಹಳ್ಳಿ, ಬೇಗೂರು ಸುತ್ತಲ ಪ್ರದೇಶಗಳಿಗೆ ಸಂಬಂಧಿಸಿದ ಎಕರೆಗಟ್ಟಲೆ ಆಸ್ತಿ ದಾಖಲೆಗಳಾಗಿದ್ದು, ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಸೇರಿದ್ದು. ಗಣ್ಯವ್ಯಕ್ತಿಗಳಿಗೆ ನಂಟಿರುವ ಶಂಕೆ ಹಿನ್ನೆಲೆಯಲ್ಲಿ, ಆ ಆಸ್ತಿಗಳ ಮಾರುಕಟ್ಟೆ ಮೌಲ್ಯ, ಅಸಲಿ ವಾರಸುದಾರರು ಯಾರು ಎಂಬುದರ ಬಗ್ಗೆ ಐಟಿ ಪರಿಶೀಲನೆ ಮುಂದುವರಿದಿದೆ.
ಮತ್ತೂಂದೆಡೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ತೆರಳಿ ಹಣ ಹಾಗೂ ಆಭರಣ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಐಟಿ ಅಧಿಕಾರಿಗಳ ತನಿಖೆ ಪೂರ್ಣಗೊಂಡ ಬಳಿಕ ಪ್ರತ್ಯೇಕ ತನಿಖೆ ನಡೆಸುವ ಸಾಧ್ಯತೆಯಿದೆ. ಲಾಕರ್‌ನಲ್ಲಿ ದೊರೆತ ಆಸ್ತಿದಾಖಲೆಗಳು, ಹಲವು ರಿಯಲ್ ಎಸ್ಟೇಟ್ ಕಂಪೆನಿಗಳು ಹಾಗೂ ಪ್ರಭಾವಿಗಳಿಗೆ ಕಂಟಕ ತಂದೊಡ್ಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಫೈನಾನ್ಸ್ ಮಾಡುವ ಅವಿನಾಶ್, ನಂ.1 ಫೈನಾ ನ್ಸರ್ ಎಂಬ ಖ್ಯಾತಿ ಸಹ ಪಡೆದಿದ್ದು, ಅವರಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ರಾಜಕಾರಣಿ- ಗಣ್ಯರ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ. ಬ್ಯಾಂಕ್ ಅಥವಾ ಇನ್ನಿತರ ಕಡೆ ಹಣ, ಆಸ್ತಿ ದಾಖಲೆ ಗಳನ್ನು ಇಟ್ಟರೆ ಐಟಿಗೆ ಗೊತ್ತಾಗಲಿದೆ. ಹೀಗಾಗಿ, ಯಾರಿಗೂ ಅನುಮಾನ ಬರಬಾರದು ಎಂಬ ಉದ್ದೇಶದಿಂದ ಆಟಗಾರರು ಆಟದ ಸಾಮಾಗ್ರಿಗಳನ್ನು ಇಡುವ ಲಾಕರ್‌ಗಳನ್ನು ಅನಧಿಕೃತವಾಗಿ ಬಳಕೆ ಮಾಡಿ ಬಚ್ಚಿಟ್ಟಿದ್ದಾರೆ.ಲಾಕರ್‌ನಲ್ಲಿ ಸಿಕ್ಕ ನೂರಾರು ಕೋಟಿ ರೂ. ಮೌಲ್ಯದ ದಾಖಲೆಗಳನ್ನು ಐಟಿ ಅಧಿ ಕಾರಿಗಳು,ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಕಾಟ ದಲ್ಲಿದ್ದು, ಇದೀಗ ಆ ಮಾಹಿತಿ ದೊರೆತಿದೆ. ಈ ಪ್ರಕರಣ ಮತ್ತೂಂದು ಮಗ್ಗುಲಿಗೆ ಹೊರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಯಾರಿದು ಅವಿನಾಶ್?
ರಾಜಸ್ಥಾನ ಮೂಲದ ಅವಿನಾಶ್ ಅಮರಲಾಲ್, ದಶಕಗಳ ಹಿಂದೆಯೇ ಬೆಂಗಳೂರಿಗೆ ಬಂದು ಕುಟುಂಬದ ಜತೆ ವಾಸ ಮಾಡುತ್ತಿದ್ದಾರೆ. ಜೆ.ಪಿ. ಟೈರ್ ಮಾರಾಟ ಮಳಿಗೆ ಹೊಂದಿದ್ದಾರೆ. ಪ್ರಮುಖವಾಗಿ ರಿಯಲ್ ಎಸ್ಟೇಟ್ ಡೀಲರ್ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಾರೆ ಎನ್ನಲಾಗುತ್ತಿದೆ. 1993ರಲ್ಲಿ ಕ್ಲಬ್‌ನ ಅಜೀವ ಸದಸ್ಯತ್ವ ಪಡೆದುಕೊಂಡಿರುವ ಅವಿನಾಶ್, ಆಗೊಮ್ಮೆ ಈಗೊಮ್ಮೆ ಕ್ಲಬ್‌ಗ ಆಗಮಿಸುತ್ತಿದ್ದರು. ಉಳಿದಂತೆ ಅವರ ತಾಯಿ ಕ್ಲಬ್‌ಗ ಯಾವಾಗಲೂ ಆಗಮಿಸುತ್ತಿದ್ದರು. ಹಣದ ರಹಸ್ಯ ಬಯಲಾಗಿದ್ದು ಹೇಗೆ?
5187 ಸದಸ್ಯರನ್ನು ಹೊಂದಿರುವ ಕ್ಲಬ್‌ನಲ್ಲಿ ಲಾಕರ್ ವ್ಯವಸ್ಥೆ ನೀಡಲಾಗುತ್ತಿದ್ದು, 672 ಲಾಕರ್‌ಗಳಿವೆ. ಕಳೆದ ಎರಡು ವರ್ಷಗಳಿಂದ ಅನಧಿಕೃತವಾಗಿ ಕೆಲವರು ಲಾಕರ್ ಬಳಸುತ್ತಿರುವುದು ಗೊತ್ತಾಗಿತ್ತು. ಹೀಗಾಗಿ ಲಾಕರ್ ಬಳಕೆಗೆ ಅನುಮತಿ ಪಡೆದಿದ್ದ ಸದಸ್ಯರಿಗೆ ಲಾಕರ್ ಸಿಗುತ್ತಿರಲಿಲ್ಲ. ಪರಿಶೀಲನೆ ನಡೆಸಿದಾಗ ಒಟ್ಟು 127 ಲಾಕರ್‌ಗಳು ಅನಧಿಕೃತವಾಗಿ ಬಳಕೆಯಾಗುತ್ತಿರುವುದು ಗೊತ್ತಾಗಿತ್ತು. ಹೀಗಾಗಿ, ಎಲ್ಲ ಸದಸ್ಯರಿಗೂ ಅನಧಿಕೃತವಾಗಿ ಲಾಕರ್ ಬಳಸುತ್ತಿದ್ದರೆ ತೆರವು ಮಾಡಿ ಎಂದು ನೋಟಿಸ್ ನೀಡಿ, ಸಂದೇಶಗಳನ್ನೂ ಕಳುಹಿಸಲಾಗಿತ್ತು. ಪ್ರತಿಕ್ರಿಯೆ ಬಾರದಿದ್ದಾಗ ಜು.17ರಿಂದ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ಲಾಕರ್‌ಗಳ ಬೀಗವನ್ನು ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿಯೇ ಒಡೆಯಲಾಯಿತು. ಆಗ ಹಣದ ರಹಸ್ಯ ಬಯಲಾಯಿತು.