ಹೈದರಾಬಾದ್: ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ರನ್ ರಾಶಿ ಹರಿದು ಬಂದಿದೆ. ಭಾರತವು ದಾಖಲೆಯ ರನ್ ಬಾರಿಸಿದೆ. ಇದೇ ವೇಳೆ ಟೀಂ ಇಂಡಿಯಾದ ಯುವ ಬೌಲರ್ ಮಯಾಂಕ್ ಯಾದವ್ (Mayank Yadav) ಸಾಧನೆಯೊಂದಿಗೆ ಭಾರತದ ಬೌಲರ್‌ಗಳ ವಿಶೇಷ ಕ್ಲಬ್‌ಗೆ ಸೇರಿಕೊಂಡರು.
ಮೊದಲ ಇನಿಂಗ್ಸ್‌ನಲ್ಲಿ ಭಾರತದ ಆಟಗಾರರು ಬೌಂಡರಿಗಳ ಸುರಿಮಳೆಗೈದರು. ಹೈದರಾಬಾದ್ ನಲ್ಲಿ ಭಾರತವು ಆರು ವಿಕೆಟ್ ಕಳೆದುಕೊಂಡು 297 ರನ್ ಮಾಡುವುದರೊಂದಿಗೆ ಅಂತಾರಾಷ್ಟ್ರೀಯ ಟಿ20 ಗಳಲ್ಲಿ ಎರಡನೇ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆ ಬರೆಯಿತು. ಬಾಂಗ್ಲಾದೇಶ 20 ಓವರ್ ಗಳಲ್ಲಿ ಏಳು ವಿಕೆಟ್ ಗೆ 164 ರನ್ ಸೀಮಿತವಾದ ನಂತರ ಭಾರತ 133 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಮಯಾಂಕ್ ಅವರ ವೇಗವು ಬಾಂಗ್ಲಾದೇಶವು ರೆಕ್ಕೆಗಳನ್ನು ಹರಡುವ ಬಗ್ಗೆ ಯೋಚಿಸುವ ಮೊದಲೇ ಕತ್ತರಿಸಿತು. ಬಾಂಗ್ಲಾ ಇನ್ನಿಂಗ್ಸ್‌ನ ಮೊದಲ ಬಾಲ್ ನಲ್ಲಿ, 22 ವರ್ಷ ವಯಸ್ಸಿನ ಪರ್ವೇಜ್ ಹೊಸೈನ್ ಎಮೋನ್ ಅವರನ್ನು ಮಯಾಂಕ್ ಯಾದವ್ ಔಟ್ ಮಾಡಿದರು.
ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿಯೇ ಎಮೊನ್ ಅವರು ರಿಯಾನ್ ಪರಾಗ್ ಅವರಿಗೆ ಕ್ಯಾಚಿತ್ತು ಹೊರನಡೆದರು. ಒಟ್ಟು ನಾಲ್ಕು ಓವರ್ ಬೌಲಿಂಗ್ ಮಾಡಿದ ಮಯಾಂಕ್ ಯಾದವ್ 32 ರನ್ ನೀಡಿ ಎರಡು ವಿಕೆಟ್ ಕಿತ್ತರು.
ಟಿ20ಐ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆಯುವ ಮೂಲಕ ಮಯಾಂಕ್ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬೌಲರ್ ಆದರು.
ಅವರು ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಒಳಗೊಂಡಿರುವ ವಿಶೇಷ ಕ್ಲಬ್ ಗೆ ಸೇರಿದರು. “ಸ್ವಿಂಗ್ ಮಾಸ್ಟರ್” ಎಂದು ಕರೆಯಲ್ಪಡುವ ಭುವನೇಶ್ವರ್ ಕುಮಾರ್ ಅವರು ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ಸಾಧನೆ ಮಾಡಿದ್ದಾರೆ.
ಹೈದರಾಬಾದ್ ನಲ್ಲಿ ಶನಿವಾರ ರಾತ್ರಿ ಉರುಳಿದ ದಾಖಲೆ ಇದೊಂದೇ ಅಲ್ಲ. ಸಂಜು ಸ್ಯಾಮ್ಸನ್ ಅವರು ಟಿ20ಐ ಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ.