Advertisement
ಅನಂತವಾಗಿದ್ದ ವೇದಗಳನ್ನು ಅಧ್ಯಯನಕ್ಕೆ ಅನುಕೂಲ ಆಗುವಂತೆ ನಾಲ್ಕು ವೇದಗಳಾಗಿ ವರ್ಗೀಕರಣ ಮಾಡಿದ್ದರಿಂದ ಇವರಿಗೆ ವೇದವ್ಯಾಸರೆಂಬ ಹೆಸರು ಬಂದಿತು. ಈ ನಾಲ್ಕು ವೇದಗಳನ್ನು ಶಿಷ್ಯರಾದ ಪೈಲವ, ವೈಶಂಪಾಯನ, ಜೈಮಿನಿ ಮತ್ತು ಸುಮಂತರಿಗೆ ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳನ್ನು ಬೋಧಿಸಿದರು. ತಮ್ಮ ಐದನೆಯ ಶಿಷ್ಯನಾದ ಸೂತ ರೋಮಹರ್ಷಣರಿಗೆ ಇತಿಹಾಸ, ಪುರಾಣಗಳಲ್ಲಿ ತರಬೇತಿ ಕೊಟ್ಟರು.
Related Articles
Advertisement
ಗುರು ಎಂದರೆ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಕೊಡುವವನು ಎಂದು ಸಾಮಾನ್ಯ ಅರ್ಥವಾಗಿರುತ್ತದೆ. ಆದರೆ ಗುರುಗಳಲ್ಲಿ ಲೌಕಿಕ ಗುರು, ಧರ್ಮಗುರು, ಆಧ್ಯಾತ್ಮಿಕ ಗುರು, ಪರಮ ಗುರು, ಪರಾತ್ಪರ ಗುರು ಇತ್ಯಾದಿ ಪ್ರಕಾರಗಳಿರುತ್ತವೆ. ಶಾಸ್ತ್ರಗಳಲ್ಲಿ ಗುರುಗಳನ್ನು ಹೇಗೆ ಗುರುತಿಸಬೇಕು ಎಂಬುದು ನಿರ್ಧಾರವಾಗಿರುತ್ತದೆ.
ಗುರುವು ಶುದ್ಧ-ಶುಭ್ರ ವೇಷಧಾರಣೆ ಮಾಡುವವ ನಾಗಿರಬೇಕು. ಶುಭ ಲಕ್ಷಣಗಳಿಂದ ಕೂಡಿರಬೇಕು. ಆಕರ್ಷಕ ವ್ಯಕ್ತಿತ್ವವಿರಬೇಕು. ವೇದೋಪನಿಷತ್ ಶಾಸ್ತ್ರಗಳನ್ನು ಬಲ್ಲವನಾ ಗಿರಬೇಕು. ತಂತ್ರ ಹಾಗೂ ತಾಂತ್ರಿಕ ಸಂಕೇತಗಳನ್ನು ಮತ್ತು ಕ್ರಿಯೆಗಳನ್ನು ತಿಳಿದವನಾಗಿರಬೇಕು. ಬುದ್ಧಿವಂತ ಆಗಿರಬೇಕು. ಭ್ರಮೆ ಅಥವಾ ಸಂಶಯಗಳನ್ನು ನಾಶಮಾಡುವಂತಹವನಾಗಿರಬೇಕು. ನಿಗ್ರಹ ಮತ್ತು ಅನುಗ್ರಹಗಳ ಸಾಮರ್ಥ್ಯವನ್ನು ಹೊಂದಿರಬೇಕು. ಶಕ್ತಿಪಾತ ಮತ್ತು ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಶಾಂತ, ದಯಾಳು, ಭಕ್ತ ವತ್ಸಲ, ಧೈರ್ಯವಂತ, ಸಂಯಮಿ, ಷಡ್‌ರಿಪುಗಳನ್ನು ಗೆದ್ದವನಾಗಿರಬೇಕು. ಪಾತ್ರ- ಅಪಾತ್ರಗಳನ್ನು ತಿಳಿದವನಾಗಿರಬೇಕು. ನಿತ್ಯ ನೈಮಿತ್ತಿಕ ಹಾಗೂ ಕಾಮ್ಯ ಕರ್ಮಗಳಲ್ಲಿ ತೊಡಗಿರಬೇಕು. ದ್ವೇಷ, ಅಸೂಯೆ, ಭಯ, ಲೋಭ, ಮೋಹ, ಅಹಂಕಾರರಹಿತನಾಗಿರಬೇಕು. ತನ್ನ ವಿದ್ಯೆಯಲ್ಲಿ ಅನುಷ್ಠಾನ ನಿರತನಾಗಿರಬೇಕು. ಧನ, ಸ್ತ್ರೀ ಇತ್ಯಾದಿಗಳಲ್ಲಿ ಅನಾಸಕ್ತನಾಗಿರಬೇಕು. ದುರ್ಜನರ ಸಂಗದಿಂದ ದೂರವಿರುವವನಿರಬೇಕು. ನಿಷ್ಪಕ್ಷ, ಸಂಶಯ ಹಾಗೂ ವಿಕಲ್ಪರಹಿತನಾಗಿರಬೇಕು. ಸ್ತುತಿ ಮತ್ತು ನಿಂದೆಗಳನ್ನು ಸಮಾನ ದೃಷ್ಟಿಯಿಂದ ನೋಡುವವನಾಗಿರಬೇಕು.
ಗುರುವು ಕಲ್ಯಾಣ ಸ್ವರೂಪ, ಪರಮಾತ್ಮ ತತ್ವವು ಸರ್ವವ್ಯಾಪಿ, ಸೂಕ್ಷ್ಮ, ನಿಷ್ಕಲ, ಆಕಾಶದಂತೆ ಶೂನ್ಯ, ಅಜನ್ಮ, ಅನಂತವಾಗಿರುತ್ತದೆ. ಆದ್ದರಿಂದ ಆ ಪರಮಾತ್ಮ, ಪ್ರತ್ಯಕ್ಷ ಗುರು ರೂಪದಿಂದ ಪ್ರಕಟವಾಗುತ್ತಾನೆ.
ಅನೇಕ ಮಹತ್ವಪೂರ್ಣವಾದ ವಿದ್ಯೆಗಳು ಗುರುವಿನ ಮಾಧ್ಯಮದಿಂದಲೇ ಪ್ರಾಪ್ತವಾಗಿರುತ್ತವೆ. ತಂತ್ರ, ಮಂತ್ರ, ಯಂತ್ರ, ಶಿಲ್ಪ, ಸಂಗೀತ, ಗಣಿತ, ವಿಜ್ಞಾನ, ಜ್ಯೋತಿಷ್ಯ ಮುಂತಾದ ಎಲ್ಲ ವಿದ್ಯೆಗಳು ಗುರುವಿನ ಮಾರ್ಗದರ್ಶನ ಇಲ್ಲದೇ ದೊರೆಯಲಾರವು.
ಗುರುವಿನ ಸ್ಮರಣೆ, ಪೂಜನ, ಧ್ಯಾನಗಳಿಂದ ಸಾಧಕನು ಪೂರ್ಣತೆಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಸಾಧನೆಯ ಸಿದ್ಧಿಯು ಗುರುತತ್ವದ ಮೇಲೆ ಅವಲಂಬಿಸಿರುತ್ತವೆ. ಗುರುವಿನ ಭಕ್ತಿ ಪೂರ್ವಕ ಆರಾಧನೆಯಿಂದ ಭೋಗ ಮತ್ತು ಮೋಕ್ಷ ಎರಡೂ ಪ್ರಾಪ್ತವಾಗುತ್ತವೆ. ಇಂದು ನಮ್ಮ ಪರಮ ಗುರುಗಳ ಮತ್ತು ಆಧ್ಯಾತ್ಮಿಕ ಗುರುಗಳ ಸ್ಮರಣೆ ಪೂಜೆ, ಧ್ಯಾನ ಮಾಡೋಣ ಮತ್ತು ಲೌಕಿಕ ಗುರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸೋಣ.
-ಶ್ರೀ ಮೌನೇಶ್ವರ ಗುರೂಜಿ ರಾಣೇಬೆನ್ನೂರು