Advertisement

ಬೋವಿ ಸಮುದಾಯದಿಂದ ಬಿಜೆಪಿ ಬೆಂಬಲ’

04:36 PM Apr 14, 2019 | Team Udayavani |

ತುಮಕೂರು: ಎಲ್ಲ ರಂಗದಲ್ಲಿಯೂ ಬೋವಿ ಸಮುದಾಯ ಅಭಿವೃದ್ಧಿ ಹೊಂದಲು ಬಿಜೆಪಿ ಸಹಕಾರ ನೀಡುತ್ತಿರುವುದರಿಂದ ಬಿಜೆಪಿಯನ್ನು ಬೋವಿ ಸಮುದಾಯ ಎಲ್ಲ ಚುನಾವಣೆಗಳಲ್ಲಿಯೂ ಬೆಂಬಲಿಸುತ್ತಾ ಬಂದಿದ್ದು, ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸು ವಂತೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

Advertisement

ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬೋವಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿ, ಬೋವಿ ಸಮುದಾಯದಿಂದಲೇ ಬಿ.ಎಸ್‌.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿ ಆಡಳಿತ ನಡೆಸಿದರು. ಸರ್ಕಾರದ ವತಿಯಿಂದ ಸಿದ್ದರಾಮೇಶ್ವರ ಜಯಂತಿ, ಬೋವಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಯಡಿಯೂರಪ್ಪ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಬೋವಿ ಸಮುದಾಯಕ್ಕೆ ಸೇರಿದವೆಂಕಟರಮಣಪ್ಪ ಅವರನ್ನು ಮೊದಲು ಸಚಿವರನ್ನಾಗಿ ಮಾಡಿದ್ದೇ ಬಿ.ಎಸ್‌.ಯಡಿಯೂರಪ್ಪ ಎನ್ನುವುದನ್ನು ನೆನಪಿಸಿಕೊಳ್ಳಬೇಕು ಎಂದರು.

ಸಮುದಾಯ ಒಡೆಯುವ ಕೆಲಸ: ದೇಶದಲ್ಲಿ ನಮ್ಮ ಸಮುದಾಯವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕಿದೆ. ಪಾಕಿಸ್ತಾನದಲ್ಲಿಯೂ ನಮ್ಮ
ಸಮುದಾಯದವರಿದ್ದು, ಸಂಕಷ್ಟದಲ್ಲಿರುವ ಅವರನ್ನು ರಕ್ಷಿಸಿ, ಭಾರತಕ್ಕೆ ಕರೆತರುವ ಕೆಲಸ ಮಾಡಲು ನರೇಂದ್ರ ಮೋದಿ ಅವರಿಂದ ಮಾತ ಸಾಧ್ಯ. ರಾಷ್ಟ್ರಮಟ್ಟದಲ್ಲಿ ಸಮುದಾಯವನ್ನು ಒಟ್ಟಾಗಿಸುವ ಮೂಲಕ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಕೆಲಸ ಮಾಡಬೇಕಿದೆ. ಆದರೆ ನಮ್ಮಲ್ಲಿಯೇ ಇರುವ ಕೆಲವರು ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸರಿಯಾಗಿ ಬುದ್ಧಿ ಕಲಿಸಿಲ್ಲ: ಕುಮಾರಸ್ವಾಮಿ ಸೈನಿಕರನ್ನು ಅವಮಾನಿಸಿದ್ದಾರೆ. ದೇಶವನ್ನು ರಕ್ಷಿಸುತ್ತಿರುವವರ ಬಗ್ಗೆ ಅವಹೇಳನ ಮಾಡುತ್ತಾರೆ. ನಾಳ ನಮ್ಮ ಸಮುದಾಯವನ್ನು ಹೀಗೆ ಅವಹೇಳನ ಮಾಡಬಹುದು. ದೇವೇಗೌಡರು ಕುಮಾರ ಸ್ವಾಮಿಗೆ ಸರಿಯಾಗಿ ಬುದ್ಧಿ ಕಲಿಸಿಲ್ಲ. ಸರಿಯಾಗಿ ಬುದ್ಧಿ ಕಲಿಸಿದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ. ಹೇಮಾವತಿ ನೀರು ಅರಸೀಕೆರೆವರೆಗೆ ಬಂದು ನಂತರ ಚನ್ನರಾಯಪಟ್ಟಣಕ್ಕೆ ಹೋಗುತ್ತದೆ. ನಾಗಮಂಗಲಕ್ಕೂ ನೀರಿಲ್ಲ, ಅವರ ತೋಟ ಗದ್ದೆಗಳಿರುವ ಕಡೆಗೆ ಮಾತ್ರ ಹೇಮಾವತಿ ನೀರು ಹರಿಸುತ್ತಿದ್ದಾರೆ ಎಂದು ದೂರಿದರು.

ಜಯಶೀಲರನ್ನಾಗಿ ಮಾಡಿ: ಬಿಜೆಪಿ ಅಭ್ಯರ್ಥಿ ಜಿ.ಎಸ್‌. ಬಸವರಾಜು ಮಾತನಾಡಿ, ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಬೋವಿ ಸಮುದಾಯದ ಸಮಸ್ಯೆ ಗಳಿಗೆ ಪರಿಹಾರ ದೊರಕಿಸಿಕೊಡುತ್ತೇನೆ. ಈ
ಬಾರಿಯೂ ಬೋವಿ ಸಮುದಾಯ ನನ್ನನ್ನು ಬೆಂಬಲಿಸುವ ಮೂಲಕ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು. ಆಂಧ್ರದ ವೆಂಕಟರಮಣಪ್ಪ ಅವರನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದು ನಾನೇ. ನಾನೇ ಬೆಳೆಸಿದ ಊರುಕೆರೆ ಉಮೇಶ್‌ ಇಬ್ಬರು ಒಂದಾಗಿ ನನ್ನ ವಿರುದ್ಧವೇ ಸಮಾವೇಶ ಮಾಡುತ್ತಾರೆ. ಆಂಧ್ರದವರಾದ ವೆಂಕಟರಮಣಪ್ಪ ಅವರು ಇಲ್ಲಿ ಬಂದು ಕೆಲಸ ಮಾಡುತ್ತಾರಾ? ನಿಮ್ಮೆಲ್ಲರ ಯೋಗಕ್ಷೇಮವನ್ನು ವಿಚಾರಿಸುತ್ತಾರಾ? ಸ್ಥಳೀಯ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

Advertisement

ಜನರಿಂದ ತಕ್ಕ ಪಾಠ: ಮಾಜಿ ಶಾಸಕ ಸುರೇಶ್‌ ಗೌಡ ಮಾತನಾಡಿ, ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಮಕ್ಕಳು, ಮೊಮ್ಮೊಕ್ಕಳನ್ನು ಚುನಾವಣೆಗೆ ನಿಲ್ಲಿಸು ತ್ತಿರುವ ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ಮತದಾರರೇ ಉತ್ತರ ನೀಡಲಿದ್ದಾರೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮೋದಿ ಅವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಮತ ನೀಡುವಂತೆ ತಿಳಿಸಿದರು.

ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್‌, ನಗರ ಪಾಲಿಕೆ ಸದಸ್ಯ
ಮಂಜುನಾಥ್‌, ಮುಖಂಡ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಓಂಕಾರ್‌,
ಪುರುಷೋತ್ತಮ್‌, ರವಿ ಮಾಕಳಿ ಸೇರಿದಂತೆ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next