Advertisement

ಬೋ ಪಸಂದಾಗೈತೆ!: ಬಟ್ಟೆಗೆ BOW ಗಂಟು

09:06 AM Jun 06, 2019 | keerthan |

ಶೂ ಲೇಸ್‌ಗಳನ್ನು ಕಟ್ಟಿಕೊಳ್ಳುವಾಗ ನಾವು ಬೋ ಆಕೃತಿಯಲ್ಲಿ ಕಟ್ಟಿಕೊಳ್ಳುತ್ತೇವೆ. ಒಂದರೊಳಗೊಂದು ಸೇರಿಸಿ ಕಟ್ಟುವುದಕ್ಕೆ ಬೋ ಆಕೃತಿ ಎನ್ನುತ್ತಾರೆ. ತಲೆಗೆ ರಿಬ್ಬನ್‌ ಕಟ್ಟುವಾಗಲೂ ಅದೇ ಬೋ ಆಕೃತಿಯಲ್ಲಿ ಕಟ್ಟುತ್ತೇವೆ. ಅದೇ ಬೋ ನಂತರ ಮಹಿಳೆಯರು ಮತ್ತು ಮಕ್ಕಳ ಅಂಗಿಯಲ್ಲಿ, ಅಂಗಿಯ ತೋಳಿನಲ್ಲಿ, ಪ್ಯಾಂಟ್‌ನ ತುದಿಯಲ್ಲಿ, ಸೊಂಟಪಟ್ಟಿಯಾಗಿ, ಜೇಬುಗಳ ಮೇಲೆ, ಬ್ಯಾಗಿನಲ್ಲಿ, ಪಾದರಕ್ಷೆಗಳ ಮೇಲೆ, ಸಾಕ್ಸ್ನಲ್ಲಿ, ಇವ್‌ನಿಂಗ್‌ ಗೌನ್‌ ಮೇಲೆ, ಟೋಪಿ, ಸನ್‌ ಗ್ಲಾಸ್‌ಗಳಲ್ಲಿ, ಹೀಗೆ ನಾನಾ ಪ್ರಕಾರದ ಫ್ಯಾಷನ್‌ ಉಡುಗೆ – ತೊಡುಗೆಯಲ್ಲಿ ಕಾಣಿಸಿಕೊಳ್ಳಲು ಶುರುವಾಯಿತು. ಇದೀಗ ಅದೇ “ಬೋ’ ಫ್ಯಾಷನ್‌ಲೋಕದಲ್ಲಿ ಟ್ರೆಂಡ್‌ ಆಗುತ್ತಿದೆ.

Advertisement

ಸಮವಸ್ತ್ರದಲ್ಲೂ ಇರುತ್ತೆ
ವಿದೇಶಗಳಲ್ಲಿ ಕೆಲವು ಶಾಲಾ ಕಾಲೇಜುಗಳಲ್ಲಿ ನೆಕ್‌ ಟೈ ಬದಲಿಗೆ ಬೋ ಟೈ ಸಮವಸ್ತ್ರವಾಗಿತ್ತು. ಇಂದಿಗೂ ಜನರು ಪಾರ್ಟಿ, ಸಭೆ, ಸಮಾರಂಭ, ಮದುವೆ, ಅವಾರ್ಡ್‌ ಫ‌ಂಕ್ಷನ್‌ ಮುಂತಾದವುಗಳಿಗೆ ಈ ಬೋ ಟೈ ತೊಡುತ್ತಾರೆ. ಗಮನಿಸಿ ನೋಡಿದರೆ ಚಿಕ್ಕ ಮಕ್ಕಳ ಬಹುತೇಕ ದಿರಿಸುಗಳಲ್ಲಿ ಬೋ ಟೈ ಇದ್ದೇ ಇರುತ್ತದೆ. ಎಷ್ಟೋ ಸಲ ಅಗತ್ಯವಿಲ್ಲದೇ ಇದ್ದರೂ ದಿರಿಸನ್ನು ಚಂದಗಾಣಿಸಲು ಬೋ ಟೈಯನ್ನು ಹಾಕಿರುತ್ತಿದ್ದರು.

ಎಲ್ಲೆಲ್ಲೂ ಬೋ ಗಂಟು
ಹಲವು ಆ್ಯನಿಮೇಟೆಡ್‌ ಸಿನಿಮಾಗಳ ಪಾತ್ರಗಳೂ ಹೆಚ್ಚಾಗಿ ಬೋ ಇರುವ ಫ್ರಾಕ್‌ಗಳನ್ನು ತೊಟ್ಟಿರುತ್ತವೆ. ಈ ಚಿತ್ರಗಳನ್ನು ವೀಕ್ಷಿಸುವ ಮಕ್ಕಳು ಅಂಥದ್ದೇ ಉಡುಗೆಗಾಗಿ ಅಪ್ಪ ಅಮ್ಮಂದಿರನ್ನು ಒತ್ತಾಯ ಮಾಡುತ್ತಾರೆ. ಅಥವಾ ಸ್ವತಃ ಅಮ್ಮಂದಿರು ಅಂತ ಉಡುಗೆಯನ್ನು ಮಕ್ಕಳ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡುತ್ತಾರೆ. ಆದ್ದರಿಂದ ಮತ್ತೆ-ಮತ್ತೆ ಮರಳಿ ಬರುವ ಫ್ಯಾಷನ್‌ ಟ್ರೆಂಡ್‌ಗಳಲ್ಲಿ ಈ ಬೋ ಕೂಡ ಒಂದು!

ಮಹಿಳೆಯರ ರವಿಕೆಯಲ್ಲಿ ಬೋ ಆಕಾರದ ಗಂಟುಗಳು, ಡ್ರೆಸ್‌ನಲ್ಲಿ ಬೆನ್ನ ಮೇಲೆ ಬೋ ಆಕಾರದ ಗಂಟುಗಳು, ಭುಜದ ಮೇಲೆ ತೋಳುಗಳು ನಿಲ್ಲಲು ಬೋ ಆಕಾರದ ಗಂಟುಗಳು, ಹೊಟ್ಟೆಯ ಮೇಲ್ಭಾಗದಲ್ಲಿ ಸೊಂಟ ಪಟ್ಟಿಯಂತೆ ಕಾಣುವ ಬೋ ಆಕಾರದ ಗಂಟುಗಳು, ಕತ್ತಿನ ಕೆಳಗೆ – ಕುತ್ತಿಗೆಯ ಹಿಂದೆ ಉಡುಪನ್ನು ಭದ್ರವಾಗಿರಿಸುವ ಬೋ ಆಕಾರದ ಗಂಟುಗಳು… ಎದೆಯ ಮೇಲೆ ಟೈ ಅಂತೆಯೇ ಕಾಣುವ ಬೋ ಆಕಾರದ ಗಂಟುಗಳು, ಹೀಗೆ ದಿರಿಸಿನ ಎಲ್ಲಾ ಮೂಲೆಯಲ್ಲೂ ಬೋ ಜಾಗ ಮಾಡಿಕೊಂಡಿದೆ!

Advertisement

ಹಳತೇ ಹೊಸತು
ವಸ್ತ್ರ ವಿನ್ಯಾಸಕರೂ ಬಗೆಬಗೆಯ ಪ್ರಯೋಗ ಮಾಡಿ ವಿಭಿನ್ನವಾಗಿ ಕಾಣಲು ಉಡುಗೆಯ ಮೇಲೆ ಬೋ ಗಳನ್ನು ವಿಶಿಷ್ಟ ರೀತಿಯಲ್ಲಿ ಹೊಲಿಯುತ್ತಾರೆ. ಇಂಥ ಬಟ್ಟೆಗಳಿಗೆ ಬೇಡಿಕೆಯೂ ಹೆಚ್ಚು. ಸಿನಿಮಾ ತಾರೆಯರು, ರಾಜಕಾರಣಿಗಳು ಹಾಗು ಫ್ಯಾಷನ್‌ಪ್ರಿಯರು ಇಂಥ ಉಡುಗೆ ತೊಡುವುದರಿಂದ ವಸ್ತ್ರ ವಿನ್ಯಾಸಕಾರರಿಗೆ ಪ್ರಚಾರವೂ ಸಿಗುತ್ತದೆ. ನೀವು ಕೂಡ ಈ ರೀತಿಯ ಬೋ ಆಕೃತಿ ಉಳ್ಳ ಉಡುಗೆ ತೊಡುವುದನ್ನು ಇಷ್ಟ ಪಡುತ್ತೀರಾ ಎಂದಾದರೆ ತಡ ಮಾಡಬೇಕಿಲ್ಲ. ಹಳೆಯ ಟ್ರೆಂಡ್‌ ಎಂದು ಕಪಾಟಿನೊಳಗೆ ಇಟ್ಟಿದ್ದ ಬೋ ಆಕೃತಿಯುಳ್ಳ ದಿರಿಸುಗಳನ್ನು ಹೊರತೆಗೆದು ಶೋ ಆಫ್ ಮಾಡುವ ಸಮಯ ಬಂದಿದೆ.

ಮಿನ್ನಿ ಮೌಸ್‌ ಟ್ರೇಡ್‌ಮಾರ್ಕ್‌
ಚಿಕ್ಕಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್ ಪಾತ್ರವಾಗಿದ್ದ ಮಿನ್ನಿ ಮೌಸ್‌ ಕೂಡ ಬಿಳಿ ಚುಕ್ಕೆಗಳಿದ್ದ ಕೆಂಪು ಬಣ್ಣದ ಬೋ ತೊಡುತ್ತಿತ್ತು. ಹಾಗಾಗಿ ಪುಟ್ಟ ಮಕ್ಕಳ ಹೇರ್‌ ಬ್ಯಾಂಡ್‌, ಕ್ಲಿಪ್‌, ರಿಬ್ಬನ್‌ ಮತ್ತಿತರ ಆಕ್ಸೆಸರೀಸ್‌ನಲ್ಲಿ ಬೋ ಇದ್ದೇ ಇರುತ್ತಿತ್ತು. ಅಲ್ಲದೆ, ಈ ಬೋ ವಿನ್ಯಾಸ ಬಹಳಷ್ಟು ಜನಪ್ರಿಯವೂ ಆಗಿತ್ತು.

ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next