ಮಹಾರಾಷ್ಟ್ರ: ಮುಂಬೈನ ರಾಜ್ ಕೋಟ್ ನಲ್ಲಿ ನಿರ್ಮಾಣ ಮಾಡಿದ್ದ ದಂತಕಥೆ ಆಡಳಿತಗಾರ, ಛತ್ರಪತಿ ಶಿವಾಜಿಯ ಪ್ರತಿಮೆ ಕುಸಿದು ಬಿದ್ದಿರುವ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು (ಆ.30ಶುಕ್ರವಾರ) ತಾನು, ಛತ್ರಪತಿ ಶಿವಾಜಿಯ ಪಾದಕ್ಕೆ ತಲೆಬಾಗಿಸಿ, ಎಲ್ಲರ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
ಶಿವಾಜಿ ಪ್ರತಿಮೆ ಕುಸಿದು ಬಿದ್ದಿರುವುದಕ್ಕೆ ನಾನು ಮೊದಲು ಎಲ್ಲರ ಕ್ಷಮೆಯಾಚಿಸುವುದಾಗಿ ಮಹಾರಾಷ್ಟ್ರದ ಪಾಲ್ಗರ್ ನಲ್ಲಿ ತಿಳಿಸಿದರು. ಛತ್ರಪತಿ ಶಿವಾಜಿ ಮಹಾರಾಜರನ್ನು ತಮ್ಮ ಆರಾಧ್ಯ ದೈವ ಎಂದು ಪರಿಗಣಿಸಿದವರಿಗೆ ತುಂಬಾ ನೋವಾಗಿದೆ. ಈ ಸಂದರ್ಭದಲ್ಲಿ ನಾನು ನನ್ನ ತಲೆಬಾಗಿಸಿ, ನಿಮ್ಮ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ನಮ್ಮ ಮೌಲ್ಯಗಳು ಭಿನ್ನವಾಗಿರಬಹುದು. ಆದರೆ ನಮಗೆ ನಮ್ಮ ಆರಾಧ್ಯ ಪುರುಷನಿಗಿಂತ ಮಿಗಿಲಾದದ್ದು ಬೇರೇನೂ ಇಲ್ಲ ಎಂದು ಪ್ರಧಾನಿ ತಿಳಿಸಿದರು.
ಕಳೆದ ವರ್ಷ ಡಿಸೆಂಬರ್ ನಲ್ಲಿ ನೌಕಾ ದಿನಾಚರಣೆ ಸಂಭ್ರಮದಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಜಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ಮರಾಠ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಗೌರವಾರ್ಥವಾಗಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ ಈ ಪ್ರತಿಮೆ ಇತ್ತೀಚೆಗೆ ಕುಸಿದು ಬಿದ್ದು ಹೋಗಿತ್ತು, ವಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದವು.