Advertisement

ಗೋವಿನ ಜೋಳಕ್ಕೆ ಲದ್ದಿಹುಳು ಕಾಟ

08:54 PM Jul 14, 2021 | Team Udayavani |

ಲಕ್ಷ್ಮೇಶ್ವರ: ಇತ್ತೀಚಿನ ದಿನಗಳಲ್ಲಿ ರೈತರ ಎಲ್ಲ ಬೆಳೆಗಳೂ ಬೆನ್ನಿಗೆ ಬಿಡದ ಬೇತಾಳದಂತೆ ಕೀಟಬಾಧೆ, ರೋಗಬಾಧೆಗೆ ತುತ್ತಾಗುತ್ತಿದ್ದು, ಬೆಳೆ ಸಂರಕ್ಷಣೆಗೆ ಕ್ರಿಮಿನಾಶಕ ಸಿಂಪಡಣೆಯೇ ಅನಿವಾರ್ಯವಾಗಿದೆ.

Advertisement

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿನ ಹೆಸರು ಬೆಳೆಗೆ ಹಳದಿ ರೋಗಬಾಧೆ, ಶೇಂಗಾಕ್ಕೆ ಸುರುಳಿಪೂಚಿ, ಇದೀಗ ಗೋವಿನ ಜೋಳಕ್ಕೆ ಲದ್ದಿಹುಳು ಕಾಟ ಶುರುವಾಗಿದೆ. ಆಳಿನ ಸಮಸ್ಯೆಯಾಗದು, ಕಡಿಮೆ ಖರ್ಚು, ನಿರ್ವಹಣೆ ಸುಲಭ ಎಂಬ ಕಾರಣದಿಂದ ತಾಲೂಕಿನ ಬಹುತೇಕ ರೈತರು ಗೋವಿನಜೋಳ ಬೆಳೆಗೆ ಮಾರು ಹೋಗಿದ್ದಾರೆ. ಪರಿಣಾಮ ಲಕ್ಷ್ಮೇಶ್ವರ ತಾಲೂಕಿನ ಲಕ್ಷ್ಮೇಶ್ವರ, ದೊಡೂxರ, ಶಿಗ್ಲಿ, ಸೂರಣಗಿ, ಬಡ್ನಿ, ಅಡರಕಟ್ಟಿ, ಬಾಲೆಹೊಸೂರ, ಉಂಡೇನಹಳ್ಳಿ, ಯಲ್ಲಾಪುರ ಸೇರಿ ಒಟ್ಟು 9000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಒಟ್ಟು 30 ಸಾವಿರ ಹೆಕ್ಟೇರ್‌ ಪ್ರದೇಶದ ಬಿತ್ತನೆ ಕ್ಷೇತ್ರದಲ್ಲಿ ಗೋವಿನಜೋಳದ್ದೇ ಸಿಂಹಪಾಲು. ಜೂನ್‌ ಮೊದಲ ವಾರದಲ್ಲಿ ಬಿತ್ತನೆಯಾಗಿರುವ ಬೆಳೆ ಈಗ 40 ದಿನಗಳ ಕಾಲಾವಧಿಯದ್ದಾಗಿದೆ . ಹದವರ್ತಿ ಮಳೆ, ಎಡೆ ಹೊಡೆದು ರಸಗೊಬ್ಬರ ಹಾಕಿರುವ ಬೆಳೆಗೆ ಲದ್ದು ಹುಳುವಿನ ಬಾಧೆ ಆವರಿಸಿರುವುದು ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವ ರೈತರ ನಿರೀಕ್ಷೆ ಹುಸಿಗೊಳಿಸಿದೆ. ಕಳೆದ ವರ್ಷ ಕೃಷಿಯಲ್ಲಿ ಹಾನಿ ಅನುಭವಿಸಿದ್ದರೂ ಹೊಸ ಭರವಸೆಯೊಂದಿಗೆ ಸಾಲಶೂಲ ಮಾಡಿ ಮತ್ತೇ ಭೂಮಿತಾಯಿಗೆ ಉಡಿ ತುಂಬಿರುವ ರೈತರು ಚಿಂತೆಗೀಡಾಗಿದ್ದಾರೆ. ಬೆಳೆ ಉಳಿಸಿಕೊಳ್ಳಲು ಸಾವಿರಾರು ರೂ. ಖರ್ಚು ಮಾಡಿ ಕ್ರಿಮಿನಾಕಶಕ ಸಿಂಪಡಣೆಗೆ ಮೊರೆ ಹೋಗಿದ್ದಾರೆ.

ಈಗಾಗಲೇ ಪ್ರತಿ ಎಕರೆಗೆ ಬೀಜ, ಗೊಬ್ಬರ, ಆಳು, ಗಳೆ ಸೇರಿ ಹತ್ತಾರು ಸಾವಿರ ರೂ. ಖರ್ಚು ಮಾಡಿದ್ದು, ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಟ್ಟಿನಲ್ಲಿ ಮಳೆ ಕೊರತೆ, ಬೆಳೆಹಾನಿ, ಬೆಲೆ ಕುಸಿತ, ಕೀಟಬಾಧೆ ಹೀಗೆ ಹತ್ತಾರು ಸಮಸ್ಯೆಗಳು ರೈತರ ಪಾಲಿಗೆ ತಪ್ಪದ ಗೋಳಾಗಿದೆ. ಹೀಗಾದರೆ ರೈತ ಬದುಕುವುದಾದರೂ ಹೇಗೆ ಎಂಬುದು ರೈತರಾದ ದೇವಣ್ಣ ತೋಟದ, ಶಿವಾನಂದ ಮೂಲಿಮನಿ, ಹಾಲಪ್ಪ ಹಂಗನಕಟ್ಟಿ, ನಿಂಗಪ್ಪ ಟೋಕಾಳಿ ಅವರ ಅಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next