Advertisement

ಗೋವಿನ ಜೋಳದ್ದೇ ಸಿಂಹಪಾಲು

11:57 AM Aug 03, 2019 | Suhan S |

ಹಾನಗಲ್ಲ: ತಾಲೂಕಿನ ಕೃಷಿ ಚಟುವಟಿಕೆಗಳಿಗೆ ಮಳೆಯ ಕೊರತೆ ಕಾಡುತ್ತಿದೆಯೇ ಹೊರತು ರಸಗೊಬ್ಬರದ ಕೊರತೆ ಕಾಣಿಸಿಕೊಂಡಿಲ್ಲ. ಗೋವಿನ ಜೋಳಕ್ಕೆ ಲದ್ದಿ ಹುಳದ ಬಾಧೆ ಕಾಡುತ್ತಿದೆ ಆದರೂ ಹತೋಟಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Advertisement

ತಾಲೂಕಿನ 49183 ಹೆಕ್ಟೇರ್‌ ಕೃಷಿ ಕ್ಷೇತ್ರದಲ್ಲಿ ಶೇ.78.91ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. 8 ಸಾವಿರ ಹೆಕ್ಟೇರ್‌ ಭತ್ತದ ನಾಟಿಗೆ ಸಿದ್ಧಗೊಳ್ಳುತ್ತಿದೆ. ಆದರೆ ಮಳೆಯ ವಿಷಯದಲ್ಲಿ ರೈತ ವಿಶ್ವಾಸ ಕಳೆದುಕೊಂಡಿದ್ದು, ಆತಂಕದಲ್ಲಿಯೇ ಕೃಷಿ ಚಟುವಟಿಕೆಗಳಲ್ಲಿ ತಲ್ಲೀನನಾಗಿದ್ದಾನೆ.

ಹಾನಗಲ್ಲ ತಾಲೂಕು ವಿಶೇಷವಾಗಿ ಶೇ.80ರಷ್ಟು ಭತ್ತ ಬೆಳೆಯುವ ನಾಡು. ಆದರೆ ದಶಕಗಳಿಂದ ಮಳೆಯ ವಿರಳತೆ ಹಾಗೂ ಅನಿಶ್ಚಿತತೆಯಿಂದಾಗಿ ಹೆಚ್ಚು ಮಳೆಯಾಶ್ರಿತ ಭತ್ತದ ಬೆಳೆಯಿಂದ ವಿಮುಖನಾಗಿ ರೈತರು ಗೋವಿನಜೋಳ, ಶೇಂಗಾ, ದ್ವಿದಳಧಾನ್ಯ, ಸೋಯಾ ಅವರೆ ಸೇರಿದಂತೆ ವಿವಿಧ ದ್ವಿದಳ ಧಾನ್ಯ ಬೆಳೆಯಲು ಮುಂದಾಗಿದ್ದಾರೆ.

ತಾಲೂಕಿನಲ್ಲಿ ಈಗ ಭತ್ತದ ಸ್ಥಾನವನ್ನು ಹಿಂದಿಕ್ಕೆ ಗೋವಿನಜೋಳ ಹೆಚ್ಚು ಕ್ಷೇತ್ರದಲ್ಲಿ ಕೃಷಿಗೊಳಪಟ್ಟಿದೆ. ಪ್ರಸ್ತುತ ವರ್ಷ 17530 ಹೆಕ್ಟೇರ್‌ನಲ್ಲಿ ಗೋವಿನಜೋಳ ಬಿತ್ತನೆಯಾಗಿದ್ದರೆ, ಭತ್ತ ಕೇವಲ 14265 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. 2352 ಹೆಕ್ಟೇರ್‌ ಸೋಯಾ ಅವರೆ, 3271 ಹೆಕ್ಟೇರ್‌ ಹತ್ತಿ, 885 ಹೆಕ್ಟೇರ್‌ ಕಬ್ಬು, 442 ಹೆಕ್ಟೇರ್‌ ಶೇಂಗಾ ಹಾಗೂ ದ್ವಿದಳ ಧಾನ್ಯಗಳು ಸೇರಿದಂತೆ ಇತರ ಕೃಷಿಗೆ ರೈತ ಮುಂದಾಗಿದ್ದಾನೆ.

ಗೋವಿನಜೋಳಕ್ಕೆ ಕೆಲವೆಡೆ ಲದ್ದಿಹುಳು ಆಕ್ರಮಣ ಮಾಡಿದೆ. ಇನ್ನು ಕೆಲವೆಡೆ ಮಳೆಯ ಅಭಾವ ಕಾರಣದಿಂದಾಗಿ ಭತ್ತದ ಜಮೀನಿಗೆ ಗೋವಿನಜೋಳ ಬಿತ್ತಿದ್ದರಿಂದ ಕೊಳೆ ರೋಗ ಕಾಣಿಸಿಕೊಂಡಿದೆ. ಉಳಿದ ಬೆಳೆಗಳು ಸುರಕ್ಷಿತವಾಗಿವೆ.

Advertisement

ಮುಂಗಾರು ತಡವಾಗಿ ಆರಂಭವಾಗಿದ್ದರಿಂದ ಕೆರೆ-ಕಟ್ಟೆಗಳು ಖಾಲಿ ಖಾಲಿ ಇವೆ. ಧರ್ಮಾ ಹಾಗೂ ವರದಾ ನದಿಗಳು ಒಂದಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿವೆ. ಆದರೆ ರೈತ ಆತಂಕದಲ್ಲಿಯೇ ಮುಂದಿನ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾನೆ. ಕಳೆದ ದಶಕಗಳಿಂದ ಈ ರೀತಿಯ ಆತಂಕದಲ್ಲಿಯೇ ರೈತ ಕಾಲ ಕಳೆಯಬೇಕಾಗಿದೆ.

ತಾಲೂಕಿನಲ್ಲಿ ರಸಾಯನಿಕ ಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಹೇಳಿದೆ. ತಾಲೂಕಿನಲ್ಲಿ 63 ಪರವಾನಿಗೆ ಹೊಂದಿದ ರಸಗೊಬ್ಬರ ಮಾರಾಟ ಅಂಗಡಿಗಳಿವೆ. ತಾಲೂಕಿನಲ್ಲಿರುವ 27 ಸೊಸೈಯಿಟಿಗಳಲ್ಲಿ ರಸಗೊಬ್ಬರ ಮಾರಾಟಕ್ಕೆ 12 ಸೊಸೈಯಿಟಿಗಳು ಪರವಾನಿಗೆ ಪಡೆದಿವೆ. ಆದರೆ 4 ಸೊಸೈಯಿಟಿಗಳಲ್ಲಿ ಮಾತ್ರ ಗೊಬ್ಬರ ಮಾರಾಟ ನಡೆಯುತ್ತಿದೆ. ಪ್ರಸ್ತುತ ಕೃಷಿ ವರ್ಷಕ್ಕೆ 5151 ಟನ್‌ ಡಿಎಪಿ, 6842 ಟನ್‌ ಯೂರಿಯಾ, 3882 ಟನ್‌ ಕಾಂಪ್ಲೆಕ್ಷ್, 1665 ಟನ್‌ ಪೋಟ್ಯಾಸ್‌ ಸೇರಿದಂತೆ 17540 ಟನ್‌ ಗೊಬ್ಬರಬೇಕೆಂದು ಅಂದಾಜಿಸಲಾಗಿದ್ದು, ತಾಲೂಕಿನಲ್ಲಿ ಎಲ್ಲಿಯೂ ರಸಗೊಬ್ಬರದ ಕೊರತೆ ಕಾಣಿಸಿಕೊಂಡಿಲ್ಲ ಎಂಬುದು ಕೃಷಿ ಇಲಾಖೆ ಮಾಹಿತಿ.

 

•ರವಿ ಲಕ್ಷ್ಮೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next