ಚನ್ನರಾಯಪಟ್ಟಣ: ರಾಜ್ಯದ ಗಡಿ ಭಾಗದ ಒಂದು ಇಂಚು ಭೂಮಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಒಂದು ವೇಳೆ ಇದಕ್ಕೆ ಆಸೆ ಪಟ್ಟರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಚಿಕ್ಕೋನಹಳ್ಳಿಯ ಸಾಯಿಮಂದಿರಕ್ಕೆ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ಬೆಳಗಾವಿ ಜನರಿಗೆ ತೊಂದರೆ ನೀಡಲು ಮುಂದಾಗುತ್ತಿದೆ. ಇದನ್ನು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಸಹಿಸುವುದಿಲ್ಲ. ಈಗಾಗಲೇ ತಮಿಳುನಾಡಿಲ್ಲಿ ಕನ್ನಡ ಬಾವುಟ ಹಾಕಿಕೊಂಡು ಸಂಚಾರ ಮಾಡುವ ವಾಹನ ಚಾಲಕರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುವ ಮೂಲಕ ಶಿವಸೇನೆ ತನ್ನ ಪುಂಡಾಟ ಪ್ರಾರಂಭಿಸಿದೆ. ಬಿಜೆಪಿ ಸರ್ಕಾರ ಭಾಷೆ, ನೆಲ, ಜಲ ರಕ್ಷಣೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ರಾಜ್ಯಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ದವಾಗಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಗೋಕಾಕ್ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೋಳಿಯವರು ಶಾಸಕಿ ಲಕ್ಷ್ಮೀಹೆಬ್ಟಾಳ್ಕರ್ ವಿರುದ್ಧ ಮರಾಠಿ ಸಮುದಾಯದವರು ಅಭ್ಯರ್ಥಿಯಾಗುವುದಾದರೆ ಐದು ಕೋಟಿ ರೂ.ಕೊಡುತ್ತೇನೆ ಎಂದು ಹೇಳಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹೇಳಿಕೆ ನಿಜವಾದರೆ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ವೈದ್ಯರ ನೇಮಕಾತಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಎರಡು ತಿಂಗಳೊಳಗೆ ವೈದ್ಯರು ಹಾಗೂ ನರ್ಸ್‌ಗಳ ನೇಮಕ ಮಾಡಲಾಗುವುದು. ಈಗಾಗಲೆ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದ್ದು, ಸುಮಾರು ಎರಡು ಸಾವಿರ ವೈದ್ಯರ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ ಅಗತ್ಯ ಇರುವ ಕಡೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು. ಈಗಾಗಲೆ ಕೇಂದ್ರ ಸರ್ಕಾರ ಎಂಟು ಮೆಡಿಕಲ್ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಮಂಜೂರು ಮಾಡಿದೆ. ರಾಜ್ಯದ ಹೋಬಳಿ ಕೇಂದ್ರದಲ್ಲಿಯೂ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು.
ನಮ್ಮ ಸಮುದಾಯದವರು ಶ್ರೀರಾಮುಲು ಮುಖ್ಯಮಂತ್ರಿ ಆಗಬೇಕು ಎಂದು ಒತ್ತಡ ಹೇರುತ್ತಾರೆ. ಇದರಲ್ಲಿ ತಪ್ಪೇನಿದೆ? ನಾನು ಬಿಜೆಪಿಗೆ ಎಂದಿಗೂ ದ್ರೋಹ ಮಾಡುವುದಿಲ್ಲ. ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಮನವಿ ಮಾಡಿದ್ದೇನೆಯೇ ಹೊರತು ಲಾಬಿ ಮಾಡಲು ಹೋಗುವುದಿಲ್ಲ.
– ಶ್ರೀರಾಮುಲು, ಆರೋಗ್ಯ ಸಚಿವ