Advertisement

Boult Striker +: ಬಜೆಟ್ ದರದ ಸ್ಮಾರ್ಟ್ ಕೈಗಡಿಯಾರ

04:12 PM Oct 31, 2023 | Team Udayavani |

ಬೌಲ್ಟ್ ಯುವ ವರ್ಗಕ್ಕೆ ಸೂಕ್ತವಾದ ಬಜೆಟ್ ಸ್ನೇಹಿ ಆಯ್ಕೆಗಳಿಗೆ ಹೆಸರುವಾಸಿಯಾದ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿದೆ. ಇದು ಇತ್ತೀಚಿಗೆ ಹೊರತಂದಿರುವ ಬೌಲ್ಟ್ ಸ್ಟ್ರೈಕರ್ ಪ್ಲಸ್ ಮಾದರಿಯ ಮಾಹಿತಿ ಇಲ್ಲಿದೆ.

Advertisement

ಆರಂಭಿಕ ದರ್ಜೆಯ ಕೈಗೆಟುಕುವ ದರದ ಸ್ಮಾರ್ಟ್ ವಾಚ್ ಆಗಿದ್ದು, ಆಕರ್ಷಕ ವಿನ್ಯಾಸ, ಫೋನ್ ಗಳಿಗೆ ಬರುವ ನೊಟಿಫಿಕೇಷನ್, ದೀರ್ಘ ಬ್ಯಾಟರಿ ಬಾಳಿಕೆ ಹೊಂದಿದೆ.

ಇದರ ದರ ಫ್ಲಿಪ್ಕಾರ್ಟ್ ನಲ್ಲಿ 1,499 ರೂ. ಇದೆ. ಕಪ್ಪು, ನೀಲಿ, ಕ್ರೀಂ, ಹಸಿರು, ಬೂದು, ಬಿಳಿ ಬಣ್ಣ9ಗಳಲ್ಲಿ ದೊರಕುತ್ತದೆ. ಈ ಸ್ಮಾರ್ಟ್ ವಾಚಿನ ವಿಶೇಷಣಗಳ ಇಂತಿವೆ.

ವಿನ್ಯಾಸ: ಗಡಿಯಾರವು 1.39-ಇಂಚಿನ ವೃತ್ತಾಕಾರದ ಡಿಸ್ ಪ್ಲೇ ಹೊಂದಿದ್ದು, ಝಿಂಕ್ ಅಲಾಯ್ ಫ್ರೇಂ ಹೊಂದಿದೆ.  ಮೃದುವಾದ, ದಪ್ಪವಾದ ಸಿಲಿಕಾನ್ ಸ್ಟ್ರಾಪ್ ಹೊಂದಿದ್ದು, ನಮ್ಮ ಕೈ ಅಳತೆಗೆ ಹೊಂದಿಸಿಕೊಳ್ಳಲು ರಂಧ್ರಗಳನನ್ನು ನೀಡಲಾಗಿದೆ. ಬಲಭಾಗವು ವಿವಿಧ ಕಾರ್ಯಗಳನ್ನು ನಿರ್ಹಹಿಸುವ  ಕ್ರೌನ್ ಬಟನ್ ಅನ್ನು ಹೊಂದಿದೆ, ಆದರೆ ಕೆಳಭಾಗವು ಸಂವೇದಕಗಳು ಮತ್ತು ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ತಾಮ್ರದ ಬಣ್ಣದ ಕ್ರೌನ್ ಬಟನ್ ಟ್ಯಾಪ್ಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಚೆನ್ನಾಗಿ ಕೆಲಸ ನಿರ್ವಹಿಸುತ್ತದೆ.  ಇದು IP67 ನೀರು ಮತ್ತು ಧೂಳು-ನಿರೋಧಕವಾಗಿದ್ದು ಹೊರಾಂಗಣದಲ್ಲಿ ಧರಿಸಲು ಸೂಕ್ತವಾಗಿದೆ. ವಾಚು ದಪ್ಪ ಇಲ್ಲ. ಕೇವಲ 30 ಗ್ರಾಂ ತೂಕ ಇದ್ದು, 10 ಎಂಎಂ ಮಂದ ಇದೆ. ಸ್ಲಿಮ್ ಆಗಿ, ಆಕರ್ಷಕವಾಗಿ ಕಾಣುತ್ತದೆ.

ಡಿಸ್ ಪ್ಲೇ: ನೇರ ಸೂರ್ಯನ ಬೆಳಕಿನಲ್ಲಿ ಬಳಸಲು 1.39-ಇಂಚಿನ ಎಚ್. ಡಿ.  ಪರದೆ ಹೊಂದಿದೆ. 3.5 ಸೆ.ಮೀ. ವೃತ್ತಾಕಾರದ ಪರದೆ ಹೊಂದಿದೆ. ಪರದೆಯು 350nits ಗರಿಷ್ಠ ಪ್ರಕಾಶಮಾನವಾಗಿದ್ದು ಬಿಸಿಲಿನಲ್ಲೂ ಪರದೆ ಸ್ಪಷ್ಟವಾಗಿ ಕಾಣುತ್ತದೆ.

Advertisement

ಕಾರ್ಯಕ್ಷಮತೆ: ಇದರಲ್ಲಿ ಬ್ಲೂ ಟೂತ್ ಮೂಲಕ ಕರೆ ಮಾಡಬಹುದು. ಸಾಮಾನ್ಯವಾಗಿ (ಯಾವುದೇ ಬ್ರಾಂಡಿನ) ಸ್ಮಾರ್ಟ್ ವಾಚ್ ಅನ್ನು ಹೊಸದಾಗಿ ಖರೀದಿಸುವವರು ಇದರಲ್ಲಿ ಕರೆ ಮಾಡುವ ಸೌಲಭ್ಯ ಇದೆಯೇ ಎಂದು ಕೇಳುತ್ತಾರೆ. ಇಸಿಮ್ ಹಾಕಿಕೊಂಡು ಕರೆ ಮಾಡಬಹುದಾದ ವಾಚ್‌ ಗಳ ದರ ತುಂಬಾ ದುಬಾರಿಯಾಗಿದೆ. ಬಜೆಟ್ ವಾಚ್ಗಳಲ್ಲಿ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಇರುತ್ತದೆ. ಆದರೆ ಇದರಿಂದ ಹೆಚ್ಚೇನೂ ಪ್ರಯೋಜನವಿಲ್ಲ. ವಾಚನ್ನು ಕಿವಿಯ ಬಳಿ ತೆಗೆದುಕೊಂಡು ಹೋಗಿ ಅಥವಾ ಸ್ಪೀಕರ್ ಆನ್ ಮಾಡಿ ಮಾತನಾಡುವುದು ಎರಡೂ ದ್ರಾವಿಡ ಪ್ರಾಣಾಯಾಮವೇ! ವಾಚಿನಲ್ಲಿ ಬ್ಲೂಟೂತ್ ಕರೆ ಸೌಲಭ್ಯ ಬಯಸುವ ಬದಲು, ಒಂದು ಒಳ್ಳೆಯ ಇಯರ್ ಬಡ್ ಇಟ್ಟುಕೊಂಡು ಮಾತನಾಡುವುದು ಒಳ್ಳೆಯದು. ಇರಲಿ, ಈ ವಾಚ್ನಲ್ಲಿ ಬ್ಲೂಟೂತ್ ಕರೆ ಸೌಲಭ್ಯವಂತೂ ಇದೆ. ಅದಕ್ಕಾಗಿ ಸ್ಪೀಕರ್ ಮತ್ತು ಮೈಕ್ ನೀಡಲಾಗಿದೆ.

ಬೌಲ್ಟ್ ಸ್ಟ್ರೈಕರ್ ಪ್ಲಸ್ ಹೃದಯ ಬಡಿತ ಮಾನಿಟರಿಂಗ್, SpO2  ಆಮ್ಲಜನಕ ಮಟ್ಟದ ಮಾಪನ, ಸ್ತ್ರೀಯರ ಋತುಚಕ್ರ ಟ್ರ್ಯಾಕಿಂಗ್ ಇತ್ಯಾದಿ ಸೌಲಭ್ಯ ಒಳಗೊಂಡಿದೆ.

ಈ ವಾಚ್  ಓಟ, ಕ್ರಿಕೆಟ್, ಯೋಗ, ಇತ್ಯಾದಿ ಚಟುವಟಿಕೆಗಳ ಮಾಪನಕ್ಕೆ ಅವಕಾಶ ಕಲ್ಪಿಸುತ್ತದೆ. ಇದು ವಿವಿಧ ವಾಚ್ ಫೇಸ್ಗಳನ್ನು ಹೊಂದಿದೆ ಮತ್ತು ಕೆಳಗೆ ಸ್ವೈಪ್ ಮಾಡುವ ಮೂಲಕ ಪ್ರವೇಶಿಸಬಹುದಾದ ಶಾರ್ಟ್ಕಟ್ಗಳನ್ನು ಹೊಂದಿದೆ. ಎಡಕ್ಕೆ ಸ್ವೈಪ್ ಮಾಡುವುದರಿಂದ ಕ್ರೀಡಾ ವಿಧಾನಗಳನ್ನು ಆಯ್ಕೆ ಮಾಡಬಹುದು. ಬಲಕ್ಕೆ ಸ್ವೈಪ್ ಮಾಡುವ ಮೂಲಕ ಡಯಲರ್, ಸಂಪರ್ಕಗಳು ಮತ್ತು ಇತ್ತೀಚಿನ ಕರೆಗಳ ಇತಿಹಾಸ ನೋಡಬಹುದು.

ಕೈಯನ್ನು ಮೇಲೆತ್ತಿ ನೋಡಿದಾಗ ಪರದೆ ತೆರೆದುಕೊಳ್ಳುವ ರೈಸ್-ಟು-ವೇಕ್ ತಂತ್ರಜ್ಞಾನ ಶೇ. 80ರಷ್ಟು ಸಮಯ ಕೆಲಸ ಮಾಡುತ್ತದೆ. ಬಜೆಟ್ ದರದ ವಾಚ್ಗಳಲ್ಲಿ ಇದು ಸಾಮಾನ್ಯ.  150ಕ್ಕಿಂತಲೂ ಹೆಚ್ಚು ಕ್ಲೌಡ್ ಆಧಾರಿತ ವಾಚ್ ಫೇಸ್ ಗಳು, 120ಕ್ಕಿಂತಲೂ ಹೆಚ್ಚು ಕ್ರೀಡಾ ಬಗೆಗಳನ್ನು ಇದರಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಫೋನ್ ಗೆ ಬಂದ ಎಸ್ಎಂಎಸ್, ಸಾಮಾಜಿಕ ಜಾಲ ತಾಣಗಳ ನೊಟಿಫಿಕೇಷನ್, ಸೆಡೆಂಟರಿ ಹಾಗೂ ಕುಡಿಯುವ ನೀರು ನೆನಪಿಸುವ ಆಯ್ಕೆಗಳಿವೆ.

ಬ್ಯಾಟರಿ: ಬೌಲ್ಟ್ ಸ್ಟ್ರೈಕರ್ ಪ್ಲಸ್ ಸಾಧಾರಣ ಬಳಕೆಗೆ ಸುಮಾರು ಐದರಿಂದ  ಆರು ದಿನ ಬಾಳಿಕೆ ಬರುವ  ಬ್ಯಾಟರಿ ಹೊಂದಿದೆ.

ಒಟ್ಟಾರೆ, ವಿದ್ಯಾರ್ಥಿಗಳಿಗೆ, ಒಂದೂವರೆ ಸಾವಿರದಲ್ಲಿ ಆಕರ್ಷಕ ವಿನ್ಯಾಸದ ಸ್ಮಾರ್ಟ್ ವಾಚ್ ಬೇಕೆನ್ನುವವರು ಬೌಲ್ಟ್ ಸ್ಟ್ರೈಕರ್ ಪ್ಲಸ್ ಅನ್ನು ಸಹ ಪರಿಗಣಿಸಬಹುದು.

-ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next