ಹ್ಯಾಮಿಲ್ಟನ್ : ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಮಾರಕ ದಾಳಿಗೆ ಟೀಮ್ ಇಂಡಿಯಾ ಬ್ಯಾಟ್ಸಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಇಲ್ಲಿನ ಸೆಡ್ದಾನ್ ಪಾರ್ಕ್ ಅಂಗಳದಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸಂಕಷ್ಟದಲ್ಲಿದೆ. 30.5 ಓವರ್ ನಲ್ಲಿ ಭಾರತ 92 ರನ್ ಗಳಿಗೆ ಅಲ್ ಔಟ್ ಆಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ನ್ಯೂಜಿಲ್ಯಾಂಡ್ ನಿಖರ ದಾಳಿಗೆ ಭಾರತೀಯ ಬ್ಯಾಟ್ಸಮನ್ ಗಳು ಪರದಾಡಿದರು. ಕಿವೀಸ್ ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಕಾಲಿನ್ ಡಿ ಗ್ರಾಂಡ್ ಹೋಂ ಅದ್ಭುತ ದಾಳಿ ನಡೆಸಿದರು. ಬೌಲ್ಟ್ ಐದು ವಿಕೆಟ್ ಪಡೆದು ಮಿಂಚಿದರು.
ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ ರೋಹಿತ್ ಶರ್ಮಾ , ಮೊದಲ ಪಂದ್ಯ ಆಡಲಿಳಿದ ಶುಭ್ಮನ್ ಗಿಲ್, ಶಿಖರ್ ಧವನ್ , ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಂದ್ಯ ಬೌಲ್ಟ್ ದಾಳಿಗೆ ಬಲಿಯಾದರು. ಗ್ರಾಂಡ್ ಹೋಂ ಮೂರು ವಿಕೆಟ್ ಪಡೆದರು.
ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು ಮತ್ತು ಕೀಪರ್ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿದರು. ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿದರು.
ಮಾನ ಕಾಪಾಡಿದ ಕುಲದೀಪ್, ಚಾಹಲ್: 55 ರನ್ ಗೆ ಎಂಟು ವಿಕೆಟ್ ಕಳೆದುಕೊಂಡು ಮುಜುಗರಕ್ಕೀಡಾಗುವ ಪರಿಸ್ಥಿತಿ ಭಾರತ ತಂಡದಾಗಿತ್ತು.
ಬ್ಯಾಟ್ಸಮನ್ ಗಳು ಕ್ರೀಸ್ ಕಚ್ಚಿ ನಿಲ್ಲಲು ಪರದಾಡುತ್ತಿದ್ದರೆ, ಸ್ಪಿನ್ ದ್ವಯರಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ 9 ನೇ ವಿಕೆಟ್ ಗೆ 25 ರನ್ ಕಲೆಹಾಕಿದರು. ಇದು ಭಾರತೀಯ ಇನ್ನಿಂಗ್ಸ್ ನ ಅತಿ ದೊಡ್ಡ ಪಾರ್ಟ್ನರ್ ಶಿಪ್. ಕುಲದೀಪ್ 15 ರನ್ ಗಳಿಸಿ ಔಟ್ ಆದರು. ಚಾಹಲ್ 18 ರನ್ ಗಳಿಸಿ ತಂಡ ಹೈಯೆಸ್ಟ್ ರನ್ ಗಳಿಸಿದರು.