ಮುಂಬಯಿ: ಒಲಿದ ಕಲೆಯನ್ನು ಸಮರ್ಥವಾಗಿ ಬೆಳೆಸುವುದು ಕಲೆಯೇ ಆಗಿದೆ. ಲಯ, ಜ್ಞಾನ, ಸಾಹಿತ್ಯ ಇಂಪಾದ ಕಂಠ, ಸ್ವರದಲ್ಲಿನ ಏರಿಳಿತಗಳ ಮೂಲಕ ಯಕ್ಷಗಾನ ಕ್ಷೇತ್ರದ ಭಾಗವತಿಕೆಯಲ್ಲಿ ಮಿಂಚುವ ಅಪರೂಪದ ತಾರೆ ಕಾವ್ಯಶ್ರೀ ಅಜೇರು. ರಾಗಗಳ ಆರೋಹಣ, ಅವರೋಹಣ, ಸಂಗೀತ ಶಾಸ್ತÅದ ಜ್ಞಾನದ ತಾಳ, ಒಂದೇ ತಾಳದಲ್ಲಿ ವಿವಿಧ ಮಟ್ಟುಗಳು ಹಾಗೂ ಪದ್ಯಗಳಲ್ಲಿನ ನಡೆ ಬದಲಾವಣೆ ಅವರ ವೈಶಿಷ್ಟÂವಾಗಿದೆ. ವಾಟ್ಸಾಪ್, ಫೇಸ್‌ಬುಕ್ ತಂತ್ರಜ್ಞಾನಗಳ ಇಂದಿನ ಯುಗದಲ್ಲಿ ಯಕ್ಷಗಾನ ಸಂಪ್ರದಾಯಬದ್ಧ ಹಾಡುಗಾರಿಕೆಯಲ್ಲಿ ಅವರು ಪ್ರಗತಿ ಸಾಧಿಸುತ್ತಿರುವುದು ಪುರಾತನ ಸಂಸ್ಕೃತಿಗೆ ಸಂದ ಗೌರವ ಎಂದು ಬೊರಿವಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರದೀಪ್ ಸಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.
ಜು. 13 ರಂದು ಬೊರಿವಲಿ ಪೂರ್ವದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ತವರೂರ ತಂಡದ ಯಕ್ಷಗಾನ ತಾಳಮದ್ದಳೆ, ಸಮ್ಮಾನ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಕಲಾಪ್ರಕಾರಗಳಲ್ಲಿ ಪ್ರಾವೀಣ್ಯತೆ ಪಡೆದ ಕಲಾವಿದರು ಅದರ ಗುಣಮಮಟ್ಟ ಮತ್ತು ಮೌಲ್ಯತೆಯನ್ನು ಕಾಪಾಡಬೇಕು. ತಾನು ಬೆಳೆಯುತ್ತಿರುವಂತೆ ಇನ್ನೊಬ್ಬರ ಬೆಳವಣಿಗೆಗೆ ಶ್ರಮಿಸಬೇಕು. ಕಲಾವಿದರಲ್ಲಿ ಹೊಂದಾಣಿಕೆ, ಕೊಂಡುಕೊಳ್ಳುವಿಕೆ ಅತೀ ಮುಖ್ಯವಾಗಿರಬೇಕು ಎಂದು ಹೇಳಿದರು.
ದೇವಸ್ಥಾನದ ಪ್ರಬಂಧಕ ವೆಂಕಟರಮಣ ತಂತ್ರಿ ಅವರು ಮಾತನಾಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಮೂಲ ಸಂಸ್ಕೃತಿಯನ್ನು ಅಜೆಕಾರು ಕಲಾಭಿಮಾನಿ ಬಳಗ ಉಳಿಸಲು ಬಹಳಷ್ಟು ಶ್ರಮಿಸುತ್ತಿದೆ. ಅವರ ಪ್ರತಿಯೊಂದು ಯೋಜನೆಗಳು ಸಾಕಾರಗೊಳ್ಳಲಿ. ಭಾಗವತಿಕೆಯ ಯುವ ಪ್ರತಿಭೆ ಕಾವ್ಯಶ್ರೀ ಅಜೇರು ಅವರ ಸುಶ್ರಾವ್ಯ ಹಾಡುಗಾರಿಕೆ ಯಕ್ಷಗಾನದ ಶ್ರೇಷ್ಠತೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಕಮಲಾಕ್ಷ ಕಾಮತ್ ದಂಪತಿ, ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಉದ್ಯಮಿಗಳಾದ ಶಿವರಾಮ ಶೆಟ್ಟಿ ದಂಪತಿ, ರವೀಂದ್ರ ಶೆಟ್ಟಿ, ಸದಾಶಿವ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಸಿಎ ಶ್ರೀನಿವಾಸ ಪುತ್ರನ್ ಹಾಗೂ ಯುವ ಪ್ರತಿಭೆ ಕಾವ್ಯಶ್ರೀ ಅವರನ್ನು ದೇವಸ್ಥಾನದ ಮೊಕ್ತೇಸರ ಜಯರಾಜ್ ಸಿ. ಶೆಟ್ಟಿ, ಆಡಳಿತ ಮೊಕ್ತೇಸರ ಪ್ರದೀಪ್ ಸಿ. ಶೆಟ್ಟಿ, ಪ್ರಬಂಧಕ ವೆಂಕಟರಮಣ ತಂತ್ರಿ ಅವರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿದರು.
ಯಕ್ಷಗಾನ ಕಲಾವಿದ ವೇಣುಗೋಪಾಲ್ ಭಟ್ ಶೇಣಿ ಅವರು ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ನಡೆದ ಶ್ರೀಕೃಷ್ಣ ರಾಯಭಾಯ ತಾಳಮದ್ದಳೆಯಲ್ಲಿ ಭಾಗವತಿಕೆಯಲ್ಲಿ ಕಾವ್ಯಶ್ರೀ ಅಜೇರು, ಮದ್ದಳೆ ಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಚೆಂಡೆಯಲ್ಲಿ ಶ್ರೀಪತಿ ನಾಯಕ್ ಅಜೇರು, ಅರ್ಥದಾರಿಗಳಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಹರೀಶ್ ಬೊಳಂತಮೊಗರು, ಶ್ಯಾಮ್ ಭಟ್ ಶೇಣಿ, ವೇಣುಗೋಪಾಲ್ ಭಟ್ ಅವರು ಸಹಕರಿಸಿದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ರಮೇಶ್ ಅಮೀನ್