Advertisement

ಬೊರಿವಲಿ ರಾಜೇಂದ್ರ ನಗರದ ಗರಡಿ ಸುವರ್ಣ ಮಹೋತ್ಸವ

04:44 PM Dec 29, 2017 | Team Udayavani |

ಮುಂಬಯಿ: ಸಾಮಾಜಿಕ, ಧಾರ್ಮಿಕ ಸೇವಾ ಸಂಸ್ಥೆಗಳನ್ನು ಕಟ್ಟುವುದಕ್ಕಿಂತ ಅದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಅತಿಯಾದ ಪರಿಶ್ರಮದ ಆವಶ್ಯಕತೆ ಇಲ್ಲಿರಬೇಕು. ಆಗ  ಮಹತ್ವದ ಸಾಧನೆಯಾಗುತ್ತದೆ. ಇಂತಹ ಕಾರ್ಯ ದಲ್ಲಿ ಸಾಧು-ಸಂತರ ಧನಾತ್ಮಕ ಸಂದೇಶವನ್ನು ಅಳವಡಿಸಿಕೊಳ್ಳಬೇಕು. ಸಮಾಜ ಸೇವೆ ಉತ್ಪ್ರೇಕ್ಷೆಯಾಗದೆ ಸಾಧನೆಯಾಗಿ ಉಳಿಯಬೇಕು. ಆವಾಗಲೇ ನಮ್ಮ ಕಾರ್ಯಕ್ಕೆ  ಪ್ರತಿಫಲ ದೊರೆಯುತ್ತದೆ ಎಂದು ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ನುಡಿದರು.

Advertisement

ಡಿ. 24ರಂದು ಬೊರಿವಲಿ ಪೂರ್ವದ ರಾಜೇಂದ್ರ ನಗರ ದತ್ತಾಪಾಡದ ಶ್ರೀ ದುರ್ಗಾ ಪರಮೇಶ್ವರಿ ಹಾಗೂ ಬ್ರಹ್ಮಬೈದರ್ಕಳ ಸುವರ್ಣ ಮಹೋತ್ಸವ ನೇಮೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇವರು, ಮಹಾನಗರದಲ್ಲಿ ಕಳೆದ ಐವತ್ತು ವರ್ಷಗಳಿಂದ ತುಳುನಾಡ ವೀರರಾದ ಕೋಟಿ-ಚೆನ್ನಯರ ಸ್ಮರಣೆ ಇಲ್ಲಿ ನಡೆಯುತ್ತಿದ್ದು, ಸಮಾಜ ಸೇವಾ ಮನೋಭಾವವುಳ್ಳ ವ್ಯಕ್ತಿಗಳಿಂದ ಈ ಸೇವಾ ಸಂಸ್ಥೆಯೂ ಇನ್ನಷ್ಟು ಪ್ರಗತಿ ಹೊಂದಿ ತುಳುನಾಡಿನ ದೈವದೇವರ ಸಂಸ್ಕೃತಿ ಇಲ್ಲಿ ಸದಾ ಕಾಲ ರಾರಾಜಿಸುತ್ತಿರಲಿ. ಕೋಟಿ-ಚೆನ್ನಯರ  ಕಾರಣಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯಲಿ  ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉತ್ತರ ಮುಂಬಯಿ ಲೋಕಸಭಾ ಸಂಸದ ಗೋಪಾಲ್‌ ಶೆಟ್ಟಿ ಅವರು ಮಾತನಾಡಿ, ದೂರದ ಊರಿನಲ್ಲಿದ್ದು ನಮ್ಮ ನಾಡಿನ ಧರ್ಮ-ಸಂಸ್ಕೃತಿಯನ್ನು ಮಹಾರಾಷ್ಟ್ರದ ಮಣ್ಣಿನಲ್ಲಿಯೂ ಸಂಯೋಜಿಸಿ, 50 ವರ್ಷಗಳಿಂದ ಊರಿನ ಧಾರ್ಮಿಕತೆಯನ್ನು ಊರ್ಜಿತಗೊಳಿಸಿದ ಈ ಸೇವಾ ಸಮಿತಿಯ ಕಾರ್ಯಾ ಶ್ಲಾಘನೀಯ. ನಮ್ಮ ಸಂಸ್ಕೃತಿ, ದೇವರ ಮಹಿಮೆಯನ್ನು ಜಾಗೃತಿಗೊಳಿಸಿದಾಗ ಮಾತ್ರ ಸಂಸ್ಥೆಯ ಬೆಳವಣಿಗೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬೊರಿವಲಿ ಪೂರ್ವದ ರಾಜೇಂದ್ರ ನಗರದ ಶ್ರೀ ದುರ್ಗಾ ಪರಮೇಶ್ವರಿ ಹಾಗೂ ಬ್ರಹ್ಮಬೈದರ್ಕಳ ಕ್ಷೇತ್ರದ ಸಾಧನೆ ಅಪಾರವಾಗಿದೆ. ನಗರಗಳು ಬೆಳೆಯುತ್ತಿರುವ ಇಂದಿನ ಧಾವಂತದ ಯುಗದಲ್ಲಿ ನಮ್ಮ ದೇವಸ್ಥಾನಗಳ ಜೀರ್ಣೋದ್ಧಾರವಾಗಿ ಸೌಂದರ್ಯಗೊಳ್ಳಬೇಕು. ಈ ನಿಟ್ಟಿನಲ್ಲಿ ಮನಪೂರ್ವಕವಾಗಿ ಈ ಕ್ಷೇತ್ರದ ಸೇವೆಗೆ ನಾವೆಲ್ಲರು ಸಿದ್ಧರಿರಬೇಕು. ಊರಿನ ಸಂಸ್ಕೃತಿ, ಧಾರ್ಮಿಕತೆ ಇಲ್ಲಿನ ನಿಷ್ಠಾವಂತ ಕಾರ್ಯಕರ್ತರಿಂದ ಸದಾ ಉಳಿಯಲಿ-ಬೆಳೆಯಲಿ ಎಂದು ಹಾರೈಸಿದರು.

ದಿನಪೂರ್ತಿ ನಡೆದ ಧಾರ್ಮಿಕ ಕಾರ್ಯಕ್ರಮದ ಪೌರೋಹಿತ್ಯ ವಹಿಸಿದ್ದ ಹಿರಿಯ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್‌ ಅವರು ಶುಭಶಂಸನೆಗೈದು, ಜನರ ಮನದಲ್ಲಿ ನೆಲೆಯಾದ ಈ ದೈವಸ್ಥಾನವು ಹಿರಿಯರಿಂದ ಸ್ಥಾಪಿಸಲ್ಪಟ್ಟು ಇದೀಗ ಸುಮತಿ ಬಂಗೇರರ ಮೊಕ್ತೇಸರ ಆಡಳಿತದಿಂದ ಉತ್ತಮ ಕಾರ್ಯಕ್ರಮಗಳು ಜರಗುತ್ತಿರುವುದು  ಹೆಮ್ಮೆಯ ವಿಷಯವಾಗಿದೆ. ಉದ್ಯಮಿ, ಸಮಾಜ ಸೇವಕ ಮುಂಡಪ್ಪ ಪಯ್ಯಡೆ, ಜಯ ಸುವರ್ಣರಂತವರ  ಸೇವೆಯಿಂದ ಈ ಧಾರ್ಮಿಕ ಸಂಸ್ಥೆ ಪ್ರಗತಿ ಹೊಂದುತ್ತಿದೆ. ವೀರ-ಪುರುಷರಾದ ಕೋಟಿ-ಚೆನ್ನಯರ ನೆನಪಿಗಾಗಿ ನಡೆದ ಸಮ್ಮಾನಗಳು ಹಾಗೂ ಕಾರ್ಯಕರ್ತರ ನಿಷ್ಕಲ್ಮಶ ಸೇವಾ ಕಾರ್ಯಕ್ರಮಗಳು ಮೆರುಗು ನೀಡಿವೆ ಎಂದರು.

ಮಹಾಶೇಷ ರುಂಡಮಾಲಿನಿ ದೇವಸ್ಥಾನ ಪೊವಾಯಿ ಇದರ ಧರ್ಮದರ್ಶಿ ಸುವರ್ಣ ಬಾಬಾ ಅವರು ಮಾತನಾಡಿ, 50 ವರ್ಷಗಳ ಹಿಂದೆ ಈ ದೇವಸ್ಥಾನಕ್ಕೆ ಭೂಮಿಪೂಜೆಗೈದ ನನಗೆ ಇಂದು 50 ರ ಸ್ವರ್ಣ ಮಹೋತ್ಸವದಲ್ಲಿ ಭಾಗಿಯಾಗಲು ಅವಕಾಶ ದೊರೆತಿದೆ. ಇದೊಂದು ಪುಣ್ಯದ ಕೆಲಸ. ಬಿಲ್ಲವರ ಅಸೋಸಿಯೇಶನ್‌ನ ಶ್ರಮ, ಬ್ರಹ್ಮಶ್ರೀ ನಾರಾಯಣ ಗುರುಗಳ ಶುಭಾಶೀರ್ವಾದಗಳೊಂದಿಗೆ ಈ ಕ್ಷೇತ್ರ ಇನ್ನಷ್ಟು ಪ್ರಗತಿ ಹೊಂದಲಿ. ವೀರ ಪುರುಷರಾದ ಕೋಟಿ-ಚೆನ್ನಯರ ಧೈವಶಕ್ರಿಯು ಇಲ್ಲಿ ನೆಲೆಯಾಗಿ ಪ್ರಜ್ವಲಿಸಲಿ ಎಂದು ನುಡಿದು  ಹಾರೈಸಿದರು.

Advertisement

ಅತಿಥಿ-ಗಣ್ಯರುಗಳನ್ನು ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಸಂಸ್ಥೆಯನ್ನು ಯಶಸ್ವಿಯಾಗಿ ಅಭಿವೃದ್ಧಿಯತ್ತ ಕೊಂಡೊಯ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಹಕರಿಸಿದ ಸಮಿತಿಯ ಮೊಕ್ತೇಸರ ಸುಮತಿ ಕೆ. ಬಂಗೇರ ಅವರನ್ನು ಗಣ್ಯರು ಸಮ್ಮಾನಿಸಿ ಅಭಿನಂದಿಸಿದರು.

ವೇದಿಕೆಯಲ್ಲಿ ಭಾರತ್‌ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ, ಸಮಾಜ ಸೇವಕ ಪ್ರಶಾಂತ್‌ ಪೂಜಾರಿ, ಉದ್ಯಮಿ ತಮ್ಮಣ್ಣ, ಮೊಕ್ತೇಸರರಾದ ಸುಮತಿ ಕೆ. ಬಂಗೇರ, ಅರ್ಚಕ ಶೈಲೇಶ್‌ ಪೂಜಾರಿ ಉಪಸ್ಥಿತರಿದ್ದರು. ಬಿಲ್ಲವರ ಅಸೋಸಿಯೇಶನ್‌ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ, ರಾಜಾ ವಿ. ಸಾಲ್ಯಾನ್‌, ಜತೆ ಕಾರ್ಯದರ್ಶಿ ಪ್ರೇಮನಾಥ್‌ ಪಿ. ಕೋಟ್ಯಾನ್‌, ಓಬಿಸಿ ಸಮಿತಿಯ ಆನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಧಾರ್ಮಿಕ ಮುಂದಾಳುಗಳು ಪಾಲ್ಗೊಂಡಿದ್ದರು. ಸತೀಶ್‌ ಎರ್ಮಾಳ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. 

ಶ್ರೀ ಕ್ಷೇತ್ರದ ಪುಷ್ಪಾ ಬಂಗೇರ ಅವರ ಶ್ರಮ ಹಾಗೂ ಅದನ್ನು ಕಾರ್ಯರೂಪಕ್ಕೆ ತಂದ ಸುಮತಿ ಬಂಗೇರ ಅವರಿಂದ ಇಂದು ಈ ಕ್ಷೇತ್ರವು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಮರಾಠಿ ಮಣ್ಣಿನಲ್ಲಿ ಈ ಕೆಲಸ ನಡೆಸುವುದು ಸುಲಭದ ಮಾತಲ್ಲ. ಇಂತಹ ಸಂದರ್ಭದಲ್ಲಿ ಇಲ್ಲಿನ ನಿಷ್ಠಾವಂತ ಯುವ ಕಾರ್ಯಕರ್ತರು ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ. ಮನುಷ್ಯ ಯಾವತ್ತೂ ಆಸ್ತಿ ಬದುಕಿಗಾಗಿ ಜೀವಿಸದೆ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮಕ್ಕಳು ಕೇವಲ ವಿದ್ಯೆ ಕಲಿತರೆ ಸಾಲದು. ಅದರೊಂದಿಗೆ ಬುದ್ಧಿ ಸಂಪತ್ತು ಎರಡನ್ನೂ ಪಡೆಯುವುದರ ಜೊತೆಗೆ ಪಾಲಕರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ಸಮಾಜ ಸೇವೆಯನ್ನು ದೇವರ ಕೆಲಸ ಎಂದು ಸ್ವೀಕರಿಸಬೇಕು 
– ಮುಂಡಪ್ಪ ಎಸ್‌. ಪಯ್ಯಡೆ ( ಅಧ್ಯಕ್ಷರು : ಶ್ರೀ ದುರ್ಗಾ ಪರಮೇಶ್ವರಿ ಹಾಗೂ ಬ್ರಹ್ಮಬೈದರ್ಕಳ ಗರಡಿ ಸಮಿತಿ).

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next