ಝಂಜವಾಡ(ಅಥಣಿ): ಸತತ 53 ಗಂಟೆಗಳ ಬಳಿಕ ಬೆಳಗಾವಿ ಜಿಲ್ಲೆ ಅಥಣಿಯ ಝಂಜವಾಡ ಗ್ರಾಮದ 30 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಆರು ವರ್ಷದ ಕಂದ ಕಾವೇರಿಯ ಮೃತದೇಹವನ್ನು ರಕ್ಷಣಾ ತಂಡ ಸೋಮವಾರ ತಡರಾತ್ರಿ ಹೊರ ತೆಗೆದಿದೆ. ಇದರೊಂದಿಗೆ ಕಳೆದ 3 ದಿನಗಳಿಂದ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಂತಾಗಿದೆ.
ಸತತ 54 ಗಂಟೆಗಳ ಮ್ಯಾರಥಾನ್ ಕಾರ್ಯಾಚರಣೆಯ ಬಳಿಕ ಸೋಮವಾರ ರಾತ್ರಿ 11.34ಕ್ಕೆ ಸರಿಯಾಗಿ ಆಕೆಯ ದೇಹವನ್ನು ಹೊರತೆಗೆಯಲಾಯಿತು.
ಪುಣೆಯ ಎನ್ ಡಿಆರ್ ಎಫ್ ಹಾಗೂ ಹಟ್ಟಿ ಚಿನ್ನದ ಗಣಿಯ ತಜ್ಞರು ಸಾಕಷ್ಟು ಹರಸಾಹಸ ಪಟ್ಟರೂ ಕೂಡಾ ಕಾವೇರಿಯನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ವಿಫಲರಾಗಿದ್ದು, ಕೋಟಿ, ಕೋಟಿ ಜನರ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.
ಕೊಕಟನೂರು ಆಸ್ಪತ್ರೆಗೆ ಕಾವೇರಿ ಮೃತದೇಹವನ್ನು ರವಾನಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾವೇರಿ ಪೋಷಕರಾದ ಅಜಿತ್, ಸುಜತಾ ದಂಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಝಂಜವಾಡ ಪುನರ್ವಸತಿ ಕೇಂದ್ರದ ಅನತಿ ದೂರದಲ್ಲಿ ಶನಿವಾರ ಸಂಜೆ ಕೊಳವೆ ಬಾವಿಗೆ ಬಾಲಕಿ ಕಾವೇರಿ ಬಿದ್ದಿದ್ದಳು. ಆಕೆಯ ರಕ್ಷಣಾ ಕಾರ್ಯ ಶನಿವಾರದಿಂದ ಮುಂದುವರಿದಿತ್ತು. ಕಾವೇರಿ ಇರುವ ಜಾಗದ ಬಳಿ ರಕ್ಷಣಾ ತಂಡದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದರು.
ಕಾವೇರಿ ತಂದೆ, ತಾಯಿ ಸೇರಿದಂತೆ ರಾಜ್ಯದ ಜನತೆ ಕಾವೇರಿ ಬದುಕಿ ಬಾ ಎಂದು ಪ್ರಾರ್ಥಿಸುತ್ತಿದ್ದರು. ಆ ನಿಟ್ಟಿನಲ್ಲಿ ರಕ್ಷಣಾ ತಂಡ ತೀವ್ರಗತಿಯಲ್ಲಿ ಕಾರ್ಯಾಚರಿಸುತ್ತಿದ್ದು, ಸೋಮವಾರ ಕೊಳವೆ ಬಾವಿ ಸಮೀಪ 25 ಅಡಿ ಆಳದ ಬಾವಿ ತೋಡುವ ಕಾರ್ಯ ಅಂತ್ಯವಾಗಿದ್ದು, ಮಗುವಿನ ಕೈ ತೋರುವ ಜಾಗದವರೆಗೆ ಅಡ್ಡ ಸುರಂಗ ಮಾರ್ಗ ಕೊರೆಯಲಾಗಿದೆ. ಏತನ್ಮಧ್ಯೆ ಅಲ್ಲಿಂದ ಮುಂದಿನ ಕಾರ್ಯಾಚರಣೆಗೆ ಬಂಡೆಗಲ್ಲಿನಿಂದಾಗಿ ಅಡ್ಡಿ ಉಂಟಾಗಿದೆ ಎಂದು ವರದಿ ವಿವರಿಸಿತ್ತು.