ರಾಯಚೂರು: ಬೇಸಿಗೆಯಲ್ಲಿ ಕುಡಿವ ನೀರು ಪೂರೈಸುವ ನಿಟ್ಟಿನಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆಯುತ್ತಿದ್ದು, ಈ ಅವಧಿ ಕೇವಲ ಎರಡು ತಿಂಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಜಿಪಂ ಸಿಇಒ ನೂರ್ ಜಹಾರ್ ಖಾನಂ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಕುಡಿಯುವ ನೀರು ಪೂರೈಕೆ ವಿಚಾರವಾಗಿ ಪಿಡಿಒಗಳಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿಗೆ 15 ಲಕ್ಷ ರೂ. ಮೀಸಲಿಡಲಾಗಿದೆ. ಆದರೆ, ಹಾಗಂತ ಅನಗತ್ಯ ಖರ್ಚುಗಳಿಗೆ ಅವಕಾಶವಿಲ್ಲ. ಗ್ರಾಮಗಳಿಗೆ ನೀರು ಪೂರೈಸಲು ಪೈಪ್‌ಲೈನ್ ಅಳವಡಿಸುವ ಬೇಡಿಕೆ ಅವೈಜ್ಞಾನಿಕವಾಗಿದೆ. ಕೇವಲ ಎರಡ್ಮೂರು ತಿಂಗಳಿಗಾಗಿ ಪೈಪ್‌ಲೈನ್ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತೀರ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳೇ ನಮ್ಮ ಮೊದಲ ಪ್ರಾಶಸ್ತ್ಯವಾಗಲಿದೆ. ಟ್ಯಾಂಕರ್ ಮೂಲಕ ಇಲ್ಲವೇ ಬೋರ್‌ವೆಲ್ ಮೂಲಕ ನೀರು ಕೊಡಲು ಒತ್ತು ನೀಡಬೇಕು. ಒಂದು ವೇಳೆ ಪೈಪ್‌ಲೈನ್ ಮಾಡಿದಲ್ಲಿ ಅದು ಮತ್ತೆ ನಿರುಪಯುಕ್ತವಾಗುತ್ತದೆ. ಹಾಕಿದ ಪೈಪ್‌ಲೈನ್ ತೆರವುಗೊಳಿಸಲು ಬರುವುದಿಲ್ಲ. ಅಲ್ಲದೇ, ಬರ ನಿರ್ವಹಣೆಗೆ ಮೀಸಲಿಟ್ಟ ಹಣದಲ್ಲಿ ಅಂಥ ಕೆಲಸಗಳನ್ನು ನಿರ್ವಹಿಸುವುದು ಕಷ್ಟಕರ ಎಂದು ತಿಳಿಸಿದರು.
ವಿವಿಧ ಗ್ರಾಪಂಗಳ ಪಿಡಿಒಗಳು ಮಾತನಾಡಿ, ತಾಲೂಕಿನ ಕಲ್ಮಲಾ, ಕಮಲಾಪುರ, ಗಿಲ್ಲೆಸಗೂರು ಕ್ಯಾಂಪ್, ಸಿದ್ರಾಂಪುರ, ಬೋಳಮಾನದೊಡ್ಡಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬೋರ್ ವೆಲ್ ಸಮಸ್ಯೆಗಳಿದ್ದು, ಕುಡಿವ ನೀರಿನ ಪೂರೈಕೆಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ಸಮಸ್ಯೆ ಆಲಿಸಿದ ಸಿಇಒ, ಯಾವ ಗ್ರಾಮದಲ್ಲಿ ಯಾವ ರೀತಿಯಲ್ಲಿ ನೀರು ಪೂರೈಸಬೇಕು ಎಂಬ ಕುರಿತು ಮಾಹಿತಿ ಪಡೆದು ಕ್ರಮ ವಹಿಸಿ. ಟ್ಯಾಂಕರ್ ಮೂಲಕ ಬೋರ್‌ವೆಲ್ ಕೊರೆಸುವುದು ಇಲ್ಲವೇ ಬಾಡಿಗೆ ಪಡೆಯಬೇಕೆ ಎಂದು ನಿರ್ಧರಿಸಬೇಕು. ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾಧಿಕಾರಿ ಸಿ.ಎಸ್. ಮಡೋಳಪ್ಪ ಸೇರಿದಂತೆ ವಿವಿಧ ತಾಪಂ ಇಒಗಳು ಹಾಗೂ ಗ್ರಾಪಂ ಪಿಡಿಒಗಳು ಸಭೆಯಲ್ಲಿದ್ದರು.