ಬೀದರ: ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬೀದರ ನಗರದಲ್ಲಿ ಕೊಳವೆ ಬಾವಿ ಕೊರೆಸಲು ಜಾರಿಯಲ್ಲಿದ್ದ ನಿರ್ಬಂಧವನ್ನು ತೆರವುಗೊಳಿಸಲು ನಿರ್ಣಯಿಸಲಾಗಿದೆ.
ಅಂತರ್ಜಲಮಟ್ಟ ಕುಸಿತದ ಕಾರಣ ಬೀದರನಲ್ಲಿ ಬೋರ್‌ವೆಲ್ ಕೊರೆಯಿಸುವುದಕ್ಕೆ ನಿರ್ಬಂಧ ಹಾಕಲಾಗಿದೆ. ಈಗ ಉತ್ತಮ ಮಳೆಯಿಂದಾಗಿ ಅಂತರ್ಜಲ ಮಟ್ಟ
ಏರಿಕೆಯಾಗಿರುವುದರಿಂದ ನಿರ್ಬಂಧವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ರಹೀಮ್ ಖಾನ್ ಸಭೆ ಗಮನ ಸೆಳೆದರು.
ನಗರದಲ್ಲಿ ಕೊಳವೆಬಾವಿ ಕೊರೆಸಲು ನಿರ್ಬಂಧ ಕಾರಣ ಬೋರ್‌ವೆಲ್ ಮಾಫಿಯಾ ನಡೆಯುತ್ತಿದೆ. ಶ್ರೀಮಂತರು 1 ರಿಂದ 2 ಲಕ್ಷ ರೂ. ನೀಡಿ ರಾತ್ರೋರಾತ್ರಿ ಬೋರ್ ವೆಲ್ ಕೊರೆಯಿಸುತ್ತಿದ್ದಾರೆ. ಬಡ, ಮಧ್ಯಮ ವರ್ಗದವರಿಗೆ ಇದು ಸಾಧ್ಯವಾಗುತ್ತಿಲ್ಲ. ಇತ್ತ 24×7 ನೀರು ಸಹ ಅಸಮರ್ಪವಾಗಿದ್ದು, ಮತ್ತೂಂದೆಡೆ ಕೊಳವೆಬಾವಿ ಸಹ ಇಲ್ಲದೇ ಜನ ಸಂಕಷ್ಟ ಎದುರಿಸುವಂತಾಗಿದೆ. ನರಸಿಂಹ ಝರಣಾ ಮತ್ತು ಗುರುದ್ವಾರ ಪ್ರದೇಶ ಹೊರತುಪಡಿಸಿ ಉಳಿದೆಡೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಹುಮನಾಬಾದ ತಾಲೂಕು ಸೇರಿದಂತೆ ಜಿಲ್ಲೆಯ ಹಳ್ಳಿ, ಧಾಬಾಗಳಲ್ಲಿ ಅಕ್ರಮ ಸರಾಯಿ ಮಾರಾಟ ಹೆಚ್ಚುತ್ತಿದೆ. ಅಂಗಡಿಗಳಲ್ಲಿ ಸಮಯಕ್ಕೆ ತರಕಾರಿ ಸಿಗುವುದಿಲ್ಲ. ಆದರೆ, ಸರಾಯಿ ಸಿಗುತ್ತಿದೆ. ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆಯೂ ಸಹ ಈ ದಂಧೆಯಲ್ಲಿ ಶಾಮೀಲಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಅಬಕಾರಿ ಇಲಾಖೆ ಡಿಸಿ ಮಂಜುನಾಥ, ಅಕ್ರಮ ಮಾರಾಟ ಇರುವುದು ನಿಜ. ಇದಕ್ಕೆ ಕಡಿವಾಣ ಹಾಕಲು ಇಲಾಖೆ ಪ್ರಯತ್ನಿಸುತ್ತಿದ್ದು, ಈಗಾಗಲೇ 400 ಪ್ರಕರಣಗಳನ್ನು ದಾಖಲಿಸಿದೆ. ನಿಯಮ ಪಾಲಿಸದ ವೈನ್ ಅಂಗಡಿಗಳ ಲೈಸನ್ಸ್ ಮಾಡಲಾಗುತ್ತಿದೆ.
ಸಿಬ್ಬಂದಿಗಳ ಕೊರತೆಯಿಂದ ಅಡ್ಡಿಯಾಗುತ್ತಿದ್ದು, ಕಾರ್ಯಾಚರಣೆ ಮುಂದುವರೆಸಿ ಅಕ್ರಮಕ್ಕೆ ಬ್ರೇಕ್ ಹಾಕಲಾಗುವುದು ಎಂದು ಹೇಳಿದರು. ಡಿಸಿ ರಾಮಚಂದ್ರನ್ ಮಾತನಾಡಿ, ಸಿಬ್ಬಂದಿಗಳ ಕೊರತೆ ನೆಪ ಬೇಡ. ಪೊಲೀಸ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವು ಪಡೆದು ಅಕ್ರಮ ಸಾರಾಯಿ ಮುಕ್ತಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.