ಬೆಂಗಳೂರು: ನಮ್ಮಲ್ಲೂ ಸಾಕಷ್ಟು ಸ್ಪಿನ್ ಆಯ್ಕೆಗಳಿವೆ ಎನ್ನುವ ಮೂಲಕ ಭಾರತದ ಟರ್ನಿಂಗ್ ಟ್ರ್ಯಾಕ್‌ಗಳಲ್ಲಿ ಆಸ್ಟ್ರೇಲಿಯವೂ ಉತ್ತಮ ಪ್ರದರ್ಶನ ನೀಡಲಿದೆ ಎಂಬುದಾಗಿ ನಾಯಕ ಪ್ಯಾಟ್ ಕಮಿನ್ಸ್ ವಿಶ್ವಾಸ ವ್ಯಕ್ತ
ಪಡಿಸಿದ್ದಾರೆ. ಅವರು ಭಾರತಕ್ಕೆ ಆಗಮಿಸಿದ ಬಳಿಕ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು.
“ಫಿಂಗರ್ ಸ್ಪಿನ್, ರಿಸ್ಟ್ ಸ್ಪಿನ್, ಆಫ್ ಸ್ಪಿನ್… ಹೀಗೆ ನಮ್ಮಲ್ಲಿ ಸಾಕಷ್ಟು ಸ್ಪಿನ್ ಆಯ್ಕೆಗಳಿವೆ. 20 ವಿಕೆಟ್ ಉರುಳಿಸುವ ಬೌಲರ್‌ಗಳ ಪಡೆಯೊಂದನ್ನು ಆಯ್ಕೆ ಮಾಡಬೇಕಿದೆ. ಆದರೆ ಇದನ್ನು ಹೇಗೆ ವಿಭಜಿಸಬೇಕು ಎಂಬ ಯೋಜನೆ ಇನ್ನೂ ರೂಪುಗೊಂಡಿಲ್ಲ…’ ಎಂದು ಪ್ಯಾಟ್ ಕಮಿನ್ಸ್ ಹೇಳಿದರು.
ಅವಳಿ ಸ್ಪಿನ್ ದಾಳಿಯ ಸಾಧ್ಯತೆ ಕುರಿತಾದ ಪ್ರಶ್ನೆಗೆ ಜವಾಬಿತ್ತ ಪ್ಯಾಟ್ ಕಮಿನ್ಸ್, “ಈಗಲೇ ಏನೂ ಹೇಳಲಾಗದು. ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಯಾವುದಕ್ಕೂ ನಾಗ್ಪುರಕ್ಕೆ ತೆರಳಿದ ಬಳಿಕವಷ್ಟೇ ಒಂದು ಹಂತದ ನಿರ್ಧಾರಕ್ಕೆ ಬರಲು ಸಾಧ್ಯ’ ಎಂದರು.
ಸದ್ಯ ಆಲೂರಿನಲ್ಲಿ ಕಠಿನ ಅಭ್ಯಾಸ ನಡೆಸುತ್ತಿರುವ ಆಸ್ಟ್ರೇಲಿಯ ತಂಡ ಸೋಮವಾರ ನಾಗ್ಪುರಕ್ಕೆ ತೆರಳಲಿದೆ.
“ಫಿಂಗರ್ ಸ್ಪಿನ್ನರ್ ಆ್ಯಶನ್ ಅಗರ್ ಕಳೆದ ಸಲದ ಭಾರತ ಪ್ರವಾಸದ ವೇಳೆ ತಂಡಲ್ಲಿದ್ದರು. ಮಿಚೆಲ್ ಸ್ವೆಪ್ಸನ್ ಕಳೆದೆರಡು ವಿದೇಶಿ ಪ್ರವಾಸಗಳಲ್ಲಿ ಪಾಲ್ಗೊಂಡಿದ್ದಾರೆ. ಟಾಡ್ ಮರ್ಫಿ 2017ರ ಪ್ರವಾಸದಲ್ಲಿದ್ದರು. ಟ್ರ್ಯಾವಿಸ್ ಹೆಡ್ ಕೂಡ ಆಫ್ ಸ್ಪಿನ್ ಬೌಲಿಂಗ್ ಮಾಡಬಲ್ಲರು. ಇವರೆಲ್ಲರೂ ನಥನ್ ಲಿಯಾನ್‌ಗೆ ಉತ್ತಮ ಬೆಂಬಲ ನೀಡುವ ವಿಶ್ವಾಸವಿದೆ’ ಎಂದು ಕಮಿನ್ಸ್ ಹೇಳಿದರು.