ಹೊಸದಿಲ್ಲಿ /ಬೀಜಿಂಗ್: ಡೋಕ್ಲಾಮ್ ವಿವಾದವು ಭಾರತ- ಚೀನ ಮಧ್ಯೆ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಸೃಷ್ಟಿಸಿರುವ ನಡುವೆಯೇ, ದಿನ ದಿನಕ್ಕೂ ಯುದ್ಧ ಭೀತಿ ತೀವ್ರಗೊಳ್ಳತೊಡಗಿದೆ.
ಶನಿವಾರ ಮತ್ತೆ ಚೀನ ಗಡಿಯಲ್ಲಿ ಭಾರತವು ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ. ಅಷ್ಟೇ ಅಲ್ಲ, ಈಶಾನ್ಯ ಗಡಿಯಲ್ಲಿ ಅಲರ್ಟ್ ಆಗಿರುವಂತೆ ವಾಯುಪಡೆಗೂ ಸೂಚಿಸಿ, ವಾಯು ಸೇನಾ ತುಕಡಿಗಳನ್ನು ನಿಯೋಜನೆ ಮಾಡಿಕೊಳ್ಳುತ್ತಿದೆ. ಇವೆಲ್ಲದರ ನಡುವೆ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ಮಾತುಕತೆಯೂ ವಿಫಲವಾಗಿದ್ದು, ಯಾವುದೇ ಕ್ಷಣ ಯುದ್ಧ ನಡೆಯ ಬಹುದಾದ ಆತಂಕದ ಪರಿಸ್ಥಿತಿ ಮುಂದುವರಿದಿದೆ.
ಎರಡು ದಿನಗಳಿಂದ ಡೋಕ್ಲಾಮ್ ಪ್ರಸ್ಥಭೂಮಿಯ ಭಾರತ, ಚೀನ ಹಾಗೂ ಭೂತಾನ್ ಸಂಗಮ ಪ್ರದೇಶ ದಲ್ಲಿ ಭಾರತ ಹಾಗೂ ಚೀನ ಸೇನೆ ಜಮಾವಣೆ ಆಗುತ್ತಿದೆ. ಈ ನಡುವೆ ಕಾಠ್ಮಂಡುವಿನಲ್ಲಿ ಸೇನಾಧಿಕಾರಿಗಳ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಒಮ್ಮತದ ನಿರ್ಣಯ ಕೈಗೊಳ್ಳಲಾಗದೆ ಅಂತ್ಯಗೊಂಡಿದೆ ಎನ್ನಲಾಗಿದೆ. ಭಾರತವು ಸಿಕ್ಕಿಂ ಗಡಿಯಲ್ಲಿ ನಿಯೋಜನೆ ಮಾಡಿರುವ ಸೇನೆ ಯನ್ನು ಹಿಂದಕ್ಕೆ ಕರೆಸಿಕೊಳ್ಳದೆ ಇದ್ದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಚೀನಮಾತುಕತೆ ವೇಳೆ ಪಟ್ಟು ಹಿಡಿದಿದೆ.
ಸಿಕ್ಕಿಂ ಗಡಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಚೀನ ತತ್‌ಕ್ಷಣ ಸ್ಥಗಿತಗೊಳಿಸಿ ಸೇನೆಯನ್ನು ಹಿಂದೆ ಗೆಯಲಿ ಎಂದು ಭಾರತ ಹೇಳಿದೆ. ಇದಕ್ಕೆ ಚೀನ ಹಿಂದೇಟು ಹಾಕಿದ್ದರಿಂದ ಮಾತುಕತೆ ಯಾವುದೇ ತಾರ್ಕಿಕ ಅಂತ್ಯ ಕಾಣದೆ ಕೊನೆಗೊಂಡಿದೆ ಎಂದು ಹೇಳಲಾಗಿದೆ.
ಚೀನ ಕುತಂತ್ರ: ಇವೆಲ್ಲದರ ನಡುವೆ ಭಾರತದ ವಿರುದ್ಧ ಚೀನ ಇನ್ನೊಂದು ಕುತಂತ್ರಕ್ಕೆ ಮುಂದಾಗಿದೆ. ಭಾರತದ ಜತೆ ಉತ್ತಮ ಸಂಬಂಧ ಹೊಂದಿರುವ ಭೂತಾನ್ ಜತೆ ಚೀನ ಸ್ನೇಹ ಬೆಳೆಸಿ ಭಾರತದ ಜತೆ ಬಿಕ್ಕಟ್ಟು ಸೃಷ್ಟಿಸಲು ಹೊರಟಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೂತಾನ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ ಚೀನ ಶನಿವಾರ ಭೂತಾನ್ ಜತೆ ಮಾತುಕತೆ ನಡೆಸಿದೆ. ಈ ವೇಳೆ ಭಾರತದ ವಾದವನ್ನು ಬೆಂಬಲಿಸದೆ ಇರಲು ಮನವಿ ಮಾಡಿ ಕೊಂಡಿದೆ ಎಂದು ಹೇಳಲಾಗಿದೆ.
ಸಿಕ್ಕಿಂ ಗಡಿ ವಿಚಾರದಲ್ಲಿ ಭಾರತ ಪ್ರೌಢಿಮೆ ಪ್ರದರ್ಶಿಸಿದೆ. ರಾಜತಾಂತ್ರಿಕವಾಗಿ ವಿವಾದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಜಾಗ್ರತೆಯಿಂದ ಹೆಜ್ಜೆ ಇಡುತ್ತಿದೆ. ಈ ವಿಚಾರದಲ್ಲಿ ಅಮೆರಿಕ ತಟಸ್ಥ ಧೋರಣೆಯನ್ನೇ ಅನುಸರಿಸಲಿದೆ. ಆದರೆ ಶಾಂತಿ ಯಿಂದ ವಿವಾದ ಬಗೆಹರಿಸಿ ಕೊಳ್ಳುವುದು ಉತ್ತಮ.
ಜೇಮ್ಸ್ ಆರ್.ಹಾಲ್ಮೆಸ್, ಅಮೆರಿಕ ನೌಕಾಪಡೆ ತಂತ್ರಗಾರಿಕೆ ತಜ್ಞ