Advertisement

ಪ್ರತಿಭಟನೆ ಸ್ಥಳಕ್ಕೆ ಬೋಪಯ್ಯ ಭೇಟಿ: ಭರವಸೆ

01:28 AM Feb 15, 2020 | Team Udayavani |

ಮಡಿಕೇರಿ: ಮಳೆಹಾನಿ ಸಂತ್ರಸ್ತರು ಸಿದ್ದಾಪುರದಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿದರು. ನಿವೇಶನಗಳನ್ನು ಹಂಚಿಕೆ ಮಾಡಲು ಅಗತ್ಯವಿರುವಷ್ಟು ಸರ್ಕಾರಿ ಜಾಗ ಲಭ್ಯವಿರದೇ ಇರುವುದರಿಂದ ಖಾಸಗಿ ಜಮೀನು ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

Advertisement

ಕೆಲವು ಭಾಗಗಳಲ್ಲಿ ಸರಕಾರಿ ಭೂಮಿ ಒತ್ತುವರಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸರಕಾರಿ ಭೂಮಿ ಅಲಭ್ಯವಾಗಿರುವುದರಿಂದ ಖಾಸಗಿ ಜಾಗವನ್ನು ಖರೀದಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಅವರೆಗುಂದ ಅಸ್ತಾನ ಹಾಡಿ ವ್ಯಾಪ್ತಿ ಹಾಗೂ ಕರಡಿಗೋಡಿನಲ್ಲಿ ಖಾಸಗಿ ಜಾಗ ಮಾರಾಟಕ್ಕೆ ಇರುವುದಾಗಿ ಕೆಲವರು ತಿಳಿಸಿದ್ದಾರೆ. ಈ ಎರಡು ಜಾಗದ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿ ಜವರೇಗೌಡರಿಗೆ ಶಾಸಕರು ಸೂಚನೆ ನೀಡಿದರು.

ಬೇಡಿಕೆಯನ್ನು ಈಡೇರಿಸಲು ತಕ್ಷಣಕ್ಕೆ ಸಾಧ್ಯವಿಲ್ಲದೆ ಇರುವುದರಿಂದ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ತಿಳಿಸಿದ ಕೆ.ಜಿ.ಬೋಪಯ್ಯ ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಜವರೇಗೌಡ ಅವರು ಮಾತನಾಡಿ ಪ್ರವಾಹ ಸಂತ್ರಸ್ತರ ಪೈಕಿ ನದಿ ತೀರದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ವಾಸವಾಗಿದ್ದ ಕುಟುಂಬಗಳಿಗೂ ಬಾಡಿಗೆ ಹಣವನ್ನು ನೀಡಲಾಗಿದೆ ಎಂದ‌ರು. ಪ್ರವಾಹ ಸಂತ್ರಸ್ತರಿಗೆ ಸೂರು ಕಲ್ಪಿಸುವಂತೆ ಆಗ್ರಹಿಸಿ ಸಿದ್ದಾಪುರ ಗ್ರಾಮ ಪಂಚಾಯತಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ 4 ದಿನ ಪೂರೈಸಿದೆ. ನದಿ ತೀರದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ, ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಬಾಡಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಜಿಲ್ಲಾಡಳಿತ ಹೇಳಿತ್ತು. ಆದರೆ ಅನಧಿಕೃತ ಸೇರಿದಂತೆ ಮನೆ ಕಳೆದುಕೊಂಡ ಪ್ರತಿಯೊಬ್ಬರಿಗೂ ಬಾಡಿಗೆ ಹಣವನ್ನು ನೀಡಬೇಕೆಂದು ಹೋರಾಟ ಸಮಿತಿಯ ಬೇಡಿಕೆಯಾಗಿತ್ತು. ಅನಧಿಕೃತವಾಗಿ ಮನೆ ಕಟ್ಟಿದ್ದ 228 ಕುಟುಂಬಗಳ ಖಾತೆಗಳಿಗೆ ತಿಂಗಳಿಗೆ ತಲಾ ರೂ.5 ಸಾವಿರದಂತೆ ಐದು ತಿಂಗಳಿಗೆ ರೂ.25 ಸಾವಿರವನ್ನು ಪಾವತಿ ಮಾಡಲಾಗಿದೆ ಎಂದರು.
ತಹಶೀಲ್ದಾರ್‌ ಮಹೇಶ್‌, ವೃತ್ತ ನಿರೀಕ್ಷಕ ಅನೂಪ್‌ ಮಾದಪ್ಪ, ಜತೆಗಿದ್ದರು.

Advertisement

ಮುಂದುವರಿದ ಧರಣಿ
ಬೋಪಯ್ಯ ಅವರು ಭರವಸೆ ನೀಡಿದ ನಂತರವೂ ಸಮಿತಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸಿದೆ. ಈ ಹಿಂದೆ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿರುವುದರಿಂದ ಪರಿಹಾರ ಸಿಗುವವರೆಗೆ ಹೋರಾಟ ನಿಲ್ಲದು ಎಂದು ಪ್ರತಿಭಟ®ನರರು ಘೋಷಿಸಿದರು. ಸಮಿತಿಯ ಯಮುನಾ, ರೆಜಿತ್‌ ಕುಮಾರ್‌ ಗುಹ್ಯ, ಬೈಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next