Advertisement

ಮತದಾರರನ್ನು ಸೆಳೆಯಲು ಚಿತ್ತಾಕರ್ಷಕ ಬೂತ್‌ ಸ್ಥಾಪನೆ

02:53 PM May 07, 2023 | Team Udayavani |

ಕೋಲಾರ: ಸಖಿ, ವಿಶೇಷಚೇತನ, ಮಾದರಿ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ ಮತದಾರರನ್ನು ಮತದಾನ ಮಾಡಲು ಕೈಬೀಸಿ ಕರೆಯುತ್ತಿವೆ ಎಂದು ಜಿಲ್ಲಾ ಸ್ವಿಪ್‌ ಸಮಿತಿ ಅಧ್ಯಕ್ಷರಾದ ಯುಕೇಶ್‌ ಕುಮಾರ್‌ ತಿಳಿಸಿದರು.

Advertisement

ಕೋಲಾರ ಜಿಲ್ಲಾ ಸ್ವೀಪ್‌ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ 6 ವಿಧಾನಸಭಾ ಮತ ಕ್ಷೇತ್ರಗಳಲ್ಲಿ ಬರುವ 1,597 ಮತಗಟ್ಟೆಗಳ ಪೈಕಿ 46 ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ ಕಂಗೊಳಿಸಲಿವೆ. ಇವುಗಳಲ್ಲಿ 30 ಸಖೀ ಗುಲಾಬಿ ಮತಗಟ್ಟೆಗಳು , 6 ವಿಶೇಷಚೇತನರ ಮತಗಟ್ಟೆ ಮತ್ತು 10 ಸಾಂಪ್ರದಾಯಿಕ ಪಾರಂಪರೆಯ ಮತಗಟ್ಟೆಗಳನ್ನು ರೂಪಿಸಲಾಗಿದೆ. ಒಂದೊಂದು ಮತಗಟ್ಟೆಗಳು ವಿಭಿನ್ನ ವಿಧಗಳಲ್ಲಿ ಮತದಾರರನ್ನು ಆಕರ್ಷಿಸಲಿವೆ.

ವಿಕಲಚೇತನ ಸ್ನೇಹಿ ಮತಗಟ್ಟೆ: ವಿಶೇಷಚೇತನರು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಹಾಗೂ ಅವರಲ್ಲೂ ಆತ್ಮ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ 6 ವಿಧಾನ ಸಭಾ ಮತ ಕ್ಷೇತ್ರದಲ್ಲಿ 6 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ವಿವಿಧ ಬಣ್ಣಗಳಿಂದ ಅವರಿಗೆ ತಿಳಿಯುವಂತೆ ಗಾಲಿಕುರ್ಚಿ ಸನ್ನೆಯ ಚಿತ್ತಾರ ಹಾಗೂ ಮತದಾನ ಮಾಡುವ ಚಿತ್ರ ಬರೆದು ಮತಗಟ್ಟೆ ಅಲಂಕರಿಸಲಾಗಿದೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಶೆಟ್ಟಿಪಲ್ಲಿ, ಮುಳಬಾಗಿಲು ಕ್ಷೇತ್ರದಲ್ಲಿ ಎಪಿಎಂಸಿ ಕಚೇರಿ, ಮುಳಬಾಗಿಲು ಟೌನ್‌, ಕೆಜಿಎಫ್‌ ಕ್ಷೇತ್ರದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಊರಿಗಾಂಪೇಟೆ, ಬಂಗಾರಪೇಟೆ ಕ್ಷೇತ್ರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕಶಾಲೆ, ಕೆರೆ ಕೋಡಿ, ಕೋಲಾರ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲೂರು, ಮಾಲೂರು ಕ್ಷೇತ್ರದಲ್ಲಿ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಮಾಲೂರುಗಳಲ್ಲಿ ವಿಶೇಷಚೇತನರಿಗಾಗಿ ವಿಶೇಷ ಮತಗಟ್ಟೆ ತೆರೆಯಲಾಗಿದೆ.

ಯುವ ಮತದಾರರಿಗೆ ಆಕರ್ಷಕ ಬೂತ್‌: ಮೊದಲ ಮತದ ಹೆಮ್ಮೆ ಯುವ ಮತದಾರರ ನೆನಪಿನಲ್ಲುಳಿ ಯುವ ತಾಣವಾಗಲು 6 ಮತಗಟ್ಟೆಗಳು ಸಜ್ಜಾಗಿದ್ದು, ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಯುವ ಮತಗಟ್ಟೆ ತೆರೆಯಲಾಗಿದೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಮರಕುಂಟೆ,ಮುಳಬಾಗಿಲು ಕ್ಷೇತ್ರದಲ್ಲಿ ಕಿರಿಯ ಪ್ರಾಥಮಿಕ ಶಾಲೆ, ದೊಡ್ಡಗುರ್ಕಿ, ಕೆಜಿಎಫ್‌ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕ್ಯಾಸಂಬಳ್ಳಿ, ಬಂಗಾರಪೇಟೆ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾರಹಳ್ಳಿ, ಕೋಲಾರ ಕ್ಷೇತ್ರದಲ್ಲಿ ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಲೂರು ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಲೂರು ಮತಗಟ್ಟೆಗಳಲ್ಲಿ ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ನಾನಾ ರೀತಿ ವಿಭಿನ್ನ ಪ್ರಯತ್ನಗಳನ್ನು ನಡೆಸಿದೆ.

ಮಾದರಿ ಮತಗಟ್ಟೆ: ಜಿಲ್ಲೆಯಲ್ಲಿ ಹಾಲು ಮತ್ತು ರೇಷ್ಮೆ ಬೆಳೆಗಾರರನ್ನು ಹಾಗೂ ಕರ್ನಾಟಕದ ಹೆಮ್ಮೆಯ ಉತ್ಪನ್ನ ನಂದಿನಿ ಹಾಲು ಮತ್ತು ಮುಳಬಾಗಿಲು ಹೆಮ್ಮೆಯ ದೋಸೆ ಸ್ಮರಿಸುವ ಚಿತ್ರಗಳುಳ್ಳ ಮಾದರಿ ಮತಗಟ್ಟೆಗಳು ಮತದಾರರನ್ನು ಆಕರ್ಷಿಸುವಂತಿವೆ.

Advertisement

ಸಾಂಪ್ರದಾಯಿಕತೆ ಸಾರುವ ಮತಗಟ್ಟೆಗಳು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಳವಟ್ಟ, ತ್ಯಾಗರಾಜು ಬಡಾವಣೆ, ಶ್ರೀನಿವಾಸಪುರ, ಸಿ.ಎಂ.ಸಿ ಮುಳಬಾಗಿಲು ಟೌನ್‌, ತಾತಿಕಲ್ಲು, ಮುಳಬಾಗಿಲು, ಸರ್ಕಾರಿ ಪ್ರಾಥಮಿಕ ಶಾಲೆ, ಸುಂದರಪಾಳ್ಯ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಾರಗೊಳ್‌, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಹಾಸಾಳ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಠಾರಿಪಾಳ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಾರಪಟ್ಟಣಗಳಲ್ಲಿ ಐತಿಹಾಸಿಕ ಪ್ರಸಿದ್ಧ ಚಿನ್ನದಗಣಿ, ಪ್ರೇಕ್ಷಣಿಯ ಸ್ಥಳಗಳಾದ ಆವನಿಬೆಟ್ಟ, ಕೋಟಿಲಿಂಗ ಮುಂತಾದ ಸ್ಥಳಗಳ ಮಾಹಿತಿ ಹಾಗೂ ಚಿತ್ರಗಳನ್ನು ಬಿಡಿಸಲಾಗಿದೆ.

30 ಸಖಿ ಗುಲಾಬಿ ಮತಗಟ್ಟೆಗಳು: ಮಹಿಳೆಯರನ್ನು ಮತದಾನದ ಕಡೆಗೆ ಸೆಳೆಯುವ ಉದ್ದೇಶದೊಂದಿಗೆ ಹಾಗೂ ಮಹಿಳೆಯರು ನಿಸ್ಸಂಕೋಚವಾಗಿ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲೆಯ 30 ಕೇಂದ್ರಗಳಲ್ಲಿ ಸಖೀ ಮತಗಟ್ಟೆಗಳನ್ನು ಸಿದ್ಧಗೊಳಿಸಲಾಗಿದೆ. ಪ್ರತಿ ಮತ ಕ್ಷೇತ್ರದಲ್ಲಿ ತಲಾ 5 ಸಖಿ ಮತಗಟ್ಟೆಗಳು ಮಹಿಳಾ ಮತದಾರರನ್ನು ಆಕರ್ಷಿಸಲಿವೆ. ಒಟ್ಟಾರೆ ಜಿಲ್ಲೆಯ ಜನತೆ ಶೇ.100 ರಷ್ಟು ಮತದಾನ ಮಾಡಲು ಮುಂದೆ ಬರಬೇಕು ಹಾಗಾದಾಗ ಮಾತ್ರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಯತ್‌ ಸಹಯೋಗದಲ್ಲಿ ಹಮ್ಮಿಕೊಂಡಿ ರುವ ಈ ವಿಶೇಷ ಅಭಿಯಾನ ಯಶಸ್ಸು ಕಾಣುತ್ತದೆ ಎಂದು ಯುಕೇಶ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next