Advertisement

Breastfeeding; ಮಗುವಿನ ರೋಗನಿರೋಧಕ ಶಕ್ತಿವರ್ಧನೆ; ಸ್ತನ್ಯಪಾನದ ಶಕ್ತಿ ಬಗ್ಗೆ ತಜ್ಞರ ಒಳನೋಟ

05:39 PM Aug 13, 2024 | Team Udayavani |

ಹುಟ್ಟಿನಿಂದಲೇ ಶಿಶುವಿಗೆ ಎದೆ ಹಾಲು ಅತ್ಯುತ್ತಮ ಆಹಾರ. ನವಜಾತ ಶಿಶುವಿನ ರೋಗನಿರೋಧಕ ವ್ಯವಸ್ಥೆಗೆ ಎದೆ ಹಾಲಿನಿಂದಾಗುವ ಪ್ರಯೋಜನಗಳ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಸಂಪೂರ್ಣ ಸುರಕ್ಷಿತ ಹಾಗೂ ಸೋಂಕು ಮುಕ್ತ ಪರಿಸರದಲ್ಲಿದ್ದ ಮಗುವು ಇದ್ದಕ್ಕಿದ್ದಂತೆ ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿಗಳು ಸೇರಿದಂತೆ ವಿವಿಧ ಜೀವಿಗಳಿಂದ ತುಂಬಿದ ಜಗತ್ತಿಗೆ ಕಾಲಿರಿಸುತ್ತದೆ. ಆ ಸಮಯದಲ್ಲಿ ನವಜಾತ ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆಯು ಇನ್ನೂ ಅಭಿವೃದ್ಧಿ ಹಂತದಲ್ಲಿರುತ್ತದೆ ಮತ್ತು ಮಗುವು ಸೋಂಕುಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಈ ಮಗುವನ್ನು ಸೋಂಕಿನಿಂದ ಮುಕ್ತವಾಗಿರಿಸುವ ಸವಾಲನ್ನು ಮತ್ತಷ್ಟು ಕಠಿಣವಾಗಿಸುತ್ತದೆ. ಸ್ತನ್ಯಪಾನವು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತದೆ ಎಂಬ ವಿವರ ಇಲ್ಲಿದೆ.

Advertisement

ಆರಂಭದಿಂದಲೇ ಸ್ತನ್ಯಪಾನ

ಮಗು ಜನಿಸಿದ ಮೊದಲ 30 ನಿಮಿಷಗಳಲ್ಲಿ ಸ್ತನ್ಯಪಾನವನ್ನು ಪ್ರಾರಂಭಿಸುವುದು ಬಹಳ ಮುಖ್ಯ. ಈ ಸಮಯದಲ್ಲಿ ತಾಯಿಯ ಎದೆ ಹಾಲು, ವಿಶೇಷವಾಗಿ ಅದರಲ್ಲಿನ ʻಕೊಲೊಸ್ಟ್ರಮ್ʼ ಅಂಶವು ʻಐಜಿಎʼನಂತಹ (Immunoglobulin A) ಪ್ರತಿಕಾಯಗಳನ್ನು ಸಮೃದ್ಧವಾಗಿ ಹೊಂದಿರುತ್ತದೆ. ಈ ಪ್ರತಿಕಾಯವು ಮಗುವಿನ ಜೀರ್ಣಾಂಗ ವ್ಯವಸ್ಥೆಯ ಉದಕ್ಕೂ ಸುತ್ತುವರಿದು ರೋಗಕಾರಕಗಳನ್ನು ಮಗುವಿನ ದೇಹ ಪ್ರವೇಶಿಸದಂತೆ ತಡೆಯುತ್ತದೆ. ಅಲ್ಲದೆ, ʻಐಜಿಜಿʼ ಮತ್ತು ʻಐಜಿಎಂʼನಂತಹ ಇತರ ಪ್ರತಿಕಾಯಗಳು ಎದೆ ಹಾಲಿನಲ್ಲಿರುತ್ತವೆ. ಇವು ಮಗುವಿನ ರಕ್ತದ ಹರಿವಿಗೆ ಪ್ರವೇಶಿಸಿ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಿಷ್ಕ್ರಿಯಗೊಳಿಸಲು ಸಹಾಯ ಮಾಡುತ್ತವೆ.

ಎದೆ ಹಾಲಿನಲ್ಲಿ ಪ್ರೋಬಯಾಟಿಕ್ ಸಂಯುಕ್ತಗಳು

Advertisement

ಎದೆ ಹಾಲಿನಲ್ಲಿ ಮಾನವ ಹಾಲಿನ ಆಲಿಗೋಸ್ಯಾಕರೈಡ್ ಗಳಿವೆ, ಇದನ್ನು ʻಬೈಫಿಡಸ್ʼ ಅಂಶ ಎಂದೂ ಕರೆಯಲಾಗುತ್ತದೆ. ಈ ನಿರ್ದಿಷ್ಟ ಪ್ರೋಬಯಾಟಿಕ್ ಸಂಯುಕ್ತಗಳು ಮಗುವಿನ ಕರುಳಿನಲ್ಲಿ ʻಬೈಫಿಡೋಬ್ಯಾಕ್ಟೀರಿಯಾʼದಂತಹ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಇದರಿಂದ ಅಲರ್ಜಿಗಳು, ಅಸ್ತಮಾ ಮತ್ತು ಬೊಜ್ಜಿನಂತಹ ದೀರ್ಘಕಾಲೀನ ಕಾಯಿಲೆಗಳಿಂದ ರಕ್ಷಿಸಲು ಸಹಾಯಕವಾಗುತ್ತದೆ, ಆರೋಗ್ಯಕರವಾದ ಕರುಳಿನ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಅಡಿಪಾಯ ಹಾಕುತ್ತದೆ. ಇಂತಹ ಶಿಶುಗಳು ಸಾಮಾನ್ಯವಾಗಿ ʻಫಾರ್ಮುಲಾ ಫೀಡ್ʼ ಶಿಶುಗಳಿಗಿಂತ ಹೆಚ್ಚು ದೃಢವಾಗಿರುತ್ತದೆ.

ಪ್ರತಿರಕ್ಷಣಾ ಜೀವಕೋಶಗಳು ಮತ್ತು ಜೈವಿಕ ಸಕ್ರಿಯ ಅಣುಗಳು

ಎದೆ ಹಾಲಿನಲ್ಲಿ ಪ್ರತಿರಕ್ಷಣಾ ಮತ್ತು ರೋಗನಿರೋಧಕವಲ್ಲದ ಜೀವಕೋಶಗಳು ಸಮೃದ್ಧವಾಗಿರುತ್ತವೆ. ಜೊತೆಗೆ ʻಸೈಟೋಕಿನ್‌ʼಗಳು, ʻಕೀಮೋಕಿನ್‌ʼಗಳು, ʻಲಿಪಿಡ್‌ʼಗಳು, ಹಾರ್ಮೋನುಗಳು ಮತ್ತು ಕಿಣ್ವಗಳು ಸೇರಿದಂತೆ ಜೈವಿಕ ಸಕ್ರಿಯ ಅಣುಗಳು ಸಹ ಎದೆ ಹಾಲಿನಲ್ಲಿ ಸಮೃದ್ಧವಾಗಿರುತ್ತವೆ. ಈ ಘಟಕಗಳು ರೋಗ ರಕ್ಷಣೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ʻಲಿಂಫೋಸೈಟ್‌ʼಗಳು, ʻಮ್ಯಾಕ್ರೋಫೇಜ್‌ʼಗಳು ಮತ್ತು ʻಗ್ರಾನುಲೋಸೈಟ್‌ʼಗಳಂತಹ ಜೀವಕೋಶಗಳು ಮಗುವಿನ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಮತ್ತು ದೀರ್ಘಕಾಲೀನ ರೋಗಗಳು ಮತ್ತು ಬೊಜ್ಜನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಉದಾಹರಣೆಗೆ, ಎದೆ ಹಾಲಿನಲ್ಲಿರುವ ಪ್ರಮುಖ ಜೈವಿಕ ಸಕ್ರಿಯ ಅಂಶವಾದ ʻಲ್ಯಾಕ್ಟೋಫೆರಿನ್ʼ, ಕಬ್ಬಿಣದ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ಮತ್ತು ಕಬ್ಬಿಣ ಅವಲಂಬಿತ ಬ್ಯಾಕ್ಟೀರಿಯಾಗಳು ಶಿಶುವಿನ ಕರುಳಿನಲ್ಲಿ ನೆಲೆಯೂರುವುದನ್ನು ತಡೆಯುತ್ತದೆ.

ತಾಯಿಯ ಪ್ರತಿಕಾಯಗಳು ಮತ್ತು ಪ್ರತಿರಕ್ಷಣಾ ಸಹಿಷ್ಣುತೆ

ತಾಯಿಯ ಪ್ರತಿಕಾಯಗಳು, ಆನುವಂಶಿಕವಲ್ಲದ ತಾಯಿಯ ಪ್ರತಿಜನಕಗಳು ಹಾಗೂ ತಾಯಿಯ ʻಲ್ಯೂಕೋಸೈಟ್‌ʼಗಳು ಮಗುವಿನ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದುಹೋಗುತ್ತವೆ ಮತ್ತು ಸ್ತನ್ಯಪಾನದ ಸಮಯದಲ್ಲಿ ಮಗುವಿನ ದೇಹದ ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ. ತಾಯಿಯ ʻಮೈಕ್ರೋಚಿಮೆರಿಸಂʼ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ಪ್ರತಿರಕ್ಷಣಾ ಸಹಿಷ್ಣುತೆಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಎದೆ ಹಾಲಿನಲ್ಲಿ ʻಮೈಕ್ರೋಬಯೋಟಾʼ, ʻಎಂಆರ್‌ಎನ್ಎʼ ಮತ್ತು ʻಎಕ್ಸೋಸೋಮ್‌ʼಗಳಿದ್ದು, ಇವು ಮಗುವಿನ ಕರುಳಿನಲ್ಲಿ ಟಿ ಸೆಲ್ ಶೇಖರಣೆಯನ್ನು ಉತ್ತೇಜಿಸುವ ಮೂಲಕ ರೋಗನಿರೋಧಕತೆ ಹೆಚ್ಚಳಕ್ಕೆ ಕೊಡುಗೆ ನೀಡುತ್ತವೆ. ಇದರಿಂದಾಗಿ ಸೋಂಕುಗಳನ್ನು ತಡೆಯಲು ಸಾಧ್ಯವಾಗುತ್ತದೆ.

ತಾಯಿಯ ಆರೋಗ್ಯ ಮತ್ತು ಆಹಾರದ ಪ್ರಭಾವ

ತಾಯಿಯ ಆರೋಗ್ಯ ಮತ್ತು ಆಹಾರವು ಎದೆ ಹಾಲಿನ ಗುಣಮಟ್ಟದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ. ದೇಹದ ತೂಕ, ವಯಸ್ಸು, ಜೀವನಶೈಲಿ ಮತ್ತು ಪೋಷಣೆಯಂತಹ ಅಂಶಗಳು ಎದೆ ಹಾಲಿನಲ್ಲಿರುವ ಲಿಪಿಡ್ ಜಾತಿಗಳು, ಮೈಕ್ರೋಬಯೋಟಾ, ಸೈಟೋಕಿನ್‌ಗಳು ಮತ್ತು ಪ್ರತಿರಕ್ಷಣಾ ಕೋಶಗಳ ಪ್ರಕಾರಗಳ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚಿನ ಕೊಬ್ಬು, ಅಧಿಕ ಕಾರ್ಬೋಹೈಡ್ರೇಟ್‌ಯುಕ್ತ ಆಹಾರವು ಮೈಕ್ರೋಬಯೋಟಾ ಸಂಯೋಜನೆಯನ್ನು ಅಡ್ಡಿಪಡಿಸುತ್ತದೆ, ರೋಗಾಣು ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇದಕ್ಕೆ ಪ್ರತಿಯಾಗಿ ನಾರಿನಾಂಶ, ಪ್ರೋಟೀನ್ ಮತ್ತು ಸಾಧಾರಣ ಮಟ್ಟದ ಕಾರ್ಬೋಹೈಡ್ರೇಟ್‌ ಇರುವಂತಹ ಆಹಾರವು ಶಿಶುವಿನ ಕರುಳಿನಲ್ಲಿ ʻಲ್ಯಾಕ್ಟೋಬಾಸಿಲಿʼಯಂತಹ ಆರೋಗ್ಯಕರ ಸೂಕ್ಷ್ಮಾಣುಜೀವಿಗಳನ್ನು ಬೆಳೆಸುತ್ತದೆ.

ಸ್ತನ್ಯಪಾನದ ದೀರ್ಘಕಾಲೀನ ಪ್ರಯೋಜನಗಳು

ಸ್ತನ್ಯಪಾನವು ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಪಕ್ವವಾಗುವವರೆಗೆ ಹೊರ ಪರಿಸರ ಜೀವಿಗಳಿಂದ ಸೂಕ್ತ ರಕ್ಷಣೆಯನ್ನು ಒದಗಿಸುತ್ತದೆ. ಇದಕ್ಕಾಗಿಯೇ ಆರೋಗ್ಯ ತಜ್ಞರು ಜನನದಿಂದ ಕನಿಷ್ಠ ಎರಡು ವರ್ಷದವರೆಗೆ ಸ್ತನ್ಯಪಾನವನ್ನು ಶಿಫಾರಸು ಮಾಡುತ್ತಾರೆ. ಎದೆ ಹಾಲಿನ ವಿಶಿಷ್ಟ ಸಂಯೋಜನೆಯು, ಶಿಶುಗಳ ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕುವ ಮೂಲಕ ಆ ಮಗುವು ಜೀವನದಲ್ಲಿ ಅತ್ಯುತ್ತಮ ಆರಂಭವನ್ನು ಪಡೆಯುವಂತೆ ಖಚಿತಪಡಿಸುತ್ತದೆ.

ಕೊನೆಯದಾಗಿ ಹೇಳುವುದಾದರೆ, ಸ್ತನ್ಯಪಾನವು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶಕ್ತಿಯುತ ಸಾಧನವಾಗಿದೆ. ಇದರ ಪ್ರಯೋಜನಗಳು ಕೇವಲ ಮಗುವಿನ ಪೋಷಣೆಯನ್ನು ಮೀರಿ ವಿಸ್ತರಿಸಿವೆ. ಎದೆ ಹಾಲು ಸೋಂಕುಗಳ ವಿರುದ್ಧ ಸಾಕಷ್ಟು ರಕ್ಷಣೆಯನ್ನು ಒದಗಿಸುತ್ತದೆ ಮತ್ತು ದೃಢವಾದ ಪ್ರತಿರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಅಗತ್ಯ ಪೋಷಕಾಂಶಗಳು, ಪ್ರತಿಕಾಯಗಳು ಮತ್ತು ಇತರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಘಟಕಗಳನ್ನು ಒದಗಿಸುವ ಮೂಲಕ ಎದೆ ಹಾಲು ಮಗುವಿನ ಆರೋಗ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಜೊತೆಗೆ ಮಗುವಿನ ಸೂಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ.

-ಸೌಂದರ್ಯ ಎಂ, ಮಕ್ಕಳ ತಜ್ಞರು, ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next