Advertisement

ಬೂಸ್ಟರ್‌ ಡೋಸ್‌ ಲಸಿಕೆ ಪಡೆಯಲು 5.5 ಲಕ್ಷ ಮಂದಿ ಬಾಕಿ

01:28 PM Jul 15, 2022 | Team Udayavani |

ಮಹಾನಗರ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೋವಿಡ್‌ ಪ್ರಕರಣ ತುಸು ಏರಿಕೆಯತ್ತ ಸಾಗುತ್ತಿದ್ದು, ಬೂಸ್ಟರ್‌ ಡೋಸ್‌ ಲಸಿಕೆ ಪಡೆದುಕೊಳ್ಳಲು ಹೆಚ್ಚಿನ ಮಂದಿ ಆಸಕ್ತಿ ತೋರುತ್ತಿಲ್ಲ. ಪಾಲಿಕೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಸುಮಾರು 5.5 ಲಕ್ಷ ಮಂದಿ ಅರ್ಹರು ಇನ್ನೂ ಬೂಸ್ಟರ್‌ ಡೋಸ್‌ ಲಸಿಕೆ ಪಡೆದಿಲ್ಲ.

Advertisement

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಿಂದ ಜು. 15ರಿಂದ 75 ದಿನಗಳ ಕಾಲ 18 ರಿಂದ 59 ವಯಸ್ಸಿನವರಿಗೆ ಉಚಿತ ಮುನ್ನೆಚ್ಚರಿಕೆ ಡೋಸ್‌ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು, ಲಸಿಕೆಯ ಪಡೆಯುವವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಬೂಸ್ಟರ್‌ ಡೋಸ್‌ ಲಸಿಕೆ ಪಡೆಯಲು ಕೇಂದ್ರ ಸರಕಾರ ಎಪ್ರಿಲ್‌ ತಿಂಗಳಿನಲ್ಲಿಯೇ ಅನುಮತಿ ನೀಡಿತ್ತು. 18 ರಿಂದ 60 ವರ್ಷದೊಳಗಿನ ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಬೆಲೆಯೊಂದಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ನಿಗದಿಗೊಳಿಸಲಾಗಿತ್ತು. ಆದರೆ ಹಣ ನೀಡಿ ಹೆಚ್ಚಿನ ಮಂದಿ ಲಸಿಕೆ ಪಡೆದುಕೊಳ್ಳುತ್ತಿರಲಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯ/ಕೇಂದ್ರ ಸರಕಾರವು ಎಲ್ಲ ವಯೋಮಿತಿಯವರಿಗೆ ಬೂಸ್ಟರ್‌ ಡೋಸ್‌ ಉಚಿತವಾಗಿ ನೀಡಿದರೆ ಆಗ ಪಡೆದುಕೊಳ್ಳೋಣ ಎಂಬ ಭಾವನೆ ಅನೇಕರಲ್ಲಿತ್ತು. ಇದೀಗ ಉಚಿತ ಲಸಿಕೆ ನೀಡುವತ್ತ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಜಿಲ್ಲೆಯ ಲಸಿಕಾ ಪ್ರಗತಿ ಹೆಚ್ಚುವ ನಿರೀಕ್ಷೆ ಇದೆ.

ಅಂತರ ಇಳಿಕೆ

ಕೋವಿಡ್‌ ಬೂಸ್ಟರ್‌ ಡೋಸ್‌ ಪಡೆದುಕೊಳ್ಳುವ ಅಂತರವನ್ನು ಕೇಂದ್ರ ಆರೋಗ್ಯ ಸಚಿವಾಲಯ ಇಳಿಕೆ ಮಾಡಿದೆ. ಅದರಂತೆ 2ನೇ ಹಂತದ ಲಸಿಕೆ ಪಡೆದುಕೊಂಡ 9 ತಿಂಗಳ ಬದಲಾಗಿ 6 ತಿಂಗಳಿಗೆ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ ಪ್ರಕಾರ 9 ತಿಂಗಳು ಅಥವಾ 39 ವಾರಗಳ ಬದಲಾಗಿ 6 ತಿಂಗಳು ಅಥವಾ 26 ವಾರಗಳಲ್ಲಿ ಇದೀಗ 18-59 ವಯಸ್ಸಿನ ಫಲಾನುಭವಿಗಳು ಬೂಸ್ಟರ್‌ ಡೋಸ್‌ ಪಡೆದುಕೊಳ್ಳಬಹುದಾಗಿದೆ.

ಬೂಸ್ಟರ್‌ ಡೋಸ್‌ ಪಡೆಯಲು ಬಾಕಿ ಎಷ್ಟು?

Advertisement

ಕೋವಿಡ್‌ ಮುನ್ನೆಚ್ಚರಿಕೆ ಡೋಸ್‌ ಪಡೆದುಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10,21,823 ಮಂದಿ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಲು ಬಾಕಿ ಇದ್ದಾರೆ. ಅದೇ ರೀತಿ, 7,360 ಮಂದಿ ಮುಂಚೂಣಿ ಕಾರ್ಯಕರ್ತರು, 19,384 ಮಂದಿ ಆರೋಗ್ಯ ಕಾರ್ಯಕರ್ತರು ಬೂಸ್ಟರ್‌ ಡೋಸ್‌ ಪಡೆದುಕೊಂಡಿಲ್ಲ. ಒಟ್ಟಾರೆ 10,48,567 ಮಂದಿ ಈಗಾಗಲೇ ಬೂಸ್ಟರ್‌ ಡೋಸ್‌ ಪಡೆದುಕೊಂಡಿಲ್ಲ.  

ಅಧಿಕೃತ ಸೂಚನೆ ಬಂದ ಕೂಡಲೇ ಕ್ರಮ: 8 ರಿಂದ 59 ವಯಸ್ಸಿನವರಿಗೆ ಉಚಿತ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಈ ಕುರಿತಂತೆ ಅಧಿಕೃತ ಅಧಿಸೂಚನೆ ಬಂದ ಕೂಡಲೇ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯ 60 ವರ್ಷ ಮೇಲ್ಪಟ್ಟರಿಗೆ ಉಚಿತ ಬೂಸ್ಟರ್‌ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಮುಂಬರುವ ಅಪಾಯ ತಡೆಯುವ ನಿಟ್ಟಿನಲ್ಲಿ ಅರ್ಹರು ಬೂಸ್ಟರ್‌ ಡೋಸ್‌ ಲಸಿಕೆ ಪಡೆಯಲು ಮುಂದೆಬರಬೇಕು. – ಡಾ| ರಾಜೇಶ್‌, ಆರೋಗ್ಯ ಇಲಾಖೆ ಆರ್‌ಸಿಎಚ್‌ ಅಧಿಕಾರಿ

ಬೂಸ್ಟರ್‌ ಡೋಸ್‌ ಪಡೆದವರೆಷ್ಟು?

ವಿಭಾಗ                                             ಸಂಖ್ಯೆ

ಆರೋಗ್ಯ ಕಾರ್ಯಕರ್ತರು            22,435

ಮುಂಚೂಣಿ ಕಾರ್ಯಕರ್ತರು       8,883

18ರಿಂದ 44 ವರ್ಷ                          3,718

45ರಿಂದ 60 ವರ್ಷ                         2,278

60 ವರ್ಷ ಮೇಲ್ಪಟ್ಟು                    65,729

Advertisement

Udayavani is now on Telegram. Click here to join our channel and stay updated with the latest news.

Next