ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ ಅನವಶ್ಯಕ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದರು.
ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡಬೇಕು. ಜನರಿಗೆ ಒಳ್ಳೆಯ ಕೆಲಸ ಆಗಬೇಕು. ರೈತರ ಹಾಗೂ ರಾಜ್ಯದ ಅಭಿವೃದ್ಧಿ ಮುಖ್ಯ ಹೊರತು ಅನಗತ್ಯ ಹೇಳಿಕೆ ಕೊಡುವುದು ಸರಿಯಲ್ಲ. ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೇವೆ. ಹಿರಿಯರಾಗಿ ಈ ರೀತಿಯಲ್ಲಿ ಹೇಳಿಕೆ ಕೊಡುವುದು ಸರಿಯಲ್ಲ. ನಾವು ಎಷ್ಟು ಸೀಟು ಗೆದ್ದಿದ್ದೇವೆ ಎಂಬುದು ಈಗ ಅಪ್ರಸ್ತುತ. ನಾವು ಈಗ ಎಷ್ಟು ಸೀಟು ಗೆಲ್ಲುತ್ತೇವೆ ಎಂಬುದು ಮುಖ್ಯ ಎಂದರು.
ಕೆಲವರು ಅಭಿಮಾನದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಹೇಳುತ್ತಿದ್ದಾರೆ ವಿನಃ ಈಗಲೇ ಮುಖ್ಯಮಂತ್ರಿ ಆಗಬೇಕೆಂದು ಹೇಳಿಲ್ಲ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಬೇಷರತ್ ಬೆಂಬಲವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಹೀಗಾಗಿ ಆ ಪ್ರಶ್ನೆ ಈಗ ಉದ್ಭವಿಸಲ್ಲ. ಏನೇ ಇದ್ದರೂ 2023ರ ಚುನಾವಣೆ ವೇಳೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ವಿಚಾರ ಇದೀಗ ಅಪ್ರಸ್ತುತ ಎಂದರು.
ಚುನಾವಣೆ ನಂತರ ಸರ್ಕಾರ ಪತನಗೊಳ್ಳಲಿದೆ ಎಂಬುದು ಕನಸಿನ ಮಾತು. ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಅನಗತ್ಯ ಗೊಂದಲ ಬೇಡ. ಈಗಾಗಲೇ ಮೈತ್ರಿ ಸರ್ಕಾರ ಪರವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಕೂಡ ಸ್ಪಷ್ಟಪಡಿಸಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಐದು ವರ್ಷದ ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಅವರ ಹೇಳಿಕೆ ಮಾತ್ರ ಸಮಂಜಸವಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಬಂದಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಮೈತ್ರಿ ಸರ್ಕಾರ ಕೂಡ ರಚನೆಯಾಗಿದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ಕೊಡಬಾರದು. ಯೋಚಿಸಿ ಮಾತನಾಡಬೇಕು. ಎಲ್ಲರೂ ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದರು.
ಬೇಜವಾಬ್ದಾರಿ ಹೇಳಿಕೆ ಸಲ್ಲ; ಹೊರಟ್ಟಿ ಎಚ್ಚರಿಕೆ
ಹುಬ್ಬಳ್ಳಿ: ಪಕ್ಷದ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ ಜವಾಬ್ದಾರಿಯಿಂದ ಮಾತನಾಡಬೇಕು. ಮೈತ್ರಿ ಮಾಡಿಕೊಂಡ ಮೇಲೆ ಮಿತ್ರಪಕ್ಷದ ನಾಯಕರ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಎಚ್ಚರಿಸಿದರು. ಕುಂದಗೋಳದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಒಂದಿಷ್ಟು ಗೊಂದಲ, ಭಿನ್ನಾಭಿಪ್ರಾಯಗಳು ಇರುವುದು ಸಾಮಾನ್ಯ. ಮೈತ್ರಿ ಮಾಡಿಕೊಳ್ಳುವ ಮುಂಚೆ ಇದನ್ನೆಲ್ಲ ಯೋಚಿಸಬೇಕು. ಈಗ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ನಂತರ ರಾಜ್ಯಾಧ್ಯಕ್ಷರಾಗಿ ಹೀಗೆ ಮಾತಾಡೋದು ಸರಿಯಲ್ಲ. ಇಂತಹದ್ದು ಉದ್ಯೋಗ ಇಲ್ಲದವರು ಮಾತನಾಡಿದಂತಾಗುತ್ತದೆ. ಶಾಸಕ ನಾರಾಯಣಗೌಡ ಕೂಡ ಇಂತಹ ಹೇಳಿಕೆ ನೀಡುವುದು ತಪ್ಪು. ಹಿಂದೆ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಬೇಡಿ ಎಂದು ಬಸ್ ಟಯರ್ ಅಡಿ ಮಲಗಿಕೊಂಡಿದ್ದ ಜಮೀರ್ ಅಹ್ಮದ್. ಈಗ ಕುಮಾರಸ್ವಾಮಿ ತಪ್ಪಿನಿಂದ ರಾಜ್ಯದಲ್ಲಿ ಬಿಜೆಪಿ ಬೆಳೆದಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಜಮೀರ್ ಕೂಡ ಕಾರಣರಾಗಿದ್ದಾರೆ. ಈ ಮಾತನ್ನು ಅವರ ಮುಂದೆಯೇ ಹೇಳುತ್ತೇನೆ. 20-20 ಸರ್ಕಾರ ಇದ್ದಾಗ ಅಧಿಕಾರ ಬಿಟ್ಟು ಕೊಡುವಂತೆ ಹೇಳಿ ನಾನು ಕೆಂಗಣ್ಣಿಗೆ ಗುರಿಯಾಗಿದ್ದೆ ಎಂದರು.
ದಳ ರಾಜ್ಯಾಧ್ಯಕ್ಷರ ಸಣ್ಣ ಪುಟ್ಟ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ: ವೇಣುಗೋಪಾಲ್
ಹುಬ್ಬಳ್ಳಿ: ವಿಶ್ವನಾಥ ಅವರ ಸಣ್ಣಪುಟ್ಟ ಹೇಳಿಕೆಗಳಿಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ಕೆಲವು ಶಾಸಕರು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಅಭಿಪ್ರಾಯ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಹೇಳಿದ್ದಾರೆ. ಕುಂದಗೋಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರುವ ಹೇಳಿಕೆ ನೀಡದಂತೆ ರಾಜ್ಯಾಧ್ಯಕ್ಷ ದಿನೇಶ ಗುಂಡೂರಾವ್ ಸೂಚನೆ ಕೊಟ್ಟಿದ್ದಾರೆ. ಮೇಲಾಗಿ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಹೆಚ್ಚು ಒತ್ತು ಕೊಡುವುದು ಬೇಡ. ಮೈತ್ರಿ ಸರ್ಕಾರ ಸುಭದ್ರವಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದರು.
Related Articles
Advertisement
•ಯು.ಟಿ. ಖಾದರ, ಸಚಿವ