Advertisement

Books Love: ಪುಸ್ತಕಗಳ ಬೆನ್ನು ಹತ್ತಿ…

06:09 PM Aug 04, 2024 | Team Udayavani |

ಬೆಂಗಳೂರಿನಲ್ಲಿ ಏರಿಯಾಕ್ಕೆ ಒಂದರಂತೆ ಪುಸ್ತಕ ಮಳಿಗೆಗಳಿವೆ. ಆನ್‌ಲೈನ್‌ ಮೂಲಕವೂ ಪುಸ್ತಕ ಮಾರಾಟ ನಡೆಯುತ್ತದೆ. ಆದರೆ ಅಲ್ಲಿ ಓದುಗರು ಬಯಸುವ ಎಲ್ಲಾ ಬಗೆಯ ಪುಸ್ತಕಗಳು ಸಿಗುತ್ತವಾ? ಎಂಬುದು ಹಲವರ ಪ್ರಶ್ನೆ. ತಮಗೆ ಬೇಕಾದ ಪುಸ್ತಕವನ್ನು ಹುಡುಕಿಕೊಂಡು ಹೊರಟಾಗ ಆದ ಸಿಹಿ-ಕಹಿ ಅನುಭವವನ್ನು ಲೇಖಕಿ ಇಲ್ಲಿ ವಿವರವಾಗಿ ದಾಖಲಿಸಿದ್ದಾರೆ…

Advertisement

ಪುಸ್ತಕದ ಹುಳುವಿನ ತಲೆಯಲ್ಲಿ ಪುಸ್ತಕವೆಂಬ ಹುಳು ಸೇರಿದಾಗ ಏನಾಗಬಹುದು? ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿನಿಯಾದ ನನಗೆ ಕನ್ನಡ ಸಾಹಿತ್ಯದ ಪರಿಚಯವಾಗುತ್ತಿರು­ವುದು ಫೇಸ್‌ಬುಕ್‌ನಿಂದ. ಖ್ಯಾತ ಬರಹಗಾರರೊಬ್ಬರ ಲೇಖನ, ಕವನಗಳನ್ನು ಓದುತ್ತ ಅವರ ಎಲ್ಲ ಬರಹಗಳನ್ನು ಓದಬೇಕೆಂಬ ಉತ್ಕಟ ಆಸೆ. ಮೆಸೇಜ್‌ ಮಾಡಿ “ನಿಮ್ಮ ಪುಸ್ತಕ ಎಲ್ಲಿ ಸಿಗಬಹುದು?’ ಎಂದು ಕೇಳಿದೆ. ಅವಸರದಲ್ಲಿದ್ದರೇನೋ ಪಾಪ. “ಬಹುರೂಪಿ’, “ಬುಕ್‌ಬ್ರಹ್ಮ’ದಲ್ಲಿ ಸಿಗುತ್ತದೆ ಎಂದರು. ನನಗೋ ಆತುರ. ತಕ್ಷಣ ಸಿಗಬೇಕು. ಗೂಗಲ್‌ನಲ್ಲಿ ಚೆಕ್‌ ಮಾಡಿದೆ. ಅಲ್ಲಿ ತೋರಿಸಿದ ಲೊಕೇಶನ್‌ ಹಿಡಿದು “ಬಹುರೂಪಿ’ಯ ಸಂಜಯನಗರದ ಕಟ್ಟಡಕ್ಕೆ 120 ರೂ. ಕೊಟ್ಟು ಆಟೋದಲ್ಲಿ ಹೋದೆ. ಕಚೇರಿ ಅಲ್ಲಿ ಇಲ್ಲವೆಂದು ತಿಳಿದು ಪೆಚ್ಚೆನಿಸಿತು. ಮತ್ತೆ ಆ ಲೇಖಕರಿಗೆ ಮೆಸೇಜ್‌ ಮಾಡಿದೆ. ಅವರು ಅತ್ಯಂತ ಸಾವಧಾನವಾಗಿ- “ಆನ್‌ಲೈನ್‌ನಲ್ಲಿ ಸಿಗುತ್ತದೆ ಸುಚೇತಾ’ ಎಂದರು.

ಬಹುರೂಪಿಗೆ ಕಳಿಸಿದ್ದ ಇ-ಮೇಲ್‌ಗೆ ಜವಾಬು ಬರುವವರೆಗೆ ಕಾಯುವ ತಾಳ್ಮೆ ಬೇಕಲ್ಲ. ಅಂಕಿತ, ಅಮೂಲ್ಯ, ಹರಿವು ಇನ್ನೂ ಯಾವ್ಯಾವುದೋ ಮಳಿಗೆಗಳ ವಿಳಾಸ ಹುಡುಕಿದೆ. ಅವು ಬೆಂಗಳೂರಿನ ಅಷ್ಟ ದಿಕ್ಕುಗಳಲ್ಲಿ ಒಂದೊಂದು ಇದ್ದವು. ಮಲ್ಲೇಶ್ವರದಲ್ಲಿರುವ ಅಮ್ಮನ ಮನೆಯಿಂದ ದೂರದ ಎಲೆಕ್ಟ್ರಾನಿಕ್‌ ಸಿಟಿಗೆ ಹೋಗಬೇಕಾ­ದರೆ ದಾರಿ ತಿಳಿಯದು. ಮತ್ತೆ ಗೂಗಲ್‌ ಮೊರೆಹೋಗಿ ಲೊಕೇಶನ್‌ ಹುಡುಕಿ ಆಟೋ ಹತ್ತಿದ್ದೇ ನಿಮ್ಹಾನ್ಸ್‌, ಕಿದ್ವಾಯಿ, ಸೆಂಟ್‌ ಜಾನ್ಸ್‌, ಧರ್ಮಾರಾಮ್‌ ಕಾಲೇಜಿನ ಗಡಿ ದಾಟಿ ಮುಂದಕ್ಕೆ ಹೋಗಿದ್ದಾಯಿತು. ದಾರಿಯುದ್ದಕ್ಕೂ ಮೆಟ್ರೋ ನಿಲ್ದಾಣಗಳು ಕಂಡವು. ಹಿಂತಿರುಗುವಾಗ ಮೆಟ್ರೋ ಹಿಡಿಯುವುದೆಂದು ಪ್ಲಾನ್‌ ಮಾಡಿದೆ. ಕೊನೆಗೂ “ಬುಕ್‌ಬ್ರಹ್ಮ’ನ ಸ್ವರ್ಗದ ಕೆಳಗೆ ನಿಂತು ಫೋನಾಯಿಸಿದರೆ ಮೇಲಿಂದ ಅತ್ಯಂತ ಸಭ್ಯ ದನಿ, “ನಾವು ಪುಸ್ತಕ ಪರಿಚಯ ಮಾತ್ರ ಕೊಡುತ್ತೇವೆ, ಇಲ್ಲಿ ಯಾವುದೇ ಮಳಿಗೆಯಿಲ್ಲ. ಆನ್‌ಲೈನ್‌ ಮಾತ್ರ’. ಆಟೋದವನಿಗೆ 489 ರೂ. ಕೊಟ್ಟು ಕಳಿಸಿದೆ.

ಊಟಕ್ಕೆ ಮನೆಗೆ ಬರುವೆನೆಂದು ಹೇಳಿ ಹೋದವಳಿಗೆ ನಿರಾಸೆಯಿಂದ ಹಸಿವೆ. ಆಟೋಗೆ ದಂಡ ಎಂಬಂತೆ ದುಡ್ಡು ಸುರಿದೆ ಎಂಬುದಕ್ಕಿಂತ ಪುಸ್ತಕ ಸಿಗದಿರುವುದೇ ಬೇಜಾರು. ಮನೆಗೆ ಮರಳಲು ಮೆಟ್ರೋ ಸ್ಟೇಷನ್‌ಗೆ ಬಿಡಿ ಎಂದು ಆಟೋದವರನ್ನು ಕೇಳಿದರೆ, “ಮೇಡಂ, ಇಲ್ಲಿ ಹತ್ರ ಎಲ್ಲೂ ಮೆಟ್ರೋ ಬರಲ್ಲ’ ಅಂದರು! ಸರಿ, ಮತ್ತೂಮ್ಮೆ ಬಸ್‌ಸ್ಟಾಪಿಗೆ ಆಟೋ. 100 ರೂ. ಚಾರ್ಜು! ಅಲ್ಲಿಂದ ಹಣ ತೆತ್ತು ಹೋಗುವ ವಾಯು ವಜ್ರ ಸಿಟಿ ಬಸ್‌. ಅಲ್ಲಿಂದ ಮತ್ತೆ ಇನ್ನೊಂದು ಬಸ್‌. ಮನೆಗೆ ಹೋದಾಗ ಎಲ್ಲರ ಮೇಲೆ ಸಿಡುಕಿದ್ದಾಯಿತು.

ಮಾರನೇ ದಿನ ತಂಗಿ ಹೇಳಿದಳು: “ಅಕ್ಕ ಒಂದಷ್ಟು ಪುಸ್ತಕ ಕೊಡುವೆನೆಂದಿದ್ದಾಳೆ. ಹೋಗಿ ತರಬೇಕು…’ ನಾನಾಗಲೇ ಓದಿಯಾಗಿದ್ದ ಇಂಗ್ಲೀಷ್‌ ಪುಸ್ತಕಗಳು. ಆದರೂ ಬಸವನಗುಡಿಯ ಅವರ ಮನೆಗೆ ಹತ್ತಿರದಲ್ಲೇ ಎರಡು ಪುಸ್ತಕ ಮಳಿಗೆಗಳಿದ್ದವು. ಆಸೆ ಬಿಡದು. ಮತ್ತೆ ಆಟೋಗೆ 250 ರೂ. ಅಕ್ಕನ ಮನೆ ಊಟ, ಅವಳು ಕೊಟ್ಟ ಪುಸ್ತಕಗಳ ಹೊರೆ, ಆತುರ. ನಡೆದುಕೊಂಡೇ ಹೋಗಬಹುದಾಗಿದ್ದ ಡಿವಿಜಿ ರಸ್ತೆ ತಲುಪಲೂ ಆಟೋ ಹತ್ತಿದ್ದಾಯಿತು. ರೋಟಿಘರ್‌, ಡಿವಿಜಿ ರೋಡ್‌, ಉಪಹಾರ ದರ್ಶಿನಿ, ವಿದ್ಯಾರ್ಥಿ ಭವನ ಸುತ್ತಾಡಿ ಎಲ್ಲರನ್ನೂ ಆ ಬುಕ್‌ಶಾಪ್‌ನ ವಿಳಾಸ ಕೇಳಿದ್ದೆ. ಡಿವಿಜಿ ರಸ್ತೆ ಬಿಟ್ಟು ಮನೆಗಳಿರುವ ನಾಗಸಂದ್ರ ಸರ್ಕಲ್‌ ಬಳಿ ಕೇಳಿದರೆ “ಪತಾ ನಹಿ ಜೀ!’. “ಐ ಡೋಂಟ್‌ ನೊ, ಕನ್ನಡ್‌ ಗೊತ್ತಿಲ್ಲ.’ ಡಿವಿಜಿ ರಸ್ತೆ ಬಳಿ ಕೊನೆಗೂ ಕನ್ನಡ ಮಾತು “ಮೇಡಂ, ಇದು ಅಲ್ಲಿ ಗುಡಿಯಿಂದ ಮುಂದೆ ಸೀದಾ ಹೋಗಿ ಬಲಕ್ಕೆ ತಿರುಗಿ…’ ಗುಡಿ ಸಿಕ್ಕಿತು, ಮಳಿಗೆ ಸಿಗಲಿಲ್ಲ. ಫೋನಾಯಿಸಿದರೆ ಲೊಕೇಶನ್‌ ಮ್ಯಾಪ್‌ ಕಳಿಸಿದ. ಮತ್ತೆ ಗೊಂದಲ. ಫೋನಾಯಿಸಿ “ಇಂತಲ್ಲಿದ್ದೇನೆ ಹೇಗೆ ಬರಬೇಕು?’ ಎಂದರೆ “ವಿನಾಯಕ ಜ್ಯೂಸ್‌ ಇದೆ, ಅದರೆದುರಿಗೆ…’ ಅಂದ! ಜ್ಯೂಸ್‌ ಅಂಗಡಿ ಎದುರು ಬರೀ ಮನೆಗಳು. ಇನ್ನೊಂದು ಕಡೆ ಅಪೋಲೊ ಔಷಧಿ ಅಂಗಡಿ… ಮತ್ತೆ ಕೇಳುವುದು, ಹುಡುಕುವುದು. ಆಗಾಗ 50 ವರ್ಷ ಹಿಂದಕ್ಕೆ ಹೋಗುವುದು. ಅಮ್ಮನ ಸೆರಗು ಹಿಡಿದು ತರಕಾರಿ, ಸಾಮಾನು ತರಲು ಬರುತ್ತಿದ್ದ ರಸ್ತೆ, ಬಾಲ್ಯದ ನೆನಪುಗಳು…

Advertisement

ಅಂತೂ ಕೊನೆಗೂ ಮೂಲೆಯಲ್ಲಿ ಮಳಿಗೆ ಸಿಕ್ಕಿತು. ವೆಬ್‌ಸೈಟ್‌ನಲ್ಲಿದ್ದ ಫೋಟೊ ಹತ್ತಿರದಿಂದ ತೆಗೆದದ್ದು. ವಾಸ್ತವದಲ್ಲಿ ಎಷ್ಟೋ ಅಂಗಡಿಗಳ ಮಧ್ಯೆ ಬ್ಯಾನರ್‌ಗಳ ಹಿಂದೆ ಇತ್ತು. ಕೊನೆಗೂ ಕಂಡಿತು. ಸೀರೆ ಅಂಗಡಿಯಂತೆ ನಿಯಾನ್‌ ಲೈಟ್‌ ಬೋರ್ಡ್‌ ಹಾಕಿದ್ದಾರೆ ಎನ್ನಿಸಿತು. ನನಗೆ ಬೇಕಾದ ಪುಸ್ತಕದ ಪಟ್ಟಿಯಲ್ಲಿ ಒಂದು ಸಿಕ್ಕಿತು. ಇದಾದರೂ ಸಿಕ್ಕಿತÇÉಾ ಎಂದು ಇನ್ನೊಂದನ್ನೂ ಸೇರಿಸಿ 350 ರೂ. ಕೊಟ್ಟು ಎರಡು ಪುಸ್ತಕ ಕೊಂಡಿ¨ªಾಯಿತು. ಮತ್ತೆ ಮೆಟ್ರೋ ಹತ್ತಿ ಹೋಗೋಣವೆಂದರೆ, ಅಕ್ಕ ಕೊಟ್ಟ ಪುಸ್ತಕ, ಮತ್ತಿದು. “ನಮ್ಮ ಯಾತ್ರಿ’ಯಾಗಲಿ, ಗಗನ ಯಾತ್ರಿಯಾಗಲಿ, ಓಲಾ, ಉಬರ್‌ ಆಗಲಿ ಇಲ್ಲ. ಮತ್ತೆ ಆಟೋಗೆ 250 ರೂ. ಕೊಟ್ಟು ಮನೆ ಸೇರಿದ್ದಾಯಿತು.

ಎರಡು ಪುಸ್ತಕ ಸಿಕ್ಕರೂ ಸಮಾಧಾನ­ವಿಲ್ಲ. ಅಮ್ಮ, ತಂಗಿ ಕೇಳಿದರು: “ಪುಸ್ತಕ ಸಿಕ್ಕಿತಾ? ಅಷ್ಟು ದೂರ ಆಟೋ ಮಾಡಿಕೊಂಡು ಹೋದೆಯಲ್ಲಾ?’ “ಹೂ, ಉಹೂ’. ಮತ್ತೆ ಆ ಲೇಖಕರಿಗೆ ಮೆಸೇಜ್‌ ಮಾಡಿದೆ. ಅವರು ಅತ್ಯಂತ ಸಾವಧಾನವಾಗಿ “ಆನ್‌ಲೈನ್‌ನಲ್ಲಿ ಸಿಗುತ್ತದೆ ಸುಚೇತಾ’ ಎಂದರು. ಇ-ಮೇಲ್‌ಗೆ “ಬಹುರೂಪಿ’ಯ ಜವಾಬು ಬರುವವರೆಗೆ ಕಾಯುವ ತಾಳ್ಮೆ ಬೇಕಲ್ಲ. ಆಟೋಗೆ 200 ರೂ. ಕೊಟ್ಟು ಇನ್ನೊಂದು ಮಳಿಗೆಗೆ ಹೋದರೆ ಅದು ಗೋಡೌನ್‌ನಂತೆ. ಒಂದು ಇದೆ, ಇನ್ನೊಂದು ಕಂಪ್ಯೂಟರ್‌ನಲ್ಲಿದೆ, ಶೆಲ್ಫ್ನಲ್ಲಿಲ್ಲ ಎಂದಾಗ ನಾನೇ ಏಣಿ ಏರಿ ಹುಡುಕ ಹೋದೆ. ಮೂರು ದಪ್ಪ ಪುಸ್ತಕ ಕನ್ನಡಕದ ಮೇಲೆ ಬಿದ್ದು ಕನ್ನಡಕ ಮುರಿದುಬಿತ್ತು. ಒಂದಾದರೂ ಪುಸ್ತಕ ಸಿಕ್ಕಿಬಿಟ್ಟಿತೆಂಬ ಖುಷಿಯಲ್ಲಿ ಒಡೆದ ಕನ್ನಡಕ ಮರೆತೆ. ತಂದ ಪುಸ್ತಕವನ್ನೇ ಓದಲು ಶುರು ಮಾಡಿದೆ. ಕೊನೆ ಪುಟಕ್ಕೆ ಹೋದರೆ ಆ ಲೇಖಕರ ಪುಸ್ತಕದ ಪಟ್ಟಿ ಉದ್ದ. ಆದರೆ ಲಭ್ಯವಿಲ್ಲ. ಮತ್ತೆ ಆನ್‌ಲೈನ್‌ನಲ್ಲಿ ಹುಡುಕಿದಾಗ ಇನ್ನೊಂದು ಸಿಕ್ಕಿತು. ರಿಯಾಯಿತಿ ಕಳೆದು 375 ರೂ. ಎರಡು ದಿನಗಳ ಬಳಿಕ ಅದು ಮನೆಗೇ ಬಂದಿತ್ತು. ಒಡೆದ ಕನ್ನಡಕಕ್ಕೆ ಬದಲಿ ಹೊಸ ಕನ್ನಡಕ…15 ಸಾವಿರ ರೂ! ಅಮ್ಮ ಕೇಳಿದರು, “ಒಟ್ಟು ಪುಸ್ತಕಕ್ಕೆ ಎಷ್ಟು ಖರ್ಚು ಮಾಡಿದೆ?’ ಲೆಕ್ಕ ಬರೆದುಕೊಂಡೆ: ಪುಸ್ತಕಗಳ ಖರೀದಿಗೆ ಒಟ್ಟು 900 ಚಿಲ್ಲರೆ ರೂ., ಆಟೋ 1600 ರೂ., ಕನ್ನಡಕ 15 ಸಾವಿರ ರೂ.!

-ಡಾ.ಸುಚೇತಾ ಪೈ, ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next