ಶಹಾಪುರ: ಪುಸ್ತಕಗಳು ಜ್ಞಾನ ನೀಡುವುದರ ಜೊತೆಗೆ ಮನುಷ್ಯನ ಬದುಕಿಗೆ ದಾರಿ ದೀಪಗಳಾಗುತ್ತವೆ ಎಂದು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು. ನಗರದ ಎಸ್.ಬಿ. ದೇಶಮುಖ ಪದವಿ ಕಾಲೇಜಿನಲ್ಲಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ನಡೆದ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಕೃತಿಗಳನ್ನು ಓದುವ ಮೂಲಕ ಜೀವನದ ನೈಜತೆ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಬಸವಾದಿ ಶರಣ ರಚಿಸಿದ ವಚನ ಸಾಹಿತ್ಯ ಸೇರಿದಂತೆ ಇತರೆ ಕೃತಿಗಳನ್ನು ಹಿರಿಯ ಸಾಹಿತಿಗಳು ಬರೆದ ಪುಸ್ತಕಗಳನ್ನು ಬರಿ ಓದುವುದಲ್ಲದೆ ಅದರಲ್ಲಿನ ಜೀವನಾಂಶವನ್ನು ಗುರುತಿಸಬೇಕು ಎಂದರು.
ಯುವ ಕವಿತ್ರಿ ಭಾಗ್ಯ ದೊರೆ ಮಾತನಾಡಿ, ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕಾದರೆ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಉತ್ತಮ ಕೃತಿಗಳನ್ನು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೂಢನಂಬಿಕೆ, ಸಮಾನತೆ, ಅಸ್ಪೃಶ್ಯತೆಯ ಕುರಿತ ಸಮಗ್ರವಾಗಿ ಸಂವಾದ ಜರುಗಿತು. ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂವಾದದಲ್ಲಿ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದುಕೊಂಡರು. ಶಿವರಾಜ ದೇಶಮುಖ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಬಸವರಾಜ ಸಿನ್ನೂರ, ಪ್ರಭು, ಮಹಾಂತೇಶ ದೊರೆ ಇದ್ದರು.