Advertisement

ಬೂಕನಬೆಟ್ಟದ ರಂಗನಾಥಸ್ವಾಮಿ ವೈಭವದ ಬ್ರಹ್ಮರಥೋತ್ಸವ

09:54 PM Jan 19, 2020 | Lakshmi GovindaRaj |

ಚನ್ನರಾಯಪಟ್ಟಣ/ಹಿರೀಸಾವೆ: ತಾಲೂಕಿನ ಹಿರೀಸಾವೆ ಹೋಬಳಿಯ ಇತಿಹಾಸ ಪ್ರಸಿದ್ಧ ಬೂಕನಬೆಟ್ಟದಲ್ಲಿ ರಂಗನಾಥಸ್ವಾಮಿಯ 89ನೇ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

Advertisement

ಬೆಳಗ್ಗೆ ಬೆಟ್ಟದ ಮೇಲಿರುವ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಮಾಡಲಾಯಿತು ಇದಾದ ಬಳಿಕ ವಿವಿಧ ಪುಷ್ಪ ಹಾಗೂ ಒಡವೆಗಳಿಂದ ಅಲಂಕಾರ ನೆರವೇರಿಸಿ ಪೂಜಾ ಕೈಂಕರ್ಯಗಳು ನೆರವೇರಿದವು, ನಂತರ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕರಿಸಿದ್ದು, ಅಡ್ಡಪಲ್ಲಕ್ಕಿಯಲ್ಲಿ ಮಂಗಳವಾದ್ಯದೊಂದಿಗೆ ಬೆಟ್ಟದ ಮೇಲಿಂದ ಉತ್ಸವದಲ್ಲಿ ಕರೆತಂದು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಬಳಿಕ ವೇದಿಕೆಯಲ್ಲಿ ಧಾರ್ಮಿಕ ಸಮಾರಂಭ ಜರುಗಿತು ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ಭಕ್ತಿ, ಬಾವ ಹಾಗೂ ಧಾರ್ಮಿಕ ಆಚರಣೆಯಿಂದಲೇ ನಮ್ಮ ಸಂಸ್ಕೃತಿಯು ಹಿರಿಮೆ ಹೊಂದಿದೆ, ಇಂತಹ ದೈವ ಸೇವೆಗಳು ನಿರಂತರವಾಗಿ ಪ್ರತಿ ಗ್ರಾಮದಲ್ಲಿ ನಡೆಯುತ್ತಿರಬೇಕು ಎಂದು ಹೇಳಿದರು.

ಅಂತರ್ಜಲ ವೃದ್ಧಿ: ತಾಲೂಕಿನಲ್ಲಿ ಕಳೆದ ವರ್ಷ ತೀವ್ರ ಬರಗಾಲ ಕಾಣಿಸಿಕೊಂಡಿತ್ತು, ಆದರೆ ಪ್ರಸಕ್ತ ವರ್ಷ ವಾಡಿಕೆಯಂತೆ ಮಳೆಯಾಗಿದ್ದು, ರೈತರಿಗೆ ನಿರೀಕ್ಷೆಯಂತೆ ಉತ್ತಮ ಬೆಳೆ ಸಿಕ್ಕಿದೆ, ಏತನೀರಾವರಿ ಯೋಜನೆಯಡಿ ತಾಲೂಕಿನ ಸುಮಾರು ಹತ್ತಾರು ಕೆರೆ ಕಟ್ಟೆಗಳನ್ನು ತುಂಬಿಸಲಾಗಿದೆ ಇದರಿಂದ ನೂರಾರು ಗ್ರಾಮಗಳಿಗೆ ಅನುಕೂಲವಾಗಿದ್ದು, ಅಂತರ್ಜಲ ವೃದ್ಧಿಯಾಗುತ್ತಿದೆ ಎಂದರು.

ಚನ್ನರಾಯಪಟ್ಟಣ ಹಾಗೂ ಹಿರೀಸಾವೆ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಜಿ.ರಾಮಕೃಷ್ಣ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಂ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಮಾಸೇಗೌಡ, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಉಪಾಧ್ಯಕ್ಷ ಬಿ.ಸಿ.ಬೊಮ್ಮೇಗೌಡ, ದೇಗುಲದ ಪಾರುಪತ್ತೇದಾರ ರಂಗರಾಜ್‌, ಬೂಕ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮದಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

ರಥಕ್ಕೆ ದವನ, ಬಾಳೆಹಣ್ಣು ಎಸೆದ ಭಕ್ತರು: ಮಧ್ಯಾಹ್ನ 12 ಗಂಟೆಯ ಶುಭ ಮೇಷಲಗ್ನ ಮುಹೂರ್ತದಲ್ಲಿ ಶಾಸಕ ಸಿ.ಎನ್‌.ಬಾಲಕೃಷ್ಣ ಬ್ರಹ್ಮರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ತಕ್ಷಣ ಸಹಸ್ರಾರು ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದರು. ನೆರೆದಿದ್ದ ಭಕ್ತರು ಗೋವಿಂದ ಗೋವಿಂದ ಎಂಬ ಸ್ಮರಣೆಯೊಂದಿಗೆ ಭಕ್ತಿಬಾವದಲ್ಲಿ ತೇಲಿದರು. ರಥ ಸಾಗಿದಂತೆಲ್ಲಾ ಭಕ್ತರು ಬಾಳೆಹಣ್ಣು-ದವನ, ಹೂವು-ತುಳಸಿಪತ್ರೆಯನ್ನು ರಥಕ್ಕೆ ಎಸೆದು, ಕರ್ಪೂರ ಬೆಳಗಿ ಹರಕೆ ಸಲ್ಲಿಸಿದರು.

ಧಾರ್ಮಿಕ ಕಾರ್ಯಕ್ರಮ ಅಗತ್ಯ: ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ಸನಾತನ ಧರ್ಮ ಉಳಿಯಬೇಕೆಂದರೆ ಹಿಂದೂ ಧರ್ಮದ ಆಚರಣೆಗಳು, ಜಾತ್ರೆಗಳು, ದೇವರ ಪೂಜೆ, ಗ್ರಾಮ ದೇವತೆ ಹಬ್ಬಗಳು ನಡೆಯಬೇಕು. ಸನಾತನ ಆಚರಣೆಗೆ ವಿಶ್ವದಲ್ಲಿ ಬಹಳ ಪ್ರಸಿದ್ಧಿ ಹೊಂದಿದ್ದು, ವಿದೇಶಿಗರೂ ನಮ್ಮ ಧರ್ಮವನ್ನು ಆಚರಣೆ ಮಾಡುತ್ತಿದ್ದಾರೆ. ಆದರೆ ನಮ್ಮ ನೆಲದಲ್ಲಿಯೇ ಇದನ್ನು ವಿರೋಧಿಸುವ ಅನೇಕ ಮಂದಿ ಇದ್ದಾರೆ. ಅವರಿಗೆ ಆ ದೇವರೇ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next