ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ನನ್ನ ಜ್ಞಾನ ಭಂಡಾರಕ್ಕೆ ಸೇರ್ಪಡೆಯಾದ ಮತ್ತೂಂದು ಕೃತಿಯೇ ಪ್ರಸಾದ್ ಶೆಣೈ ಆರ್.ಕೆ. ಬರೆದ “ಒಂದು ಕಾಡಿನ ಪುಷ್ಪಕ ವಿಮಾನ’. ಲೇಖಕರಿಗೆ ಬರವಣಿಗೆಯ ಬಗ್ಗೆ ಇದ್ದ ಒಲವೇ ನನ್ನನ್ನು ಈ ಪುಸ್ತಕದ ಕಡೆ ಸೆಳೆಯುವಂತೆ ಮಾಡಿತು. ಪುಸ್ತಕ ಬಿಡುಗಡೆಯ ದಿನದಿಂದ ನನ್ನ ಕೈ ಸೇರುವವರೆಗೂ ಪುಸ್ತಕದ ಬಗ್ಗೆ ಇದ್ದ ಕಾತರ ಜಾಸ್ತಿಯಾಗತೊಡಗಿತು. ಕೃತಿಯ ಬಿಡುಗಡೆಯ ದಿನ ಲೇಖಕರಿಗೆ ಇದ್ದ ಉತ್ಸಾಹವೇ ನನ್ನೊಳಗಿದ್ದ ಓದುಗನನ್ನು ಬಡಿದೆಬ್ಬಿಸಿತು.
ಲೇಖಕರು ಮಾಳ ಕಾಡಿನ ಬಗ್ಗೆ ಸುಂದರ ಚಿತ್ರಣ ವನ್ನು ತಮ್ಮ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಮೊದಲು ಮಾಳದ ದಾರಿಯಿಂದ ಹಿಡಿದು ಸಾಗುವ ಕಾಡಿನ ಪಯಣ ಅಲ್ಲಿನ ಸೊಗಸನ್ನ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಕಾಡಿನ ಬಗ್ಗೆ ಇರುವ ಪ್ರೀತಿ, ಒಡನಾಟವನ್ನು ಈ ಕೃತಿಯ ಮೂಲಕ ತೆರೆದಿಟ್ಟಿರುವ ಲೇಖಕರು, ಓದುಗರನ್ನು ಮಾಳ ಕಾಡಿನಲ್ಲಿ ಸುತ್ತಾಡಿಸಿ ಕಾಡಿನ ಸಂಪೂರ್ಣ ಪರಿಚಯ ಮಾಡಿಸಿಕೊಡುತ್ತಾರೆ. ಕಾಡ ದಾರಿ, ನದಿ, ಹಳ್ಳ, ಝರಿ, ವನ, ಪಕ್ಷಿಗಳ ಜತೆಗಿನ ಬಂಧ, ಪ್ರಕೃತಿಯ ಬಗ್ಗೆ ಇರಬೇಕಾದ ಪ್ರೀತಿ, ಮತ್ತದರ ಅನಿವಾರ್ಯತೆಯ ಬಗ್ಗೆ ಲೇಖಕರು ಈ ಕೃತಿಯಲ್ಲಿ ಓದುಗರಿಗೆ ಅರಿವು ಮೂಡಿ ಸಿದ್ದಾರೆ. ಅಷ್ಟೇ ಅಲ್ಲದೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಪ್ರಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವ ಪರಿ ಹೇಗೆ? ಕಾಡು ಸಂಪೂರ್ಣವಾಗಿ ನಶಿಸಿ ಹೋಗುತ್ತಿದೆ. ಈ ಸಂದರ್ಭದಲ್ಲಿ ಪ್ರಕೃತಿ, ಕಾಡನ್ನು ನಾವು ಸಂರಕ್ಷಿಸುವುದು ಹೇಗೆ? ಇವೆಲ್ಲ ನಮ್ಮ ಜವಾಬ್ದಾರಿ. ವನ್ಯ ಸಂಕುಲದೊ ಟ್ಟಿಗೆ ನಾವು ಬೆಳೆಸಿಕೊಳ್ಳುವ ಒಡನಾಟ ಮತ್ತು ನಮಗೆಲ್ಲರಿಗೂ ಕಾಡಿನ ಬಗ್ಗೆ ಇರಬೇಕಾದ ಕಾಳಜಿ ಎಲ್ಲವನ್ನು ಲೇಖಕರು “ಒಂದು ಕಾಡಿನ ಪುಷ್ಪಕ ವಿಮಾನ’ ಕೃತಿಯಲ್ಲಿ ಸವಿವರವಾಗಿ ಬಿಚ್ಚಿಟ್ಟಿದ್ದಾರೆ.
ಕೃತಿಯಲ್ಲಿ ಮಾಳ ಎಂಬ ಪುಟ್ಟ ಹಳ್ಳಿಯ ಸುಂದರ ಚಿತ್ರಣವನ್ನು ಕಾಣಬಹುದು. ಕಲ್ಲುಬಂಡೆ, ಇಬ್ಬನಿ, ಬಿಸಿಲು..ಇವೆಲ್ಲದರ ಚಿತ್ರಣ ಓದುವಾಗ ನಮ್ಮನ್ನು ಪುಳಕಿ ತರನ್ನಾಗಿಸುತ್ತದೆ. ಜಲಪಾತಗಳ ವರ್ಣನೆ ಮನಸ್ಸಿಗೆ ಬಹಳ ಮುದವೆನಿಸುತ್ತದೆ. ಈ ಕಾಡಿನಲ್ಲಿ ಕಾರ್ಕಳದ ಬಾಹುಬಲಿ ಶಂಕರ ಜೋಶಿ, ರಾಧಾಕೃಷ್ಣ ಜೋಶಿ, ವಿಠಲ ಶೆಟ್ಟರು, ಜೇನು ಕತ್ತರಿಸುವ ರುದ್ರಯ್ಯ ಗೌಡ ಮರಾಠ, ಜನ್ನಿ ಜೆನ್ನಿಫರ್ ಅಜ್ಜಿ, ಅಯ್ಯಪ್ಪನ ಭಕ್ತ..ಹೀಗೆ ಹಲವು ಪಾತ್ರಗಳು ಬಂದು ಹೋಗುತ್ತಾರೆ.
ಜೆನ್ನಿಫರ್ ಅಜ್ಜಿ ಹೇಳಿದ “ಮದುವೆಯಾದರೆ ಸಮಾಜ ಸೇವೆ ಮಾಡೋದಕ್ಕೆ ಸಾಧ್ಯ ವಿಲ್ಲ’ ಎಂದು ಹೇಳಿದ ಕಥನ ಚೆನ್ನಾಗಿದೆ. ಈ ಕೃತಿಯನ್ನು ಓದುತ್ತಾ ಪುಟಗಳನ್ನು
ತಿರುವಿದಂತೆಯೇ ನಾವೇ ಕಾಡಿನಲ್ಲಿ ಒಂದು ನವಿರಾದ ಜರ್ನಿ ಮಾಡಿದಂತೆ ಭಾಸ ವಾಗುತ್ತದೆ.
ಮಾಳ, ಚಾರ್ಮಾಡಿ, ಆಗುಂಬೆ ಸುತ್ತಿ ಕೊಡೆಕಲ್ಲು, ಬಾಳೆಕಲ್ಲು ಕೊನೆಯಲ್ಲಿ ನಮ್ಮನ್ನು ಜೇನುಕಲ್ಲಿಗೆ ಬಂದು ತಲುಪಿಸುವ ಕೃತಿಯಲ್ಲಿನ ಬರಹಗಳು ಮನಸ್ಸಿಗೆ ಮತ್ತಷ್ಟು ಮುದ ನೀಡುತ್ತವೆ. ಈ ಕೃತಿಯನ್ನು ಓದಿ ಮುಗಿಸುತ್ತಿದ್ದಂತೆಯೇ ಒದುಗರಿಗೆ ನಮ್ಮ ಜೀವನದ ಒಂದಿಷ್ಟು ದಿನಗಳನ್ನಾದರೂ ನಾಡು ಬಿಟ್ಟು ಕಾಡಿನಲ್ಲಿಯೇ ಕಳೆಯೋಣ ಎಂದೆನ್ನಿಸದೇ ಇರದು.
ಮುಖ್ಯವಾಗಿ ಹಿರಿಯ ಸಾಹಿತಿ ಡಾ| ನಾ.ಡಿ’ಸೋಜ ಅವರು ಬರೆದ ಮುನ್ನುಡಿಯು ಪುಸ್ತಕದ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ನಿಸರ್ಗದ ಬಗ್ಗೆ ಪ್ರೀತಿ ಇರುವವರೆಲ್ಲರೂ ಓದಲೇಬೇಕಾದ ಪುಸ್ತಕ ಇದು.
ಪರಿಸರ ಸಂರಕ್ಷಣೆ ಎಂಬುದು ಬಾಯಿ ಮಾತಾದರೆ ಏನೂ ಪ್ರಯೋಜನ ಇಲ್ಲ. ಅದು ಸಾರ್ಥಕವಾಗಿ ನಡೆದರೆ ಮಾತ್ರ ಅದರ ಗುರಿ ಯನ್ನು ತಲುಪಲು ಸಾಧ್ಯ. ಇಂತಹ ಕಾರ್ಯವನ್ನು ಪ್ರೀತಿಯನ್ನಿಟ್ಟು ಪೂರೈಸಿದರೆ ಶೇ. 100 ಫಲ ದೊರೆಯಬಹುದು.
ತೌಫೀಕ್ ಸಾಣೂರು, ಉಡುಪಿ