Advertisement
‘ಕಾಯಕಾವ್ಯ’ ಲೇಖಕಿ, ಕಥೆಗಾರ್ತಿ, ವಿಮರ್ಶಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವನ ಸಂಕಲನ.
Related Articles
Advertisement
ಸಾಲು ಸಾಲುಗಳಲ್ಲಿ ಕವಿತೆಯ ಜೀವ ಹನಿಗಳಿವೆ. ಪಂಕ್ತಿ ಪಂಕ್ತಿಗಳಲ್ಲಿ ರಸಾನುಭೂತಿ. ಕೆಲವು ಕಾವ್ಯಗಳಲ್ಲಿ ಅನುಭವವನ್ನೇ ಎರಕ ಹೊಯ್ದಂತಿದೆ.
ಕಾವ್ಯಗಳಲ್ಲಿನ ವಿಡಂಬನೆಗಳಿಗೆ ಇರುವ ಚೂಪು, ಸಾಹಿತ್ಯದ ಬೇರೆ ಮಾಧ್ಯಮಗಳಿಗಿಲ್ಲ ಅಂತ ನನಗನ್ನಿಸುತ್ತದೆ. ಹಾಗಾಗಿ ಕಾವ್ಯದ ಭಾಷೆ ಅಷ್ಟು ಗಟ್ಟಿ ಮತ್ತು ಹರಿತ.
‘ಕತ್ತಲ ಮೈಯಲಿ ಆತ್ಮ ದೀಪವನು ಹೊತ್ತು
ಬೆಳಕು ಬೆಳಕಲಿ ನಡೆಯೆ
ಬತ್ತಲೆಯು ಕಾಂಬುದೆ…?’
(ಕಾಯಕಾವ್ಯ)
ಅಕ್ಕಮಹಾದೇವಿಯ ಬದುಕು ಅರೆ ಬೆತ್ತಲೆಯಾಗಿ ಬಾಹುಬಲಿ ಸ್ಥಿತಿಗೇರಿದ ಕಾಯ ಪೂರ್ಣತ್ವ ಕಂಡು ಕಾವ್ಯವಾಗಿದೆ ಎನ್ನುವ ಪರಿ ಗಟ್ಟಿ ಕೂಗಿಗೆ ಸೌಮ್ಯಳಾಗಿಯೆ ಹೊಡೆದು ನಿಂತ ನೆಲದಲ್ಲಿ ಕೃತಜ್ಞತೆಯ ಬದುಕನ್ನು ಅನುಭವಿಸಿದವಳದ್ದು ನಿಜ ಬದುಕು ಎಂದು ಹೇಳುವಂತಿದೆ.
‘ನಮ್ಮ ದಾಸವಾಳ ಅಂಗಿಯನ್ನು ಕಿತ್ತು ಎಸೆದು
ರೇಶಮಿ ಹುಳಗಳ ಬಿಸಿನೀರಲಿ ಬೇಯಿಸಿ
ಸೀರೆಗಳನ್ನು ನಮ್ಮೆದೆಗೆ ಎಸೆಯಬೇಡಿ
ಒಳ ಉಡುಪುಗಳು ಅದರ ಮೇಲೆ ಬಿಗಿದು ಬೆವರುವ ಕುಪ್ಪಸ ಲಂಗ ಅದಕೆ ಸೀರೆ ಸುತ್ತಿ ಸುತ್ತಿ
ನಿಮಗಾಗಿ ಕಟ್ಟಿದ ಗಿಫ್ಟ್ ಪ್ಯಾಕೆಟ್ ಅಲ್ಲ ನಮ್ಮ ಮೈ’
ಹೆಣ್ಣು ಧರಿಸುವ ದಿರಿಸುಗಳಲ್ಲೇ ಅವಳ ವ್ಯಕ್ತಿತ್ವವನ್ನು ನಿರ್ಧರಿದುವ ಪುರುಷ ಮನೋಧೋರಣೆಗೆ ಇರಿಯುವ ಹಾಗೆ ಮೂಡಿ ಬಂದಿದೆ ಈ ಕಾವ್ಯ. ಹೆಣ್ಣನ್ನು ಕೇವಲ ಸರಕಾಗಿ ನೋಡುವ ಕೆಳ ಮಟ್ಟದ ಅಭಿರುಚಿಯ ವಿರುದ್ಧ ಹತಾಶೆ, ಕ್ರೋಧ, ಆಕ್ರೋಶದಿಂದ ಹೊರ ಬಂದ ಉರಿಕಾವ್ಯವಿದು.
‘ಅಳಬೇಡ..
ಅತ್ತರೆ ನಿನ್ನ ಕಂಬನಿಯಲ್ಲಿ
ಕೆಳಗುದುರುತ್ತದೆ
ನನ್ನ ಬಿಂಬ’ (ಅಳಬೇಡ)
ಪರಿಪೂರ್ಣ ಪ್ರೇಮ ಕಲ್ಪನೆಯ ಯಾನವನ್ನು ನಿರ್ಮಲ ಸಾಧ್ಯತೆಯನ್ನು ಭಾಷೆ, ಭಾವ ಹೊಮ್ಮಿಸುವ ನಿರುಮ್ಮಳ ಹಾಗೂ ನಿಡುಸುಯ್ಯುವಿಕೆಯ ನಿಜ ವೇದನೆಯಿದು. ‘ನಿನ್ನೆದೆ ಆಗಸ'(ನಿನ್ನ ಪ್ರೀತಿ) ಎನ್ನುವ ವಿಶಾಲ ಮನಸ್ಸು ಪ್ರೇಮಕ್ಕಿದೆ ಎನ್ನುವುದನ್ನು ಕವಯತ್ರಿ ಹೇಳುವ ರೀತಿ ಹೊಸತು ಅನ್ನಿಸುತ್ತವೆ.
ಬೆಳಕಿನ ಹುಡುಕಾಟ ಮತ್ತು ಅದರ ಮೇಲಿನ ಶದ್ಧೆ ಕವಯತ್ರಿಯಲ್ಲಿ ಅಪಾರವಾಗಿ ಕಾಣಿಸುತ್ತಿವೆ. ಬೆಂಕಿಯೊಳಗೆ ಬೆಳಕಿಗೆ ಬಚ್ಚಿಡಲು ಸಾಧ್ಯವೇ..?
ಇಲ್ಲ. ಅದರ ಪರಿಶ್ರಮ, ಪ್ರಯತ್ನದ ಫಲವಾಗಿ ಜ್ವಲಿಸುವ ಬೆಳಕು, ಜೀವವೊಳಗೆ ಒಂದು ದೇವನಿದ್ದಾನೆ ಎಂಬುದನ್ನು ಮತ್ತೆ ಮತ್ತೆ ಪ್ರತಿಪಾದಿಸುತ್ತದೆ. ‘ದೀಪವೇ… ನೀ ಬೆಂಕಿಯಲ್ಲ ಬೆಳಕು'(ದೇವರೇ..).
ಜಾತಿ, ಧರ್ಮ, ಸಿದ್ಧಾಂತಗಳ ಹೆಸರಿನಲ್ಲಿ ಕಚ್ಚಾಡಿಕೊಳ್ಳುವವರ ವಿರುದ್ಧ ಕಟುವಾಗಿ ಟೀಕಿಸುವ ವ್ಯಂಗ್ಯ ವಿಡಂಬನೆಯ ಕಾವ್ಯವೊಂದು ಇಲ್ಲಿದೆ.
‘ದೇವರ ಹೆಸರಲ್ಲಿ ನಾಯಿಗಳಂತೆ ಕಚ್ಚಾಡತೊಡಗಿದರು
ನೋಡಿ ನೋಡಿ ದೇವರಿಗೆ ಸಾಕಾಯಿತು
ಸಮಯ ನೋಡಿ ತಮ್ಮ ತಮ್ಮ ಮಂದಿರದೊಳಗಿಂದ ಹೊರಬದರು
ಬಾರನ್ನು ಹೊಕ್ಕು
ಸಿಗರೇಟು ಸೇದಿ ಹೊಗೆ ಬಿಡುತ್ತ
ಕೋಮುವಾದದ ಕುರಿತು ಚರ್ಚಿಸತೊಡಗಿದರು’ (ದೇವರು ಎಲ್ಲಿದ್ದಾನೆ ?)
ಇದೇ ರೀತಿಯ ಭಾವ ‘ನನ್ನ ನಿನ್ನ ದೇವರು’ ಎಂಬ ಕಾವ್ಯದಲ್ಲಿಯೂ ಕಾಣಸಿಗುತ್ತದೆ. ‘ನೋಡಬೇಕು ನಾನು ನಮ್ಮಿಬ್ಬರ ದೇವರು ಹಸ್ತಲಾಘ ಮಾಡುವುದನ್ನು, ಇಬ್ಬರೂ ಅಪ್ಪಿಕೊಂಡು ಒಂದೇ ಬೆಳಕಾಗುವುದನ್ನು’ ಎಂಬ ಸಾಲು ಸೌಹಾರ್ದತೆ ಹೇಗಿರಬೇಕೆಂದರೇ, ಹೀಗಿರಬೇಕೆಂದು ತಿಳಿಸುತ್ತದೆ. ದುರಾದೃಷ್ಟವಶಾತ್ ಇಂದು ಜಾತಿ, ಧರ್ಮಗಳಿಗೆ ರಾಜಕೀಯ ಅಂಟಿ ಹೊಲಸಾಗಿ ಶಾಪವಾಗಿ ಕಾಡುತ್ತಿದೆ ಎನ್ನುವುದು ದುರಂತ.
‘ಮಠದೊಳಗೆ ತೀರ್ಥ ಚಿಮುಕಿಸಿ
ನಮ್ಮನ್ನು ಪಾದುಕೆಯಾಗಿಸುತ್ತಾರೆ’
‘ನಾವು ಚರ್ಮದ ಚಪ್ಪಲಿಗಳು
ಈ ಮೇಲ್ಜಾತಿಯವರ ಪಾದಗಳು
ಶತಶತಮಾನಗಳಿಂದಲೂ ದೇಹಗಳನ್ನು ತಲೆಯ
ಮೇಲೆ ಹೊತ್ತು ನಡೆದರೂ ಸವೆಯುವುದೇ ಇಲ್ಲವಲ್ಲ..!'(ಚಪ್ಪಲಿಗಳು )
ಜಾತಿ ವ್ಯವಸ್ಥೆಯ ಬಗೆಗಿನ ಅಸಹನೀಯ ಭಾವದ ಬೆಂಕಿ ಕಿಡಿ ಇದು. ಒಡೆದು ಹಾಕಿ ಬಿಡುವಷ್ಟು ಕೋಪ, ಅಸಹ್ಯ ಭಾವ ಜಾತಿ ವರ್ಣ ಬೇದಗಳು ಧೀನತೆ, ಪ್ರಧಾನತೆಯ ನಡುವೆ ಕಾಡುವ ಪ್ರಶ್ನೆಗಳಿಗೆ ಖಾರವಾಗಿ ಇಲ್ಲಿ ಉತ್ತರಿಸಿದ್ದಾರೆ ಕವಯತ್ರಿ. ಇಲ್ಲಿ ಸಮಾಜದ ವಿಕಾರಗಳ ಬಗ್ಗೆ ವಿಷಾದವಿದೆ.
ಸ್ತ್ರೀ ಶೋಷಣೆಯ ಬಗ್ಗೆ ಸೆಟೆದೇಳುವ ಭಾವದ ಕಿಡಿ ಅನೇಕ ಕಾವ್ಯಗಳಲ್ಲಿ ಕಾಣಸಿಗುತ್ತವೆ. ದುಃಖ, ದುಮ್ಮಾನ, ಸುಖ, ಸಂತೋಷಗಳಿಗೆ ಒಪ್ಪುವ ಮತ್ತು ಸ್ಪಂದಿಸಿ ಅಪ್ರಿಯ ಸತ್ಯವನ್ನೂ ಹೇಳುವ ನೈಜ ಶಕ್ತಿ ಈ ಕಾವ್ಯಗಳಲ್ಲಿವೆ.
ಕೆಲವು ಸ್ತ್ರೀ ಕೇಂದ್ರಿತ ಕಾವ್ಯಗಳಲ್ಲಿ ವೈಭವೀಕರಿಸಿ ಹೇಳಿದ್ದಾರೆ ಅಂತನ್ನಿಸಿದರೂ ವಾಸ್ತವ ಅವರು ಹೇಳಿದ ಹಾಗೆಯೇ ಇದೆ ಅಂತನ್ನಿಸುತ್ತದೆ.
ಒಟ್ಟಿನಲ್ಲಿ, ಹೀಗೆ ಒಂದೊಂದು ಒಂದೊಂದನ್ನು ಹೇಳುವ ನೂರ ಒಂದು ಕಾವ್ಯಗಳು ‘ಕಾಯಕಾವ್ಯ’ ದಲ್ಲಿವೆ. ಪ್ರಸ್ತುತದ ಅಗತ್ಯಗಳ ಅಂತಃಸತ್ವದ ಅನುಭವವನ್ನೇ ಕಾವ್ಯವಾಗಿಸಿದ್ದಾರೆ.
ಓದು ನಿಮ್ಮದಾಗಲಿ
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ :ಚರ್ಚೆ ಹುಟ್ಟುಹಾಕಿದೆ ಫೇಸ್ ಬುಕ್ ಪರಿಚಯಿಸಲು ಹೊರಟಿರುವ ಇನ್ಸ್ಟಾ ಗ್ರಾಂ ಫಾರ್ ಕಿಡ್ಸ್