ಹೆಣ್ಣೆದೆಯ ಅಂತರಂಗದ ಗೋಳನ್ನು ಚಿತ್ರಿಸುವ ಕಥಾ ಸಂಕಲನ ಈ ದಿನಮಾನಗಳ ಮೇಲ್ಪಂಕ್ತಿಯ ಕಥೆಗಾರ್ತಿ ಶಾಂತಿ ಕೆ. ಅಪ್ಪಣ್ಣ ಅವರ ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’.
ಸುಟ್ಟು ಪರಿಶುದ್ಧವಾಗುವ ಮನಸ್ಸುಗಳು ಅಪ್ಪಟ ಚಿನ್ನದಂತೆ ಕಾಣುವ, ತೀರ ನಮ್ಮವರದ್ದೇ ಕಥೆ ಎನ್ನುವ ಹಾಗಿನ ಕಥಾ ವಸ್ತುಗಳ ಆಯ್ಕೆಗೆ ಮೆಚ್ಚದೇ ಹೇಗಿರಲಿ…?
ಶಾಂತಿಯವರೇ ಹೇಳುವ ಹಾಗೆ ಎಲ್ಲೋ ಯಾವುದೋ ಹೊತ್ತಿನಲ್ಲಿ ಮನದೊಳಗೆ ಮಿಂಚಿನಂತೆ ಏಳುವ ಯಾವುದೋ ಒಂದು ಅನಾಮಿಕ ಎಳೆಯನ್ನು ಹಿಡಿದುಕೊಂಡು ಅದು ಕೊಂಡೊಯ್ಯುವ ಹಾದಿಯಲ್ಲಿ ನಡೆಯುವುದೇ ಒಂದು ಸುಖ. ಎಷ್ಟು ಚೆಂದ ..? ಹೌದು, ಇಲ್ಲಿನ ಕಥೆಗಳು ಇಲ್ಲೇ ಎಲ್ಲೋ ನಮ್ಮ ಸುತ್ತಲಲ್ಲೇ ಹುಟ್ಟಿಕೊಂಡ ಕಥೆಗಳನ್ನಿಸಿ ಬಿಡುತ್ತವೆ. ವಾಸ್ತವಕ್ಕೆ ಒಂದಿಷ್ಟು ಕಲ್ಪನೆಗಳನ್ನು ಪೋಣಿಸಿ ಓದಿಗೆ ಚೆಂದಗಾಣಿಸಿಕೊಟ್ಟಿದ್ದಾರೆನ್ನಿಸುತ್ತದೆ.
ಮನುಷ್ಯ ಸಂಬಂಧಗಳಲ್ಲಿನ ಪ್ರೀತಿ ವಾತ್ಸಲ್ಯಗಳನ್ನು ಮೆಲುವಾಗಿ ಧ್ವನಿಸಿ ಕೊಟ್ಟ ರೀತಿ ಅದ್ಬುತ.
ಸ್ತ್ರೀವಾದದ ಮೃದು ಧ್ವನಿ ಸಹಜವಾಗಿ ಒಬ್ಬ ಮಹಿಳೆ ಬರೆದ ಕೃತಿಯಾಗಿರುವುದರಿಂದ ಇಲ್ಲಿನ 13 ಕಥೆಗಳಲ್ಲಿಯೂ ಕಾಣಸಿಗುತ್ತದೆ. ಅದು ಗಟ್ಟಿ ಕೂಗಲ್ಲ. ಸೌಮ್ಯ ಧ್ವನಿಯ ಗಟ್ಟಿತನ. ಸೌಮ್ಯಕ್ಕೆ ಗಟ್ಟಿ ಧ್ವನಿ ಇದೆ ಎನ್ನುವುದನ್ನು ಪ್ರತಿಪಾದಿಸುವುದಕ್ಕೆ ಪ್ರಯತ್ನಿಸಿದ್ದು ಎಲ್ಲಾ ಕಥೆಗಳ ಜೀವ.
ಹೆಣ್ಣನ್ನು ಆಟಿಕೆ ವಸ್ತುವಾಗಿ, ದೈಹಿಕ ಸುಖಕ್ಕೆ ಮಾತ್ರ ಬಳಸಿಕೊಳ್ಳುವ ಪುರುಷ ಮನೋಧೋರಣೆಯ ವಿಕೃತ ಮುಖವನ್ನು ತೋರಿಸುವಲ್ಲಿ ಕೊಂಚ ಹೊಸ ರೂಪದಲ್ಲಿ ಕೊಡಬಹುದಿತ್ತು ಅನ್ನಿಸಿದರೂ, ಶೋಷಣೆಯಲ್ಲಿ ಮುಳುಗುವ ಹೆಣ್ಣಿನ ಅಂತರಂಗದ ಆರ್ತ ಆಳಕ್ಕೆ ಇಳಿಸಿದ ರೀತಿ ‘ಹೆಣ್ಣು, ಹೆಣ್ಣಿನ ಸೌಂದರ್ಯ ನಿನ್ನ ಕಾಮದ ವಸ್ತುವಲ್ಲ’ ಎನ್ನುವ ಅರ್ಥದಲ್ಲಿ ಪುರುಷನ ಮುಖಕ್ಕೆ ರಾಚುವಂತಿದೆ.
ಜಾತಿ, ಧರ್ಮಗಳ ನಡುವೆ ಸಿಲುಕಿ ಬೇಯುವ ಪ್ಲೆಟೋನಿಕ್ ಅಥವಾ ನಿಷ್ಕಾಮ, ಶುದ್ಧ ಪ್ರೀತಿಯೊಂದು ಬೇರ್ಪಟ್ಟು ಇಂಚಿಂಚು ಅನುಭವಿಸುವ ಅಂತರಾಳದ ದುಃಖಗಳು ನಮ್ಮವೇ, ನಮ್ಮವರದ್ದೇ, ಇಲ್ಲೇ ಎಲ್ಲೋ ಪಕ್ಕದಲ್ಲೇ ಕಂಡು, ಕೇಳಿದ ಕಥೆಗಳು, ವ್ಯಥೆಗಳು ಅನ್ನಿಸುವಾಗ, ಛೇ.. ಸಮಾಜ ಯಾಕಿನ್ನೂ ಪ್ರೀತಿಗೆ ನಿಜವಾದ ಪ್ರೀತಿಯ ಅರ್ಥವನ್ನು ಕೊಟ್ಟಿಲ್ಲ ಎಂದು ಬೇಸರವಾಗುತ್ತದೆ. ಅದೊಂದು ಅಸಹನೀಯ, ಅಸಹ್ಯ ವೇದನೆ ಎದೆಯನ್ನು ತುಂಬಿ ಕಾಡುತ್ತದೆ.
ಹೀಗೆ.. ಹೆಣ್ಣನ್ನು ದಂಧೆಯಾಗಿ ಬಳಸಿಕೊಂಡು ಶೋಷಿಸುವ, ಹೆಣ್ಣನ್ನೇ ದೂಷಿಸುವ ನೋವಿನ ಕಥೆಗಳು ಶಾಂತಿಯವರ ಹಿಂದಿನ ಕಥಾ ಸಂಕಲನ ‘ಮನಸು ಅಭಿಸಾರಿಕೆ’ ಯಲ್ಲಿಯೂ ಇವೆ.
(ಕಥೆಗಾರ್ತಿ ಶಾಂತಿ ಕೆ. ಅಪ್ಪಣ್ಣ–
ಮೂಲತಃ ಕೊಡಗು ಜಿಲ್ಲೆಯವರಾದ ಅವರು ವಿಭಿನ್ನ ಕಥೆಗಳ ಮೂಲಕ ಓದುಗರ ಮನಸ್ಸನ್ನು ಸೆಳೆದಿದ್ದಾರೆ. ವೃತ್ತಿ ನಿಮಿತ್ತ ಚೆನ್ನೈನಲ್ಲಿ ವಾಸವಿರುವ ಶಾಂತಿ, ‘ಮನಸು ಅಭಿಸಾರಿಕೆ’, ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’ ಎಂಬ ಎರಡು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಛಂದ ಪುಸ್ತಕ ಬಹುಮಾನ, ಬೇಂದ್ರೆ ಗ್ರಂಥ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪುರಸ್ಕಾರ ಸೇರಿ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.)
ಇನ್ನು, ನಾನು ಉಲ್ಲೇಖಿಸಲೇ ಬೇಕಾದ ಕೆಲವು ಕಥೆಗಳಿವೆ.
ಲಿಂಗ ಬೇದಗಳ ನಡುವೆ ಸಹಜವಾಗಿ ಹುಟ್ಟುವ ದೈಹಿಕ ಬಯಕೆಗಳ ತೊಳಲಾಟ, ಮತ್ತದು ಒಂಥರಾ ಹೇಸಿಗೆ, ಪೇಲವ, ಜಾಳು, ಕಪಟವಿದು ಎನ್ನುವ ಭಾವ ‘ಈ ಕಥೆಗೆ ಹೆಸರಿಲ್ಲ’ ಎಂಬ ಕಥೆಯಲ್ಲಿ ಕಾಣಿಸುತ್ತದೆ. ಈಗಿನ ದಿನಗಳಲ್ಲಿ ಒತ್ತಡಕ್ಕೋ, ಬಯಕೆಗೋ, ಹುಚ್ಚಿಗೋ, ಚಟಕ್ಕೋ ಸಮಾಜದಲ್ಲಿ ಒಂದು ಮಟ್ಟಕ್ಕೆ ಬೆಳೆದವರೊಳಗಿರುವ ಇನ್ನೊಂದು ಮುಖದ ಚಿತ್ರಣ ಈ ಕಥೆ. ಅದು ತಪ್ಪೇ..? ಅಥವಾ ತಪ್ಪಲ್ಲವೇ..? ಸರಿಯೇ..? ಸರಿಯಲ್ಲವೇ..? ಎಂಬ ಗೊಂದಲದ ಗುಣವನ್ನು ಈ ಕಥೆ ಹೇಳುತ್ತದೆ. ಇದು ಕಥೆಯೊಳಗೊಂದು ಕಥೆಯನ್ನು ಚಿತ್ರಿಸುತ್ತದೆ. ಕಥೆ, ದೈಹಿಕ ಬಯಕೆಯಾದರೇ, ಕಥೆಯೊಳಗಿನ ಕಥೆ, ಪ್ರೇಮದ ತೀವ್ರತೆ. ಈ ಕಥೆಯನ್ನು ಚೆನ್ನಾಗಿ ತೋರಿಸುವ ಪ್ರಯತ್ನದಲ್ಲಿ ಸ್ವಲ್ಪ ಅವಸರಕ್ಕೆ ಸಿಲುಕಿ ಪೂರ್ತಿ ಹೇಳದೆ ಮುಗಿಸಿದರು ಅಂತನ್ನಿಸುತ್ತದೆ.
ಶೀರ್ಷಿಕೆ ಕಥೆ ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’ ಎಂಥಾ ಅದ್ಬುತ, ಸರಳ ಸುಂದರ. ‘ವಾವ್ಹ್’ ಅನ್ನಿಸುವಷ್ಟು. ಪತ್ರಕರ್ತನೊಬ್ಬ ನೃತ್ಯಗಾತಿಯನ್ನು ಸಂದರ್ಶಿಸುವುದಕ್ಕೆ ಹೋದಾಗ ಅವನಲ್ಲಿ ಗೊತ್ತಿಲ್ಲದೆ ಹುಟ್ಟುವ ಪ್ರೀತಿ, ನಂತರದ ದಿನಗಳಲ್ಲಿ ಆ ನೃತ್ಯಗಾತಿಯಲ್ಲಿಯೂ ಇವನ ಮೇಲೆ ಮೊಳಕೆಯೊಡೆಯುವ ಪ್ರೇಮ. ಈ ಪ್ರೇಮದೊಂದಿಗೆ, ಹೆಣ್ಣೊಬ್ಬಳು ಒಂಟಿಯಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಬಳಸಿಕೊಂಡ ಆಕೆಯ ಮಾವನ ಬಗ್ಗೆ ಆಕೆಗಿದ್ದ ಅಹಸನೀಯ ಕೋಪ ಮಾಸದೆ ಉಳಿದಿರುವ ಚಿತ್ರಣವೂ ಇದೆ.
‘ಪ್ರೇಮ’ ಎನ್ನುವ ದುಬಾರಿ ಭಾವವನ್ನು ಈ ಕಥೆಯಲ್ಲಿ ಶಾಂತಿಯವರು ಈ ಥರದ್ದು ಅಪರೂಪದೊಳಗೆ ಅಪರೂಪಕ್ಕೆ ಕಾಣಸಿಗುವಂತದ್ದು ಎನ್ನುವ ಹಾಗೆ ಹೆಣೆದಿದ್ದು ತುಂಬಾ ಚೆಂದ. ಪ್ರೀತಿಯ ಉನ್ಮತ್ತ ಘಳಿಗೆ, ಸ್ವರ್ಗ ಸ್ವರೂಪದ ಸನಿಹ, ದುರ್ಲಭ ಎನ್ನುವ ಹಾಗಿನ ನೆನಪು ಕಣ್ಣ ಮುಂದೆ ಬರುವ, ಬಂದು ಹಿತವನ್ನುಣಿಸುವ ಹೇಳಲಾಗದ, ಹೇಳಿ ತೀರಲಾಗದ ಪ್ರೇಮವೆಂಬ ಮಜಬೂತು, ಕೊನೆಗೂ ದಕ್ಕದ, ನೆನಪಿನಲ್ಲಷ್ಟೇ ಉಳಿಯುವ ಎರಡು ಮನುಸ್ಸುಗಳ ಶುದ್ಧ ಸಲಿಲದಂತಿರುವ ಪ್ರೀತಿಯನ್ನು ತುಂಬಾ ಚೆಂದಾಗಿ ಕಟ್ಟಿ ಕೊಟ್ಟಿದ್ದಾರೆ. ಕಥೆ ಇಷ್ಟವಾಗುವುದು ಅದರೊಳಗಿನ ಕಾವ್ಯ ಸಂವೇದನೆಯಿಂದ. ಕಾವ್ಯಾತ್ಮಕ ಕಥೆ ಇದು. ಎಲ್ಲರಿಗೂ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.
ಕಥೆಗಳು ಓದುಗನೊಬ್ಬನಿಗೆ ದೃಶ್ಯ ಕಣ್ಮುಂದೆ ತರಿಸಬೇಕು. ಅಂತಹ ಇಲ್ಲಿನ ಕೆಲವು ಕಥೆಗಳಲ್ಲಿ ‘ಹೀಗೇ ಜೊತೆ ಜೊತೆಯಲಿ’ ಕೂಡ ಒಂದು. ಈ ಕಥೆ ಒಂಥರಾ ಕಡಲಿನ ಭೋರ್ಗರೆಯುವ ಅಲೆ, ಅದರ ಲವಣಯುಕ್ತ ಬಿಸಿ ತಾಪ, ಮಧ್ಯಾಹ್ನದ ಸುಠಿ ಖಾರದ ಬಿಸಿ ಮತ್ತು ಸಂಜೆಯ ಹಿತ ಗಾಳಿಯ ಹಾಗೆಯೂ ಇದೆ. ಸಂದೇಹ, ಸಂದೇಶ ಎರಡೂ ಕಥೆಯಲ್ಲಿವೆ. ಈ ಕಥೆಯನ್ನು ವಿವರಿಸಲು ಆಗುತ್ತಿಲ್ಲ ನನಗೆ. ಸೋತೆ. ನೀವು ಓದಿ. ಒಂದು ಸಂಬಂಧ, ಆ ಸಂಬಂಧದ ನಡುವೆ ಏನೋ ಸಂಭಾಷಣೆ ಆಗುತ್ತಿದೆ. ಇಲ್ಲೇ ಎದುರಲ್ಲೇ ಒಂದು ಸನ್ನಿವೇಶ ನಡೆಯುತ್ತಿದೆ ಅಂತನ್ನಿಸುತ್ತದೆ ಈ ಕಥೆ.
ಇನ್ನೊಂದು ‘ಹೃದಯವೆಂಬ ಮಧು ಪಾತ್ರೆ’ ಕಥೆ. ತುಂಬಾ ಹಿಡಿಸಿದ್ದು ಯಾಕೆಂದರೇ, ಇದರಲ್ಲಿ ಇರುವ ಒಂದು ಕಾವ್ಯದಿಂದ.
“ಈ ಹೃದಯ ಮಧು ಪಾತ್ರೆಯೇ ಆಗಿದ್ದರೆ
ಅದೀಗ ತುಂಬಿದೆ..
ನಿನ್ನ ತುಟಿಗಳಿಗಾಗಿ ಮಾತ್ರವೇ ತವಕಿಸುತ್ತಿರುವ
ಈ ನಿಷ್ಕಳಂಕ ಮದಿರೆಗೆ
ನಿನ್ನ ದಾಹವನು ಮೀಸಲಿಡು”
ವಾವ್ಹ್ ಬ್ಯೂಟಿಫುಲ್ ಸಾಲುಗಳಲ್ವಾ…? ಹೌದು, ಉತ್ಪ್ರೇಕ್ಷೆಯಲ್ಲವಿದು. ಕಥೆಯೊಂದಕ್ಕೆ ಎಲ್ಲಿ ವೇಗ ಕೊಡಬೇಕು, ಎಲ್ಲಿ ತಿರುವು ಕೊಡಬೇಕು ಎನ್ನುವುದು ಶಾಂತಿಯವರು ಬಹಳ ಚೆನ್ನಾಗಿ ತಿಳಿದಿರುವುದಕ್ಕಾಗಿಯೇ ಕನ್ನಡ ಕಥಾ ಸಾಹಿತ್ಯ ಕ್ಷೇತ್ರದಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಂಡಿರುವುದು ಎನ್ನುವುದಕ್ಕೆ ಸಂಶಯವೇ ಇಲ್ಲ. ಅವರ ಕಥೆಗಳಲ್ಲಿನ ಕಾವ್ಯ ಸಂವೇದನೆಯಿಂದಲೇ ಮತ್ತು ಅದರ ಗಟ್ಟಿತನದಿಂದಲೇ ಓದುಗನಿಗೆ ಇಷ್ಟವಾಗುತ್ತದೆ.
ಈ ಕಥೆಯಲ್ಲಿ ಒಂದು ಸಾಲಿದೆ. ‘ಈ ಬದುಕೆಂಬ ಮೋಹಕ್ಕೆ ಎಷ್ಟೊಂದು ಮುಖಗಳು!’ ಹೌದು, ಜಾಗೃತ ಮನಸ್ಸಿಗೂ ಹರಿವಿಗೆ ಇಂತದ್ದೇ ದಾರಿಯಂತಿಲ್ಲ. ಪ್ರೇಮ, ಮೋಹ, ಚಡಪಡಿಕೆ, ಪ್ರೀತಿ ಭಾವದ ಮಿಂಚಿನ ಸೆಳೆತ, ಅದರೊಂದಿಗಿನ ವಿನೋದ, ವಿಷಾದ, ವಿದಾಯ ಬದುಕಿಗೆ ಎಂತಹ ಪಾಠ ನೀಡುತ್ತದಲ್ವಾ..? ಈ ಎಲ್ಲಾ ಮಜಲುಗಳ ಒಟ್ಟಾರೆಯ ಸೂಕ್ಷ್ಮ ನೋಟ ಈ ಕಥೆಯಲ್ಲಿ ಚೆನ್ನಾಗಿ ಮೂಡಿಬಂದಿದೆ.
ಹೌದು, ಇಲ್ಲಿಯ ಬಹುತೇಕ ಕಥೆಗಳು ನಮ್ಮವೇ ಅನ್ನಿಸುತ್ತದೆ. ಕೆಲವೊಂದೆರಡು ಕಥೆಗಳು ಶುಷ್ಕ ಬರಹ ಅಂತನ್ನಿಸಿದರೂ ಅದರ ವಸ್ತು ಚೆನ್ನಾಗಿದೆ. ಮಧುರಾನುಭವ ಈ ಪುಸ್ತಕದ ಓದು ನನಗೊದಗಿಸಿದೆ.
ಎಲ್ಲವನ್ನೂ ನಾನೇ ಹೇಳುವುದಾದರೇ, ನೀವ್ಯಾತಕ್ಕೆ ಮತ್ತೆ..? ಉಳಿದದ್ದು ನೀವು ಓದಿ ಎಂಬ ಮೃದು ಬೈಗುಳವಿದು. ನಿಮಗೆ ಹಿತ ನೀಡುವ, ಖುಷಿ ಕೊಡುವ ಕೃತಿ ಇದು. ಓದು ನಿಮ್ಮದಾಗಲಿ.
-ಶ್ರೀರಾಜ್ ವಕ್ವಾಡಿ
ಓದಿ : ಪುಸ್ತಕ ವಿಮರ್ಶೆ : ‘ಇಜಯಾ’ಎಂಬ ಹೊಸ ಧ್ವನಿ