Advertisement

ಘಟನೆಗಳ ವಿವರಗಳೊಂದಿಗೆ ಬದುಕನ್ನು ಕಟ್ಟಿಕೊಡುವ ‘ಕಾಲಕೋಶ’

12:43 PM Jul 25, 2021 | Team Udayavani |

ಮನುಷ್ಯನ ಜಾತ್ಯಾಂಧತೆ, ಮತಾಂಧತೆ, ಜನಾಂಗ ದ್ವೇಷದಂತಹ ಸಂಕುಚಿತ ಮನೋಭಾವಗಳು ಎಡೆ ಮಾಡಿಕೊಡುವ ಹಿಂಸಾಚಾರ ಹಾಗೂ ರಕ್ತಪಾತಗಳು ಹೇಗೆ ಅಮಾಯಕರ ಬದುಕನ್ನು ಆಪೋಶನ ತೆಗೆದುಕೊಳ್ಳುತ್ತವೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಘಟನೆಗಳ ವಿವರಗಳೊಂದಿಗೆ ಕಟ್ಟಿಕೊಡುವ ‘ಕಾಲಕೋಶ’ ಶಶಿಧರ ಹಾಲಾಡಿಯವರು ಇತ್ತೀಚೆಗೆ ಪ್ರಕಟಿಸಿದ  ಕಾದಂಬರಿ. ಈಗಾಗಲೇ ತಮ್ಮ ಅಂಕಣ ಲೇಖನ, ಪ್ರವಾಸ ಕಥನ ಮತ್ತು ವೈಚಾರಿಕ ಬರಹಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಶಶಿಧರ್ ಹಾಲಾಡಿಯವರ ಚೊಚ್ಚಲ ಕಾದಂಬರಿಯಿದು. ವಸ್ತುವಿನ ದೃಷ್ಟಿಯಿಂದ ಕನ್ನಡಕ್ಕೆ ತುಸು ಹೊಸದೆನ್ನಿಸುವ ಕಥೆ ಇಲ್ಲಿದೆ.‌ದೇಶ ವಿಭಜನೆಯ ಕಾಲದಲ್ಲಿ ನಡೆದ ಅನಾಹುತಗಳ ಕುರಿತಾದ ಕಥೆ-ಕಾದಂಬರಿಗಳು ಅನುವಾದದ ಮೂಲಕ  ಕನ್ನಡದಲ್ಲಿ  ಕೆಲವು ಬಂದಿವೆಯಾದರೂ  ಸ್ವತಂತ್ರ ಕೃತಿಗಳು ಬಂದದ್ದು  ಕಡಿಮೆ. ಅಲ್ಲದೆ ‘ಕಾಲಕೋಶ’ವು ಹೇಳುವುದು 1946-47ರ ಕಥೆ ಮಾತ್ರವಲ್ಲ, ಬೇರೆ ಮೂರು ಸಂದರ್ಭಗಳಲ್ಲಿ ಹುಟ್ಟಿಕೊಂಡ ದೊಂಬಿ, ಹಿಂಸೆಗಳ ದಳ್ಳುರಿಗಳು ಹೇಗೆ ಮನುಕುಲಕ್ಕೆ ವಿನಾಶಕಾರಿಯಾಗಿ ಪರಿಣಮಿಸಿದವು ಎಂಬುದನ್ನೂ ಹೇಳುತ್ತದೆ. 1946 ರಿಂದ ಹಿಡಿದು 1984 ರ ವರೆಗೆ ದೇಶದಾದ್ಯಂತ ವಿವಿಧ ಸಂದರ್ಭಗಳಲ್ಲಿ ನಡೆದ  ಹತ್ಯಾಕಾಂಡಕ್ಕೆ ಸಂಬಂಧಿಸಿದ ಹಾಗೆ ಕಾಲ ಕೋಶದಲ್ಲಿ ಹುದುಗಿರುವ ಕಹಿ ನೆನಪುಗಳನ್ನು ಇದು ಚಿತ್ರಕ ಶಕ್ತಿಯೊಂದಿಗೆ ಅನಾವರಣಗೊಳಿಸುತ್ತದೆ. ಆದ್ದರಿಂದ ಈ ಕಾದಂಬರಿಗೆ ಅದರದ್ದೇ ಆದ ವೈಶಿಷ್ಟ್ಯವಿದೆ.

Advertisement

ಇದನ್ನೂ ಓದಿ : ಸಿದ್ದರಾಮಯ್ಯನವರು ಅಧಿಕಾರ ಬಂದಾಗ ಅಹಿಂದವನ್ನು ಮರೆತರು – ನಳಿನ್ ಕುಮಾರ್

ಇಲ್ಲಿ ನಿರೂಪಿಸಿರುವ ನಾಲ್ಕು ದುರ್ಘಟನೆಗಳು  :

1.ದೇಶ ವಿಭಜನೆಗೆ ಮೊದಲು ಲಾಹೋರಿನಿಂದ ಸಿಕ್ಖರನ್ನು ದೆಹಲಿಗೂ ಅಮೃತಸರಕ್ಕೂ ಹೊಡೆದೋಡಿಸಿ, ಪ್ರತಿಭಟಿಸಿದವರನ್ನು ನಿರ್ದಯವಾಗಿ ಹತ್ಯೆಗೈದ ಮತ್ತು ದೆಹಲಿಯಲ್ಲಿ ಅವರು ಅನುಭವಿಸಿದ ನರಕ ಯಾತನೆಯ ಕಥೆ

  1. 1948ರಲ್ಲಿ ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆಯ ಕುಟುಂಬನಾಮವಿದ್ದವರನ್ನೆಲ್ಲ ಮುಂಬಯಿನಲ್ಲಿ ನಿರ್ದಾಕ್ಷಿಣ್ಯವಾಗಿ ಹೊಡೆದು ಕೊಂದು ಅವರ ಬದುಕನ್ನು ನಾಶ ಮಾಡಿದ ಕಥೆ
  2. ಕರ್ನಾಟಕ – ತಮಿಳುನಾಡು ಗಳ ಗಡಿ ಪ್ರದೇಶದ ಕಾಡುಗಳಲ್ಲಿ

ಗಂಧದ ಮರ ಹಾಗೂ ಆನೆ ದಂತಗಳ ಕಳ್ಳಸಾಗಣೆ ಮಾಡುವವರು ಕಾಡಿನ ಹೊರವಲಯದಲ್ಲಿ ಪ್ರಾಮಾಣಿಕವಾಗಿ ಕೃಷಿ ಮಾಡಿಕೊಂಡಿರುವ ಈ ಕಥೆಯ ನಿರೂಪಕನ ಕುಟುಂಬದ ಹಿರಿಯನನ್ನು ಕೊಂದು ಕಷ್ಟಕ್ಕೀಡು ಮಾಡುವ ಕಥೆ

  1. 1984ರಲ್ಲಿ ತಮಗೆ ಪ್ರತ್ಯೇಕ ಖಾಲಿಸ್ತಾನ ಬೇಕೆಂದು ಹಠ ಮಾಡಿ ಉಗ್ರಗಾಮಿಗಳಾದ ಸಿಕ್ಖರ ನ್ನು ಸರಕಾರವು ಅವರು ಅಡಗಿಕೊಂಡಿದ್ದ ಅಮೃತಸರದ ಸ್ವರ್ಣಮಂದಿರದಿಂದ ಎಳೆದೆಗೆದು ಬಂಧಿಸಿದ್ದಕ್ಕೆ ಪ್ರತೀಕಾರವಾಗಿ ಅವರಲ್ಲಿ ಇಬ್ಬರಿಂದ ಇಂದಿರಾಗಾಂಧಿಯವರ ಹತ್ಯೆಯಾದಾಗ ದೆಹಲಿಯಲ್ಲೂ ದೇಶದ ಇತರ ಭಾಗಗಳಲ್ಲೂ ಸಿಕ್ಖರನ್ನು ‘ಕಂಡಲ್ಲಿ ಹೊಡೆದು ಕೊಂದು’ ಅವರ ಮನೆಗಳನ್ನು ಬೆಂಕಿ ಹಚ್ಚಿ ನಿರ್ನಾಮ ಮಾಡಿದ ಮಾರಣ ಹೋಮದ ಕಥೆ.
Advertisement

ಇದನ್ನೂ ಓದಿ : ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ: ಸಿಎಂ ಯಡಿಯೂರಪ್ಪ ಭರವಸೆ

ಈ ಎಲ್ಲ ಕಥೆಗಳನ್ನು ಕಾದಂಬರಿಯಲ್ಲಿ ಚಿತ್ರಿಸಿದ ಬಗೆ ಅತ್ಯಂತ ಸಹಜವಾಗಿದೆ. ಕಥೆಯ ನಿರೂಪಕ  ಬ್ಯಾಂಕ್ ಕೆಲಸದ ಪ್ರೊಬೇಷನರಿ ಅವಧಿಯಲ್ಲಿ  ತನ್ನ ದೊಡ್ಡಪ್ಪನ ಕೊಲೆಯಾದಾಗ ಗಡಿಬಿಡಿಯಲ್ಲಿ ಅಧಿಕಾರಿಗಳಿಗೆ ಹೇಳದೆಯೇ ಎರಡು ವಾರ ರಜೆ ಮಾಡಿದನೆಂಬ ಆರೋಪದ ಮೇಲೆ ದೆಹಲಿ ಶಾಖೆಗೆ ವರ್ಗವಾಗಿ ಹೋಗಿ, ಅಲ್ಲಿ ಉಳಿಯಲು ಮನೆ ಸಿಗದೆ ಒದ್ದಾಡುತ್ತ ಅಮರ್ ಸಿಂಗ್ ಎಂಬ ಒಬ್ಬ ಸಿಕ್ಖನ ಮನೆಯಲ್ಲಿ ಬಾಡಿಗೆಗಿರುತ್ತಾನೆ. ಅಲ್ಲಿ ಅಮರ್ ಸಿಂಗ್ ತನ್ನ ದುರಂತ ಕಥೆಯನ್ನು ಹೇಳುತ್ತಾನೆ. ಇದು ೧೯೪೬ರಲ್ಲಿ ಲಾಹೋರ್ ವಾಸಿಗಳು ಅನುಭವಿಸಿದ ಸಾವು ನೋವು ವಿನಾಶಗಳ ಯಾತನೆಯ ಕಥೆ. ಅದರ ನಡುವೆ ಅಮರಸಿಂಗನಿಗೆ ನಿರೂಪಕ ತನ್ನ ಹಿರಿಯರು ಎದುರಿಸಿದ ಭಯಾನಕ ಅನುಭವಗಳನ್ನು ವಿವರಿಸುವ ಕಥೆ ಬರುತ್ತದೆ. ನಿರೂಪಕನಿಗೆ ಇನ್ನೊಬ್ಬ ಹಿರಿಯ ಸಹೋದ್ಯೋಗಿ ಮಹಾರಾಷ್ಟ್ರದ ಆಪ್ಟೆ ಎಂಬವರ ಕುಟುಂಬದ ಜತೆ ಸ್ನೇಹ ಬೆಳೆದು ಗೋಡ್ಸೆಯ ಹೆಸರಿದ್ದ ಕಾರಣದಿಂದ ರತ್ನಗಿರಿಯಲ್ಲಿ ಅತ್ಯಂತ ಗೌರವದ ಬದುಕನ್ನು ಸಾಗಿಸುತ್ತಿದ್ದವರ ಕುಟುಂಬಗಳ ಮೇಲೆ ನಡೆದ ಹಲ್ಲೆ-ದೌರ್ಜನ್ಯಗಳ ಕಥೆಯನ್ನು ಅವರು ಹೇಳುತ್ತಾರೆ. ಕೊನೆಯಲ್ಲಿ ನಿರೂಪಣೆ ವರ್ತಮಾನಕ್ಕೆ ಬಂದು ಸಿಕ್ಖರ ಮಾರಣಹೋಮದ ಮನಕರಗಿಸುವ ಕತೆಯನ್ನು ಹೇಳುತ್ತದೆ.

ಇಲ್ಲಿರುವುದು  ಭಾರತದ ಇತಿಹಾಸದ ಕಾಲಕೋಶದಿಂದ ತೆಗೆದ ಘಟನೆಗಳು. ಆದರೆ ಅದು   ವಿವಿಧ ಐತಿಹಾಸಿಕ  ಕಾಲಘಟ್ಟಗಳ ಯಥಾವತ್ತಾದ ಚಿತ್ರಣವಲ್ಲ. ಒಂದಕ್ಕೊಂದು ಸಂಬಂಧಿಸಿದ ಒಂದೇ ರೀತಿಯ ಘಟನೆಗಳನ್ನು ಆಯ್ದುಕೊಂಡು ಒಂದು ಚೌಕಟ್ಟಿನೊಳಗೆ ಅವನ್ನಿಟ್ಟು ಒಬ್ಬ ಕಾಲ್ಪನಿಕ ನಿರೂಪಕನ ಬದುಕಿನಲ್ಲಿ ನಡೆದಿರಬಹುದಾದ ಘಟನಾವಳಿಗಳನ್ನು ಹೊಂದಿಸಿಕೊಂಡು  ಹೆಣೆದ ಕಥೆ. ಅದಕ್ಕಾಗಿ ಕಾದಂಬರಿಕಾರರು ಒಂದು ವಿನ್ಯಾಸವನ್ನು ರಚಿಸಿಕೊಂಡಿದ್ದಾರೆ. ಐತಿಹಾಸಿಕ ಘಟನೆಗಳ ಬಾಹ್ಯ ಹಂದರವಷ್ಟೇ ಅವರು ಇತಿಹಾಸದಿಂದ ತೆಗೆದುಕೊಂಡದ್ದು. ಮನುಷ್ಯರು ತಮ್ಮ ಧರ್ಮ-ಜಾತಿ-ಜನಾಂಗಗಳ ಮೇಲೆ ಕುರುಡು ಮೋಹ ಬೆಳೆಸಿಕೊಂಡು ಸತ್ಯದ ಬಗ್ಗೆ ಸ್ವಲ್ಪವೂ ಚಿಂತಿಸದೆ ತಪ್ಪೇ ಮಾಡದ ಮುಗ್ಧರನ್ನು ಹೊಡೆದು ಬಡಿದು ಬೆಂಕಿ ಹಚ್ಚಿ ಕೊಲ್ಲುವ, ವಿನಾಶಕಾರಿ ಕೃತ್ಯಗಳನ್ನು ಮಾಡುವ ಅನಾಗರಿಕರಾಗುವುದರ ಭಯಾನಕ  ಸನ್ನಿವೇಶಗಳ ಬಗ್ಗೆ ಓದುಗರ ಗಮನ ಸೆಳೆಯುವುದು ಇಲ್ಲಿ ಕಾದಂಬರಿಕಾರರ ಉದ್ದೇಶ.‌   ಭೂತ-ವರ್ತಮಾನಗಳ ನಡುವೆಯಷ್ಟೇ ಉಳಿಯದೆ ಕೊನೆಯ ಕೆಲವು ಪುಟಗಳಲ್ಲಿ ಭವಿಷ್ಯದ ಕರಾಳ ದಿನಗಳತ್ತ ಜ್ಯೋತಿಷಿಯ ಮಾತುಗಳ ಮೂಲಕ  ಕಾಲಕೋಶದ ಮುಂದಿನ ಸಂಭಾವ್ಯ ಘಟನೆಗಳನ್ನೂ ಸೂಚಿಸಿ  ಇತಿಹಾಸದ ಮರುಕಳಿಸುವ ಗುಣದತ್ತ  ಅದು ಬೊಟ್ಟು ಮಾಡಿ ತೋರಿಸುತ್ತದೆ. ಅಲ್ಲದೆ ಎದೆ ನಡುಗಿಸುವ ಘಟನೆಗಳ ನಡುವೆ ನಿರೂಪಕ ಮತ್ತು ಗೋಡ್ಸೆ ಮನೆತನಕ್ಕೆ ಸೇರಿದ ಚಂದ್ರಿಕಾ ಅನ್ನುವ ಹೆಣ್ಣಿನ ನಡುವೆ ಪ್ರೀತಿ ಹುಟ್ಟಿಕೊಂಡು ಅವರು ಮದುವೆಯಾಗುವ ಸೂಚನೆ ನೀಡುವ ಕಾದಂಬರಿ ಸಣ್ಣಮಟ್ಟಿನ ಒಂದು ಆಶಾಭಾವಕ್ಕೂ ಎಡೆಮಾಡಿ ಕೊಡುತ್ತದೆ.

ತಮ್ಮ ಸ್ವೋಪಜ್ಞ ಹಾಗೂ ಸೃಜನಶೀಲ ನಿರೂಪಣಾ ಶೈಲಿಯ ಮೂಲಕ ಕಾದಂಬರಿಕಾರರು  ಮನುಷ್ಯರು ನಿರ್ಮಿಸುವ ಭಯಾನಕ ಹಾಗೂ ಆತಂಕಕಾರಿ ವಾತಾವರಣವನ್ನು ಕಾದಂಬರಿಯೊಳಗೆ ಸೃಷ್ಟಿಸುವಲ್ಲಿ  ಖಂಡಿತವಾಗಿಯೂ ಸಫಲರಾಗಿದ್ದಾರೆ. ನಮ್ಮ ದೇಶದಲ್ಲಿ ಗೋಡ್ಸೆ ಹಾಗೂ ಸಾವರ್ಕರ್ ವಿವಾದಾತ್ಮಕ ವ್ಯಕ್ತಿಗಳು. ಒಂದು ಪಂಥದವರಂತೂ ಅವರು ಎದುರಿಸಿದ ರಾಜಕೀಯ ಸಂದರ್ಭಗಳೇನಿರಬಹುದು ಎಂಬುದರ ಬಗ್ಗೆ ಆಲೋಚಿಸದೆಯೇ ಅವರು ದೇಶದ್ರೋಹಿಗಳು ಎನ್ನುವ ಮಟ್ಟಕ್ಕೆ ಅವರ ಮೇಲೆ ದ್ವೇಷ ಕಾರುತ್ತಾರೆ. ಈ ಕಾದಂಬರಿಯಲ್ಲಿ ಅತ್ಯಂತ ಸೂಚ್ಯವಾಗಿ ಅವರಿಬ್ಬರ ಬಗ್ಗೆ ಮೃದು ಧೋರಣೆಯಿದ್ದಂತೆ ಕಾಣುತ್ತದೆ. ಇದು ಲೇಖಕರ ದಿಟ್ಟ ನಿಲುವನ್ನು ಸೂಚಿಸುತ್ತದೆ.

ಕಾದಂಬರಿಯ ಭಾಷಾ ಶೈಲಿ ಚೆನ್ನಾಗಿದೆ. 159 ಪುಟಗಳ ಕೃತಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಯುವಂತೆ ಮಾಡುವುದಲ್ಲದೆ ಓದಿದ್ದು ಮತ್ತೆ ಮತ್ತೆ ಕಾಡುವಂತೆಯೂ ಮಾಡುವಷ್ಟು ಶಕ್ತವಾಗಿದೆ.

-ಡಾ.ಪಾರ್ವತಿ ಜಿ.ಐತಾಳ್

———————–

ಕೃತಿಯ ಹೆಸರು :  ಕಾಲಕೋಶ

ಲೇಖಕರು :  ಶಶಿಧರ್ ಹಾಲಾಡಿ

ಪ್ರ; ಅಂಕಿತ ಪುಸ್ತಕ

ಇದನ್ನೂ ಓದಿ : ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್

Advertisement

Udayavani is now on Telegram. Click here to join our channel and stay updated with the latest news.

Next