Advertisement

ಟಿಪ್ಪುನನ್ನು ಮತಾಂಧತೆ ಕಣ್ಣಿನಿಂದ ನೋಡಬೇಡಿ

02:43 PM Apr 10, 2022 | Team Udayavani |

ಮೈಸೂರು: ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್‌ ಯೋಧ. ಆತನನ್ನು ಕಾಮಾಲೆ ಕಣ್ಣಿನಿಂದ, ಮತಾಂಧತೆಯ ಕಣ್ಣಿನಿಂದ ನೋಡಬಾರದು ಎಂದು ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಹೇಳಿದರು.

Advertisement

ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಶನಿವಾರ ಪ್ರೊ.ಪಿ. ವಿ.ನಂಜರಾಜ ಅರಸು ಅವರ ಟೀಪೂ ಮಾನ್ಯತೆ ಸಿಗದ ಸುಲ್ತಾನ್‌ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ದರು. ಟಿಪ್ಪು ಸುಲ್ತಾನ್‌ ಯಾರಿಗೂ ತಲೆಬಾಗಲಿಲ್ಲ. ಭಾರತೀಯ ಹೃದಯ ಸಾಮ್ರಾಜ್ಯದಲ್ಲಿ ಟಿಪ್ಪು ಸುಲ್ತಾನ್‌ ಸದಾ ಇರುತ್ತಾನೆ. ಟಿಪ್ಪು ರಾಷ್ಟ್ರೀಯತೆಯನ್ನು ಎತ್ತಿ ಹಿಡಿದು ಭಾರತಕ್ಕೆ ಗೌರವ ತಂದುಕೊಟ್ಟಿದ್ದಾನೆ ಎಂದು ವಿಶ್ವನಾಥ್‌ ಹೇಳಿದರು.

ಟಿಪ್ಪು ಸುಲ್ತಾನ್‌ ಕೊಡಗಿನಲ್ಲಿ 80 ಸಾವಿರ ಜನರನ್ನು ಸಾಯಿಸಿದ ಎನ್ನುತ್ತಾರೆ. ಕೊಡಗಿನಲ್ಲಿ 250 ವರ್ಷಗಳ ಹಿಂದೆ ಜನಸಂಖ್ಯೆ ಎಷ್ಟಿತ್ತು? ಟಿಪ್ಪು ಸುಲ್ತಾನ್‌ 80 ಸಾವಿರ ಜನರನ್ನು ಹೇಗೆ ಸಾಯಿಸಿದ? ಎಂದು ಪ್ರಶ್ನಿಸಿ ದರು. ಜಗತ್ತಿನ ಚರಿತ್ರೆಯೇ ರಕ್ತಸಿಕ್ತವಾದುದು. ರಕ್ತ ಹರಿಯದೇ ಯಾವ ಚರಿತ್ರೆಯೂ ಜಗತ್ತಿನಲ್ಲಿ ಇಲ್ಲ ಎಂದರು.ಭಾರತವನ್ನು ಸಮರ್ಥವಾಗಿ ಕಟ್ಟುವಲ್ಲಿ ಎಲ್ಲ ಧರ್ಮದವರ ಪಾತ್ರವೂ ಇದೆ. ಇದನ್ನು ಬೇರ್ಪಡಿಸಿ ನೋಡಬಾರದು. ದೇಶದ ಇವತ್ತಿನ ಪರಿಸ್ಥಿತಿ ಯಲ್ಲಿ ಧರ್ಮಗುರುಗಳು ಮಾತಾಡಬೇಕು. ಸ್ವಾಮೀಜಿಗಳು ಏಕೆ ಮೂಕರಾಗಿದ್ದೀರಿ? ಎಂದು ವಿಶ್ವನಾಥ್‌ ಪ್ರಶ್ನಿಸಿದರು.

ಭಾವುಕರಾದ ವಿಶ್ವನಾಥ್‌: ತಾವು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತ್ಯಜಿಸಿ ಭಾರತೀಯ ಜನತಾಪಕ್ಷ ಸೇರಿ ಝಂಡಾವನ್ನು ಬದಲಿಸಿದ್ದರೂ ತಮ್ಮ ಅಜೆಂಡಾವನ್ನು ಎಂದೂ ಬದಲಿಸಿಲ್ಲ. ಕಾಂಗ್ರೆಸ್‌ನಲ್ಲಿ 40 ವರ್ಷಗಳ ಕಾಲ ಇದ್ದೆ. ಕಾಂಗ್ರೆಸ್‌ ನನಗೆ ತಾಯಿ ಇದ್ದಂತೆ ಎಂದು ಭಾವುಕರಾದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎ ನ್‌.ನಾಗಮೋಹನ ದಾಸ್‌ ಅವರು ಮಾತನಾಡಿ, ಚುನಾವಣೆಯಲ್ಲಿ ಹಣ, ಜಾತಿ, ಧರ್ಮದ ಪ್ರಭಾವ ಹೆಚ್ಚಾಗಿದೆ. ಅಪರಾಧೀಕರಣ, ಕೋಮುವಾದ ಗೆಲ್ಲುತ್ತಿದೆ ಎಂದು ವಿಷಾದಿಸಿದರು.

Advertisement

ಸಮಾಜದಲ್ಲಿ ಇವತ್ತು ಧರ್ಮದ ಆಧಾರದ ಮೇಲೆ ಹೊಸ ಹೊಸ ವಿವಾದಗಳನ್ನು ಹುಟ್ಟು ಹಾಕಲಾಗುತ್ತಿದೆ. ಹಸಿವು, ಅಕ್ಷರ, ಉದ್ಯೋಗ, ಆರೋಗ್ಯದ ಪ್ರಶ್ನೆಗಳೇ ಬರು ತ್ತಿಲ್ಲ ಎಂದು ನೋವಿನಿಂದ ನುಡಿದರು. ಮೊದಲು ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿವಾದವಾಯಿತು. ಈಗ ಮಸೀದಿಯಲ್ಲಿ ಮೈಕ್‌ ಹಾಕಬಾರದು ಎನ್ನುತ್ತಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಕೆದಕಲಾಗು ತ್ತಿದೆ. ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಬೇಕಿದೆ. ಕೋಮುವಾದವನ್ನು ವಿರೋಧಿಸಬೇಕಿದೆ. ಪ್ರಜಾಪ್ರ ಭುತ್ವ ಎಂದರೆ ಕೇವಲ ರಾಜಕೀಯ ಪ್ರಜಾಪ್ರಭುತ್ವ ಒಂದೇ ಅಲ್ಲ. ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವವೂ ಇದೆ ಎಂದರು.

ಕೋಮುವಾದಿಗಳ ಗುರಿ ಮುಸ್ಲಿಮರಲ್ಲ: ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ದೇಶವನ್ನು ಇವತ್ತು ಏಕಸಂಸ್ಕೃತಿ ಕಡೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದು ಸರಿಯಲ್ಲ. ಕೋಮುವಾದಿ ಗಳು ದಿನಕ್ಕೊಂದು ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ. ಕೋಮುವಾದಿಗಳ ಗುರಿ ಮುಸ್ಲಿಮರಲ್ಲ, ಭಾರತದ ಸಂವಿ ಧಾನ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಎಂದು ಆರೋಪಿಸಿದರು.

ನಿವೃತ್ತ ಪ್ರಾಧ್ಯಾಪಕ ಮಹೇಶಚಂದ್ರ ಗುರು ಮಾತನಾಡಿದರು. ಅಕ್ಕ ಐಎಎಸ್‌ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್‌, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು, ಪ್ರಕಾಶಕ ಅಭಿರುಚಿ ಗಣೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next