ಮುಂಬಯಿ, ಅ. 21: ಹಾಸ್ಯ ಬರೆಯುವುದು ಬಹಳ ಕಷ್ಟಕರ. ಅದರಲ್ಲೂ ವ್ಯಂಗ್ಯ ತುಂಬಾ ತ್ರಾಸದಾಯಕವಾಗಿದೆ. ಏಕೆಂದರೆ ಹಾಸ್ಯ ಕೃತಿಯೊಳಗಿನಿಂದಲೇ ಮೂಡಿ ಬರಬೇಕು. ಇಲ್ಲದಿದ್ದರೆ ಅದು ಹಾಸ್ಯಾಸ್ಪದ ಆಗುತ್ತದೆ. ತುಳುವಿನಲ್ಲಿ ಬರೆಯುವವರನ್ನು ತುಂಬಾ ಲಘುವಾಗಿ ಕಾಣಲಾಗುತ್ತಿದೆ. ಆದರೆ ತುಳು ಭಾಷೆಯಲ್ಲಿ ಸಶಕ್ತವಾಗಿ ಕೃತಿ ಮೂಡಿ ಬರಬಲ್ಲದು ಅನ್ನುವುದಕ್ಕೆ ದೀರ್ಘಾ ವಧಿಯಿಂದ ತುಳುವಿನಲ್ಲಿ ಬರೆಯುತ್ತಿರುವ ಸೋಮನಾಥ ಕರ್ಕೇರ ಅವರು ಸಾಕ್ಷಿ ಎಂದು ಕವಿ, ಲೇಖಕಿ ಶಾರದಾ ಆನಂದ್ ಅಂಚನ್ ತಿಳಿಸಿದರು.
ಅ. 19ರಂದು ಸಂಜೆ ಮುಂಬಯಿ ಕನ್ನಡ ಸಂಘದ ಸಹಯೋಗದಲ್ಲಿ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಸಂಘದ ವಾಚನಾಲಯದಲ್ಲಿ ನಡೆದ ಕನ್ನಡ ಸಂಘದ ಜತೆ ಕಾರ್ಯದರ್ಶಿ, ಲೇಖಕ ಸೋಮನಾಥ ಎಸ್. ಕರ್ಕೇರ ಅವರ “ಬಲೇ ಇಡ್ಲಿ ತಿನ್ಕ’ (ಬನ್ನಿ ಇಡ್ಲಿ ತಿನ್ನೋಣ) ಹಾಸ್ಯಮಯ ತುಳು ನಾಟಕದ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಶುಭ ಹಾರೈಸಿದರು.
ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ್ ಎಸ್. ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಪೂಜಾ ಪ್ರಕಾಶನದ ಪ್ರಕಾಶಕ, ಕವಿ, ನಾಟಕಕಾರ ಶಿಮಂತೂರು ಚಂದ್ರಹಾಸ ಸುವರ್ಣ ಉಪಸ್ಥಿತರಿದ್ದು ಮಾತನಾಡಿ, ನಾಟಕ ಬರೆಯುವವರಿಗೆ ಜೀವನಾನುಭವದ ಅಗತ್ಯವಿದೆ. ಯಾಕೆಂದರೆ ನಾಟಕ ಅನ್ನುವುದು ಜೀವನದ ಇನ್ನೊಂದು ಮುಖಭಾವ. ಸೋಮನಾಥರು ದೀರ್ಘ ಕಾಲದಿಂದ ಹಾಸ್ಯ ನಾಟಕಗಳನ್ನು ಬರೆಯುತ್ತಿದ್ದಾರೆ. ಅವರ ಕಚಗುಳಿ ಇಡುವ ವಿಭಿನ್ನ ಶೈಲಿಯ ನಾಟಕಗಳು ಹಲವಾರು ಪ್ರದರ್ಶನಗಳನ್ನು ಕಂಡಿವೆ.
ಇಂದು ಬಿಡುಗಡೆಗೊಂಡಿರುವ ಕೃತಿಯೂ ಅಂತಹ ಒಳ್ಳೆಯ ಹಾಸ್ಯ ನಾಟಕಕ್ಕೆ ಉತ್ತಮಉದಾಹರಣೆಯಾಗಿದೆ ಎಂದು ನುಡಿದು ಕೃತಿಕಾರರನ್ನು ಅಭಿನಂದಿಸಿದರು. ಮುಂಬಯಿ ಕನ್ನಡ ಸಂಘದೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿರುವ ಸೋಮನಾಥ ಕರ್ಕೇರ ಅವರು ಸಂಘದ ಪದಾಧಿಕಾರಿಯಾಗಿ ನಮ್ಮೊಂದಿಗೆ ದುಡಿಯುತ್ತಿರುವ ಶ್ರಮ ಜೀವಿಯಾಗಿದ್ದಾರೆ. ಅವರೋರ್ವ ಸರಳ ವ್ಯಕ್ತಿತ್ವವುಳ್ಳ ಅಪ್ರತಿಮ ಪ್ರತಿಭೆ. ಕನ್ನಡ ಸಂಘದ ಕಚೇರಿಯಲ್ಲೇ ಇಂದು ಅವರ ತುಳು ಕೃತಿಯು ಬಿಡುಗಡೆಗೊಂಡಿರುವುದು ನಮಗೆ ಅಭಿಮಾನದ ಸಂಗತಿ ಎಂದು ಅಧ್ಯಕ್ಷತೆ ವಹಿಸಿದ್ದ ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ್ ನಾಯಕ್ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಎನ್. ಬಂಗೇರ, ಮಹಿಳಾ ವಿಭಾಗಾಧ್ಯಕ್ಷೆ ಡಾ| ರಜನಿ ವಿ. ಪೈ, ವಾಚನಾಲಯಾಧಿಕಾರಿ ಎಸ್. ಕೆ. ಪದ್ಮನಾಭ, ಸದಸ್ಯ ನಾರಾಯಣ ರಾವ್, ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಎಚ್. ಬಿ. ಎಲ್. ರಾವ್, ಚಿತ್ರಾಪು ಕೆ. ಎಂ. ಕೋಟ್ಯಾನ್, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಎಸ್. ಕೆ. ಸುಂದರ್, ಸಾ. ದಯಾ, ಕುಸುಮಾ ಸಿ. ಪೂಜಾರಿ ಮತ್ತಿತರ ಗಣ್ಯರು ಹಾಜರಿದ್ದು ಕೃತಿಕಾರರನ್ನು ಅಭಿನಂದಿಸಿದರು. ಕೃತಿಕರ್ತ ಸೋಮನಾಥ ಕರ್ಕೇರ ಅವರು ಅತಿಥಿಗಳನ್ನು ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಮೊಗವೀರ ವ್ಯವಸ್ಥಾಪಕ
ಮಂಡಳಿಯ ನವಿಮುಂಬಯಿ ಸಮಿತಿಯ ಮಹಿಳೆಯರು ಪ್ರಾರ್ಥನೆಗೈದರು. ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಎಸ್. ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಘದ ಗೌರವ ಕೋಶಾಧಿಕಾರಿ ಸುಧಾಕರ್ ಸಿ.ಪೂಜಾರಿ ವಂದಿಸಿದರು. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್