Advertisement

ಕೆಂಗಲ್ ಹನುಮಂತಯ್ಯ ಕುರಿತ ಗ್ರಂಥ ಇದೇ ವರ್ಷ ಬಿಡುಗಡೆ: ಸಿಎಂ ಬೊಮ್ಮಾಯಿ

11:30 AM Feb 10, 2023 | Team Udayavani |

ಬೆಂಗಳೂರು: ಪ್ರತಿ ಕನ್ನಡಿಗನಿಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಬದುಕು, ಹೋರಾಟದ ಬಗ್ಗೆ ಪರಿಚಯಿಸುವ ಗ್ರಂಥವನ್ನು ಇದೇ ವರ್ಷ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಇಂದು ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ 115 ನೇ ಜನ್ಮದಿನಾಚಾರಣೆಯ ಅಂಗವಾಗಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಅವರ ಜೀವನ ಚರಿತ್ರೆಯನ್ನು ಒಗ್ಗೂಡಿಸಿ ಅಧಿಕೃತ ಗ್ರಂಥ ಸಿದ್ಧಪಡಿಸಿ ಈ ವರ್ಷ ಬಿಡುಗಡೆ ಮಾಡಲಾಗುವುದು. ಈಗಾಗಲೇ ರಾಮನಗರದಲ್ಲಿ ಕೆಂಗಲ್ ಹನುಮಂತ ಯ್ಯನವರ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಆದಷ್ಟು ಬೇಗನೆ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದು.  ಬೆಂಗಳೂರು- ಮೈಸೂರು ರಸ್ತೆಯ ಮಾರ್ಗದ ಪ್ರಮುಖ ಸ್ಥಳದಲ್ಲಿ ಅವರ ಪ್ರತಿಮೆ ನಿರ್ಮಾಣಕ್ಕೆ ಬಿಬಿಎಂಪಿಯಲ್ಲಿ ಪ್ರಸ್ತಾವನೆ ಇದೆ. ಅದಕ್ಕೆ ಕೂಡಲೇ ಒಪ್ಪಿಗೆ ನೀಡಿ ಆ ಕೆಲಸವನ್ನು ಈ ವರ್ಷವೇ ಪ್ರಾರಂಭಿಸಲಾಗುವುದು. ಕೆಂಗಲ್ ನಲ್ಲಿರುವ ಅವರ ಸ್ಮಾರಕವನ್ನು ಸ್ಮೃತಿ ಉದ್ಯಾನವನ ಎಂದು ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಅಗತ್ಯ ಅನುದಾನವನ್ನೂ ಒದಗಿಸಲಾಗುವುದು. ಅವರ ಸ್ಮರಣೆ ನಿರಂತರವಾಗಿರಲಿ ಎಂದರು.

ಕರ್ನಾಟಕದ ಅಭಿವೃದ್ಧಿಗೆ ಭದ್ರಬುನಾದಿ ಕರ್ನಾಟಕ ರಾಜ್ಯ ಸ್ಥಾಪನೆಯಾಗಲು, ಕನ್ನಡ ಮಾತನಾಡುವ ಎಲ್ಲಾ ಜನರನ್ನು ಒಗ್ಗೂಡಿಸಿದ ಪ್ರಮುಖರಲ್ಲಿ ಕೆಂಗಲ್ ಹನುಮಂತಯ್ಯ ಅವರು ಅಗ್ರಗಣ್ಯರು. ಮೈಸೂರಿನ ಪ್ರಜಾ ಪ್ರತಿನಿಧಿ ಸಭೆಯಿಂದ ಹಿಡಿದು ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರಾಗಿ, ಕರ್ನಾಟಕದ ಪ್ರಾರಂಭಿಕ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಧೀಮಂತ ನಾಯಕರು.  ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ನೀಡಿ, ಕರ್ನಾಟಕದ ಅಭಿವೃದ್ಧಿಗೆ ಭದ್ರಬುನಾದಿಯನ್ನು ಹಾಕಿದವರು ಎಂದರು.

ವಿಧಾನಸೌಧ ಇಷ್ಟು ಸುಂದರವಾಗಿ ಕರ್ನಾಟಕದ ರಾಜಧಾನಿಯಲ್ಲಿ ತಲೆ ಎತ್ತಲು ಕಾರಣೀಭೂತರಾಗಿದ್ದಾರೆ. ಒಂದು ಮಿಷನ್ ರೀತಿಯಲ್ಲಿ ಪರಿಶ್ರಮ ಹಾಕಿದ್ದರು. ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಅತ್ಯಂತ ಭವ್ಯವಾಗಿ ನಿರ್ಮಾಣ ಮಾಡಿದ್ದು ಕೆಂಗಲ್ ಹನುಮಂತಯ್ಯ ಅವರು‌ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next