Advertisement

 ಪುಸ್ತಕ ಪ್ರೀತಿಯೊಂದಿಗೆ ಕಲ್ಯಾಣೋತ್ಸವ

11:28 AM Oct 08, 2017 | Team Udayavani |

ಪುತ್ತೂರು: ಪಾಣಾಜೆ ನಿವಾಸಿ, ರಾಮನಗರದ ಮೊರಾರ್ಜಿ ದೇಸಾಯಿ ವಸತಿಶಾಲೆಯ ಶಿಕ್ಷಕ ಸದಾಶಿವ ದೇವಸ್ಯ ಪುಸ್ತಕ ಪ್ರೀತಿಯೊಂದಿಗೆ ಗಮನ ಸೆಳೆದಿದ್ದಾರೆ.

Advertisement

ಗಾಂಧಿ ಜಯಂತಿಯಂದು ಶಿಕ್ಷಕ ಸದಾಶಿವ ದೇವಸ್ಯ ಅವರ ವಿವಾಹ ನೆಹರೂನಗರದ ಸಂಗೀತಾ ಅವರೊಂದಿಗೆ ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದಲ್ಲಿ ಜರಗಿತು. ‘ಆಶೀರ್ವಾದವೇ ಉಡುಗೊರೆ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಅಚ್ಚು ಹಾಕಿಸುವವರಿದ್ದಾರೆ. ಪುಸ್ತಕ ಪ್ರೇಮಿಯಾದ ಸದಾಶಿವ ಆಶೀರ್ವಾದವೇ ಉಡುಗೊರೆ ಬದಲಿಗೆ, ‘ನೀವು ಉಡುಗೊರೆ ನೀಡಬಯಸುವಿರಾದರೆ ನಿಮ್ಮ ಉಡುಗೊರೆ ಪುಸ್ತಕವಾಗಿರಲಿ” ಎಂದು ಬರೆಸಿದರು. ಕಲ್ಯಾಣ ಮಂದಿರದ ಆವರಣದಲ್ಲಿ ಪುಸ್ತಕ ಕೊಳ್ಳುವ ವ್ಯವಸ್ಥೆ ಇದೆ ಎಂದೂ ಪ್ರಕಟಿಸಿದರು. ಗಾಂಧೀ ಜಯಂತಿಯ ನೆನಪಿಗೆ ಆಮಂತ್ರಣ ಪತ್ರಿಕೆಯ ಮೇಲೆ ಸ್ವಚ್ಚ ಭಾರತ್‌ ಲೋಗೋ ಮುದ್ರಿಸಿ ಪರಿಸರ ಪ್ರೀತಿಯನ್ನೂ ಹಂಚಿದರು.

ಕಲ್ಯಾಣ ಮಂಟಪದಲ್ಲಿ ಪುತ್ತೂರಿನ ಪುಸ್ತಕ ಪರಿಚಾರಕ ಪ್ರಕಾಶ್‌ ಕೊಡೆಂಕಿರಿ ಅವರ ಜ್ಞಾನಗಂಗಾ ಪುಸ್ತಕ ಮಳಿಗೆಯ ಸುತ್ತ ಜನ ಜಂಗುಳಿ. ಬಂದವರೆಲ್ಲರೂ ಪುಸ್ತಕ ಖರೀದಿಸಿ, ಉಡುಗೊರೆ ನೀಡಿ ಆಶೀರ್ವದಿಸಿದರು. ಸದಾಶಿವರು ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು. ಅವರ ಪುಸ್ತಕ ಪ್ರೀತಿ ಮಾತ್ರ ಯಾವ ಭಾಷಾಶಿಕ್ಷಕರಿಗೂ ಕಡಿಮೆಯದ್ದಲ್ಲ. ಓದುವ ಅಭ್ಯಾಸವನ್ನು ಸದಾ ಉತ್ತೇಜಿಸುವ ಈ ಶಿಕ್ಷಕರೆಂದರೆ ಮಕ್ಕಳಿಗೂ ಅಚ್ಚುಮೆಚ್ಚು. ಮಕ್ಕಳಿಗೆ ಪುಸ್ತಕಗಳನ್ನೇ ಬಹುಮಾನವಾಗಿ ನೀಡುತ್ತಾರೆ.

ಮೌಲ್ಯ ಶಿಕ್ಷಣ, ವ್ಯಕ್ತಿತ್ವ ವಿಕಾಸ, ರಾಷ್ಟ್ರೀಯತೆ, ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಷ್ಟಪಡುವ ಸದಾಶಿವರಿಗೆ ಮಕ್ಕಳ ಅನುಕೂಲಕ್ಕೆ ಗ್ರಂಥಾಲಯ ರೂಪಿಸುವ ಹಂಬಲ. ಪುಸ್ತಕ ಸಂಸ್ಕೃತಿಯ ಮೂಲಕ ಸುಸಂಸ್ಕೃತ ವಿದ್ಯಾರ್ಥಿಗಳ ತಲೆಮಾರುಗಳನ್ನು ಬೆಳೆಸುವ ಕನಸು. ವಿವಾಹದಂತಹ ಖಾಸಗಿ ಕಾರ್ಯಕ್ರಮದಲ್ಲೂ ಶೈಕ್ಷಣಿಕ ಮೌಲ್ಯಗಳಿಗಾಗಿ ತುಡಿಯುವ ಕ್ರಿಯಾತ್ಮಕತೆ ಶ್ಲಾಘನೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next