ಬೆಂಗಳೂರು: ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹದ ಅಂಗವಾಗಿ ರಾಜ್ಯ ಗ್ರಂಥಾಲಯ ಇಲಾಖೆ ನ.5 ರಿಂದ ಒಂದು ತಿಂಗಳ ಕಾಲ ಓದುಗರಿಂದ, ಪ್ರಕಾಶಕರಿಂದ ಹಾಗೂ ಸಾಹಿತಿಗಳಿಂದ ಪುಸ್ತಕ ಸಂಗ್ರಹಿಸುವ ಪುಸ್ತಕ ದಾನ ಅಭಿಯಾನ ನಡೆಸಲು ತೀರ್ಮಾನಿಸಿದೆ.
ನ.14 ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಡೆಯಲಿದ್ದು, ಓದುಗರನ್ನು ಪುಸ್ತಕದತ್ತ ಸೆಳೆಯಲು ಹಾಗೂ ಓದುಗರ ಬಳಿ ಇರುವ ತೀರಾ ಹಳೆಯ ಮತ್ತು ಬಹಳ ಮಹತ್ವದೆನ್ನಿಸಿದ ಕೃತಿಗಳ ಸಂಗ್ರಹಕ್ಕಾಗಿ ಪುಸ್ತಕ ದಾನ ಅಭಿಯಾನ ಆಯೋಜಿಸಲಾಗುತ್ತಿದೆ.
ಮೊದಲಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪುಸ್ತಕ ದಾನ ಅಭಿಯಾನ ನಡೆಯಲಿದೆ. ಕೇಂದ್ರ ಗ್ರಂಥಾಲಯ ವಲಯದ ವ್ಯಾಪ್ತಿಯಲ್ಲಿನ ಗರುಡ ಮಾಲ್‌ನಲ್ಲಿ, ಪಶ್ಚಿಮ ಗ್ರಂಥಾಲಯ ವಲಯದ ವ್ಯಾಪ್ತಿಯಲ್ಲಿನ ಗೋಪಾಲನ್ ಆರ್ಕೆಡ್‌ನಲ್ಲಿ, ಪೂರ್ವ ಗ್ರಂಥಾಲಯ ವಲಯದ ವ್ಯಾಪ್ತಿಯಲ್ಲಿರುವ ಎಸ್ಟಿಂ ಮಾಲ್, ಉತ್ತರ ಗ್ರಂಥಾಲಯ ವಲಯದ ವ್ಯಾಪ್ತಿಗೊಳಪಡುವ ಮಂತ್ರಿ ಸ್ಕ್ವೇರ್, ದಕ್ಷಿಣ ಗ್ರಂಥಾಲಯ ವಲಯದ ಫೋರಂ ಮಾಲ್‌ನಲ್ಲಿ ಪುಸ್ತಕ ದಾನ ಹಮ್ಮಿಕೊಳ್ಳಲು ಇಲಾಖೆ ಚಿಂತನೆ ನಡೆಸಿದೆ.
ಈ ಮಾಲ್‌ಗಳಲ್ಲಿ ಓದುಗರ ಕೊಠಡಿ (ರಿಡಿಂಗ್ ರೂಂ) ಶೀರ್ಷಿಕೆ ಇರುವ ದೊಡ್ಡ ಪೆಟ್ಟಿಗೆಯೊಂದನ್ನು ಇಡಲಾಗುವುದು. ಅದರಲ್ಲಿ ಕೃತಿಗಳನ್ನು ಹಾಕಬಹುದು. ಒಂದು ಇಡೀ ದಿನ ಮಾಲ್ ಮುಚ್ಚುವವರೆಗೂ ಓದುಗರ ಕೊಠಡಿ ಪೆಟ್ಟಿಗೆ ಮಾಲ್‌ನಲ್ಲಿ ಇರಲಿದೆ. ಸಾಹಿತಿಗಳು, ಪ್ರಕಾಶಕರು ಮತ್ತು ಓದುಗರಿಂದ ಉತ್ತಮ ಪ್ರತಿಕ್ರಿಯೆ ಬರುವ ನಿರೀಕ್ಷೆಯಲ್ಲಿದೆ ಗ್ರಂಥಾಲಯ ಇಲಾಖೆ.
ನ.5ರಂದು ಗರುಡ ಮಾಲ್‌ನಲ್ಲಿ ಪುಸ್ತಕ ದಾನ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ನ.9ರಂದು ಪಶ್ಚಿಮ ವಲಯದಲ್ಲಿರುವ ಗೋಪಾಲನ್ ಆರ್ಕೆಡ್‌ನಲ್ಲಿ ಹಾಗೂ ನ.12ರಂದು ದಕ್ಷಿಣ ವಲಯದ ಫೋರಂ ಮಾಲ್‌ನಲ್ಲಿ ಪುಸ್ತಕ ದಾನ ನಡೆಯಲಿದೆ.
ಉತ್ತರ ವಲಯ ಹಾಗೂ ಪೂರ್ವ ವಲಯದಲ್ಲಿ ಪುಸ್ತಕ ದಾನ ಅಭಿಯಾನ ನಡೆಸುವ ದಿನಾಂಕ ನಿಗದಿಪಡಿಸಬೇಕಿದೆ. ಪುಸ್ತಕ ದಾನದಿಂದ ಸಾವಿರಾರು ಕೃತಿಗಳು ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‌ಕುಮಾರ್ ಎಸ್. ಹೊಸಮನಿ ತಿಳಿಸಿದ್ದಾರೆ.
ಪ್ರತ್ಯೇಕ ವಿಭಾಗ: ಪುಸ್ತಕ ದಾನ ಅಭಿಯಾನದಲ್ಲಿ ಸಂಗ್ರಹವಾದ ಕೃತಿಗಳನ್ನು ಆಯಾ ವಲಯದ ಗ್ರಂಥಾಲಯಗಳಲ್ಲಿ ಇಡಲಾಗುವುದು. ಇದಕ್ಕಾಗಿ ಗ್ರಂಥಾಲಯಗಳಲ್ಲಿ ಪುಸ್ತಕ ದಾನ ವಿಭಾಗ ಎಂದು ಪ್ರತ್ಯೇಕ ವಿಭಾಗ ತೆರೆಯಲು ಇಲಾಖೆ ಉದ್ದೇಶಿಸಿದೆ.
ಬೆಂಗಳೂರಿನಲ್ಲಿ ಈ ಅಭಿಯಾನದ ಯಶಸ್ವಿಯಾದರೆ ಉಳಿದ ಜಿಲ್ಲೆಗಳಲ್ಲೂ ಗ್ರಂಥಾಲಯಗಳಲ್ಲಿಯೇ ಪುಸ್ತಕ ದಾನ ಅಭಿಯಾನ ಆರಂಭಿಸಲಾಗುವುದು ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‌ಕುಮಾರ್ ಎಸ್. ಹೊಸಮನಿ ಮಾಹಿತಿ ನೀಡಿದರು.
* ಶ್ರುತಿ ಮಲೆನಾಡತಿ