ವಿಶೇಷ ವರದಿ
ಹಾವೇರಿ: ಸರ್ಕಾರವು ಶಾಲೆ ಆರಂಭಿಸಲು ಸೂಚಿಸಿದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳ ಪೂರೈಕೆಗೆ ಪ್ರತಿಯೊಂದು ಶಾಲೆಗಳಲ್ಲಿ ಬುಕ್ ಬ್ಯಾಂಕ್ ಆರಂಭಿಸಲಾಗಿದೆ.
ಶಾಲೆಗಳು ಆರಂಭಗೊಂಡರೂ ಕೊರೊನಾ ಆರ್ಥಿಕ ಸಂಕಷ್ಟದಿಂದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳ ಪೂರೈಕೆ ಸದ್ಯದ ಪರಿಸ್ಥಿತಿಯಲ್ಲಿ ಸುಲಭವಲ್ಲ. ಹೀಗಾಗಿ ಬುಕ್ ಬ್ಯಾಂಕ್ ಮಾಡಿ ಹಳೇ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹಿಸಿ ಹೊಸದಾಗಿ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಪೂರೈಸುವ ಮೂಲಕ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಬುಕ್ ಬ್ಯಾಂಕ್ ಸ್ಥಾಪನೆ: ವಿದ್ಯಾರ್ಥಿಗಳಿಗೆ ಪುಸ್ತಕಗಳ ಕೊರತೆ ಎದುರಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬುಕ್ ಬ್ಯಾಂಕ್ ತೆರೆಯಲಾಗಿದೆ. ಈ ಬುಕ್ ಬ್ಯಾಂಕ್‌ನಲ್ಲಿ ಸಂಗ್ರಹಗೊಂಡ ಪುಸ್ತಕಗಳನ್ನು ಹೊಸದಾಗಿ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ವಿತರಿಸಲು ಉದ್ದೇಶಿಸಲಾಗಿದೆ. ಐದನೇ ತರಗತಿಯ ವಿದ್ಯಾರ್ಥಿಯಿಂದ ಪುಸ್ತಕಗಳನ್ನು ಸಂಗ್ರಹ ಮಾಡಿಕೊಂಡು, ಆ ವಿದ್ಯಾರ್ಥಿಗೆ ಆರನೇ ತರಗತಿಯ ಪುಸಕ್ತಗಳನ್ನು ನೀಡಲಾಗುತ್ತದೆ. ಹೀಗೆ ಒಂದರಿಂದ 10ನೇ ತರಗತಿ ವರೆಗೂ ಪುಸ್ತಕಗಳನ್ನು ಸಂಗ್ರಹಿಸಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಶೇ. 70ರಷ್ಟು ಪುಸ್ತಕಗಳ ಸಮಸ್ಯೆ ನೀಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಶಾಲೆಗಳಲ್ಲಿ ಮಾತ್ರ ಸಮಸ್ಯೆಯಾಗುತ್ತದೆ. ಇನ್ನು ಕೆಲವು ವಿದ್ಯಾರ್ಥಿಗಳು ಪುಸ್ತಕಗಳನ್ನು ಸರಿಯಾಗಿ ಇಟ್ಟುಕೊಳ್ಳದೆ ಹಾಳು ಮಾಡಿಕೊಂಡಿದ್ದರೆ, ಸಂಗ್ರಹ ಕಡಿಮೆಯಾಗುತ್ತದೆ. ಉಳಿದಂತೆ ಶೈಕ್ಷಣಿಕ ಚಟುವಟಿಕೆಗೆ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಯನ್ನು ಬುಕ್ ಬ್ಯಾಂಕ್ ನೀಗಿಸುತ್ತದೆ.
ಬುಕ್ ಬ್ಯಾಂಕ್‌ಗೆ ಪ್ರಶಂಸೆ: ಪ್ರಸಕ್ತ ವರ್ಷ ಪುಸ್ತಕಗಳು ಮುದ್ರಣಗೊಂಡಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಈ ರೀತಿಯಾಗಿ ಹಳೆಯ ಪುಸ್ತಕಗಳನ್ನು ಸಂಗ್ರಹ ಮಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಹಿನ್ನೆಡೆಯಾಗದಂತೆ ಕೈಗೊಂಡಿರುವ ಯೋಜನೆ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರತಿ ಶಾಲೆಯಲ್ಲಿಯೂ ಪುಸ್ತಕ ಸಂಗ್ರಹ ಮಾಡುವ ಕಾರ್ಯ ಭರದಿಂದ ಸಾಗಿದೆ.
ಇನ್ನು ಮೂರ್ನಾಲ್ಕು ತಿಂಗಳುಗಳ ಕಾಲ ಹೊಸ ಪುಸ್ತಕಗಳು ಬರುವುದು ತಡವಾಗುವುದರಿಂದ ಹಳೆಯ ಪುಸ್ತಕಗಳ ಮೂಲಕವೇ ಪಾಠ ಮಾಡುವ ಕಾರ್ಯ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮುದ್ರಣಗೊಂಡಿಲ್ಲ ಪುಸ್ತಕ: ಪ್ರತಿವರ್ಷ ಜೂನ್ ತಿಂಗಳಿನಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದು, ಶಾಲೆ ಆರಂಭಿಸಿ ಪಾಠ-ಪ್ರವಚನ ಮಾಡುವುದೇ ಸವಾಲಾಗಿದೆ. ಅಲ್ಲದೇ ಲಾಕ್‌ಡೌನ್‌ನಿಂದ ಸರ್ಕಾರದ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಸೇರಿದಂತೆ ಪುಸ್ತಕ ಮುದ್ರಣಕ್ಕೂ ಹಿನ್ನೆಡೆಯಾಗಿದೆ. ಇದರಿಂದ ಈವರೆಗೂ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕಗಳು ಪೂರೈಕೆಯಾಗಿಲ್ಲ.
ಒಟ್ಟಿನಲ್ಲಿ ಕೊರೊನಾ ಆತಂಕ ತಗ್ಗಿದ ನಂತರ ಶಾಲೆ ಆರಂಭಗೊಂಡಾಗ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಬುಕ್ ಬ್ಯಾಂಕ್ ಮೂಲಕ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಪೂರೈಸಲು ಯೋಜನೆ ರೂಪಿಸಿರುವುದು ಶ್ಲಾಘನೀಯ ಕಾರ್ಯ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.