Advertisement

ಹೊರ ರಾಜ್ಯಗಳ ಗ್ರಂಥಾಲಯಗಳಿಗೆ ರಿಯಾಯ್ತಿ ದರದಲ್ಲಿ ಪುಸ್ತಕ

10:23 AM Mar 02, 2020 | Lakshmi GovindaRaj |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕನ್ನಡ ಭಾಷೆಯಿಂದ ಹಿಂದಿ, ತಮಿಳು, ತೆಲಗು, ಬಂಗಾಳಿ ಸೇರಿ ಇನ್ನಿತರ ಭಾಷೆಗೆ ಅನುವಾದ ಮಾಡಿರುವ ಪುಸ್ತಕಗಳನ್ನು ಆಯಾ ರಾಜ್ಯದ ಗ್ರಂಥಾಲಯಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ನೀಡುವ ಬಗ್ಗೆ ಚಿಂತನೆ ನಡೆಸಿದೆ.

Advertisement

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕುವೆಂಪು ಅವರ ಹಲವು ಕೃತಿಗಳನ್ನು ಬೇರೆ ಬೇರೆ ಭಾಷೆಗೆ ಅನುವಾದ ಮಾಡಿದೆ. ಇದರ ಜತೆಗೆ ಶಿವರಾಮ ಕಾರಂತರ ವೈಚಾರಿಕ ಲೇಖನ ಗಳ ಹೊತ್ತಿಗೆ ಸೇರಿ ಹಲವು ಹೆಸರಾಂತ ಸಾಹಿತಿಗಳ ಕೃತಿ ಗಳನ್ನು ಹಿಂದಿ, ಇಂಗ್ಲಿಷ್‌, ಬಂಗಾಳಿ, ಉರ್ದು ಸೇರಿ ಇನ್ನಿತರ ಭಾಷೆಗೆ ಅನುವಾದ ಮಾಡಿದೆ. ಹೀಗೆ ಅನುವಾದ ಮಾಡಿರುವ ಕೃತಿಗಳು ಆಯಾ ಭಾಷೆ ಸಾಹಿತ್ಯಾಸಕ್ತರ ಕೈ ಸೇರುತ್ತಿಲ್ಲ.

ಈ ಹಿನ್ನೆಲೆಯಲ್ಲಿಯೇ ಇದೀಗ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆಯಾ ರಾಜ್ಯಗಳಲ್ಲಿರುವ ಸಾರ್ವ ಜನಿಕ ಗ್ರಂಥಾಲಯಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ರಿಯಾಯ್ತಿ ದರಗಳಲ್ಲಿ ಪುಸ್ತಕಗಳನ್ನು ನೀಡುವ ಕುರಿತಂತೆ ಆಲೋಚನೆ ನಡೆಸಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ್‌ಭಟ್‌ ನೇತೃತ್ವದಲ್ಲಿ ಪ್ರಾಧಿಕಾರದ ಸರ್ವ ಸದಸ್ಯರ ಸಭೆ ಶೀಘ್ರದಲ್ಲೇ ನಡೆಯಲಿದೆ.

ಈ ಸಭೆಯಲ್ಲಿ ಅಂತಿಮ ನಿರ್ಧಾರವೊಂದನ್ನು ತೆಗೆದು ಕೊಳ್ಳುವ ಸಾಧ್ಯತೆಯಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕನ್ನಡದ ಹೆಸರಾಂತ ಸಾಹಿತಿಗಳ ಉತ್ತಮ ಕೃತಿಗಳನ್ನು ಕನ್ನಡದಿಂದ ಬೇರೆ-ಬೇರೆ ಭಾಷೆಗೆ ಅನುವಾದ ಮಾಡಿದೆ. ಆದರೆ, ಅವುಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಆ ಹಿನ್ನೆಲೆಯಲ್ಲಿಯೇ ಆಯಾ ರಾಜ್ಯಗಳ ಸಾಹಿತ್ಯಾಸಕ್ತರ ಕೈ ಸೇರುತ್ತಿಲ್ಲ. ಈ ಬಗ್ಗೆ ವಿಶೇಷ ಕಾಳಜಿ ತೋರಿರುವ ಪ್ರಾಧಿಕಾರದ ಹಾಲಿ ಸದಸ್ಯರು ರಿಯಾಯ್ತಿ ದರದಲ್ಲಿ ಪುಸ್ತಕಗಳನ್ನು ನೀಡುವ ಕುರಿತು ಚಿಂತನೆ ನಡೆಸಿದ್ದಾರೆಂದು ತಿಳಿಸಿದ್ದಾರೆ.

ಕನ್ನಡಕ್ಕೆ ಅನುವಾದ ಕೃತಿಗಳಿಗೆ ಬೇಡಿಕೆ: ಕನ್ನಡದ ಸಾಹಿ ತ್ಯಾ ಸಕ್ತರಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೇರೆ ಬೇರೆ ಭಾಷೆಗಳಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಅನುವಾದ ಮಾಡುತ್ತಿದೆ. ಅಂಬೇಡ್ಕರ್‌ ವೈಚಾರಿಕ ಪುಸ್ತಕಗಳು, ಸಂವಿಧಾನ ರಚನೆ ಕುರಿತ ಕೃತಿಗಳನ್ನು ಹೊರ ತಂದಿದೆ. ಈ ಎಲ್ಲ ಪುಸ್ತಕಗಳು ಉತ್ತಮವಾಗಿ ಮಾರಾಟ ವಾಗುತ್ತಿದೆ. ಕನ್ನಡದ ಕೆಲ ಕೃತಿಗಳು ಸೇರಿ ತೆಲುಗು, ತಮಿಳು, ಕೊಂಕಣಿ, ಬಂಗಾಳಿ, ಹಿಂದೆ, ಇಂಗ್ಲಿಷ್‌ ಭಾಷೆಯ ಸುಮಾರು 70 ಸಾವಿರ ಪುಸ್ತಕಗಳು ಖರ್ಚಾ ಗದೆ ಹಾಗೆಯೇ ಉಳಿದಿವೆ. ಈ ಎಲ್ಲಾ ಪುಸ್ತಕಗಳನ್ನು ಮಾರಾಟ ಮಾಡುವುದು ಹೇಗೆ ಎಂಬುವುದರ ಬಗ್ಗೆ ಪ್ರಾಧಿಕಾರ ಆಲೋಚನೆಯಲ್ಲಿ ನಿರತವಾಗಿದೆ.

Advertisement

ಅನುದಾನದ ಬೇಡಿಕೆ: ಪ್ರಾಧಿಕಾರ ಪ್ರಕಟಿಸುವ ಪುಸ್ತಕಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುವುದು ಸೇರಿ ಹಲವು ರೀತಿಯ ಹೊಸ ಆಲೋಚನೆಗಳು ಪ್ರಾಧಿಕಾರಕ್ಕಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಅನುವಾದದ ಬಗ್ಗೆ ಕಮ್ಮಟ ಹಮ್ಮಿಕೊಳ್ಳುವುದು. ಕನ್ನಡ ಹೆಸರಾಂತ ಕೃತಿಗಳನ್ನು ತುಳು, ಕೊಂಕಣಿ ಸೇರಿ ಇನ್ನಿತರ ಸ್ಥಳೀಯ ಭಾಷೆಗಳಿಗೆ ಅನುವಾದ ಮಾಡುವ ಆಲೋಚನೆಯಿದೆ. ಇದರ ಜತೆಗೆ ಪುಸ್ತಕಗಳ ಡಿಜಿಟಲೀಕರಣಕ್ಕೂ ತೀರ್ಮಾನ ಕೈಗೊಂಡಿದೆ. ಆ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಸುಮಾರು 2.75 ಲಕ್ಷ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿ ಹಲವು ಭಾಷೆಗಳಿಗೆ ಕೃತಿಗಳನ್ನು ಅನುವಾದ ಮಾಡು ತ್ತದೆ. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದ ವಾಗುವ ಕೃತಿಗಳಿಗೆ ಬೇಡಿಕೆಯಿದೆ. ಆದರೆ ಕನ್ನಡದಿಂದ ಬೇರೆ ಭಾಷೆಗಳಿಗೆ ಅನುವಾದ ಗೊಂಡಿರುವ ಕೃತಿಗಳು ಮಾರಾಟವಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿಯೇ ಅಂತಹ ಪುಸ್ತಕಗಳು ಹೊರ ರಾಜ್ಯಗಳ ಸಾಹಿತ್ಯಾಸಕ್ತರ ಕೈ ಸೇರಲಿ ಎನ್ನುವ ಕಾರಣಕ್ಕಾಗಿ ರಿಯಾಯ್ತಿ ದರದಲ್ಲಿ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ನೀಡುವ ಚಿಂತನೆ ನಡೆದಿದೆ.
-ಡಾ.ಅಜಕ್ಕಳ ಗಿರೀಶ್‌ಭಟ್‌, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next