ಕನಕಪುರ: ಉತ್ಪಾದಕರ ಸಹಕಾರದಿಂದ ಸಂಘ ಉತ್ತಮ ಲಾಭಾಂಶ ದಾಖಲಿಸಿದ್ದು ಸದಸ್ಯರಿಗೆ 5 ಲಕ್ಷ ಬೋನಸ್ ವಿತರಣೆ ಮಾಡುವುದಾಗಿ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಮುನಿರಾಜು ತಿಳಿಸಿದರು.
ತಾಲೂಕಿನ ಚೀಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘದಲ್ಲಿ ವಾರ್ಷಿಕವಾಗಿ 12 ಲಕ್ಷಕ್ಕೂ ಹೆಚ್ಚು ನಿವ್ವಳ ಲಾಭ ಬಂದಿದ್ದು, ಹಾಲು ಉತ್ಪಾದಕರಿಗೆ ಆಯುಧ ಪೂಜೆಯಂದು ಬೋನಸ್ ನೀಡಲಾಗುವುದು.
ಇದನ್ನೂ ಓದಿ:- ಭೂಮಿ ಹಕ್ಕಿಗಾಗಿ ನಿರಂತರ ಹೋರಾಟ
ಸಂಘಕ್ಕೆ ಹೆಚ್ಚು ಹಾಲು ಪೂರೈಕೆ ಮಾಡಿದ ಮೂವರಿಗೆ 5 ಸಾವಿರ, 3 ಸಾವಿರ, 2 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.60 ರಷ್ಟು ಅಂಕ ಪಡೆದ 7 ಮಕ್ಕಳಿಗೆ ತಲಾ 2 ಸಾವಿರ ಪ್ರೋತ್ಸಾಹ ಧನ ನೀಡಿದ್ದೇವೆ ಎಂದು ಮಾಹಿತಿ ನೀಡಿದರು. ಚೀಲೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡವಿದ್ದು ಹಾಲು ಉತ್ಪಾದಕರು ಮತ್ತು ಆಡಳಿತ ಮಂಡಳಿ ಸಹಕಾರದಿಂದ ಆರ್ಥಿಕವಾಗಿ ಸದೃಢವಾಗಿದೆ. ಸದಸ್ಯರು ಮುಂದೆಯೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಹಾಲು ಪೂರೈಕೆ ಮಾಡಬೇಕು.
ಮಾದರಿ ಸಂಘವನ್ನಾಗಿ ಮಾಡಲು ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಬಮೂಲ್ ಉಪವ್ಯವಸ್ಥಾಪಕ ಡಾ.ಟಿ.ಸಿ.ಪ್ರಕಾಶ್ ಮಾತನಾಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ರವೀಶ್ ಗೌಡ, ಡೇರಿ ಅಧ್ಯಕ್ಷ ಡಿ.ಶಿವಲಿಂಗಯ್ಯ, ಉಪಾಧ್ಯಕ್ಷ ಎಲ್.ಶಿವಲಿಂಗಯ್ಯ, ನಿರ್ದೇಶಕರು, ಡೇರಿ ಸಿಬ್ಬಂದಿ ಇದ್ದರು.