ಮುಂಜಾನೆಯ ರವಿ ಕಿರಣ ಭುವಿಯ ಸ್ಪರ್ಷಿಸುತ್ತಲಿ, ತಣ್ಣನೆಯ ಗಾಳಿ ಬೀಸುತಲಿ, ಹಕ್ಕಿಯ ಹಾಡು ಕಿವಿಗೆ ಇಂಪು ನೀಡುತಲಿ ನಾನದರಲಿ ತೇಲಿ ಹೋದೆ. ಇವೆಲ್ಲವೂ ನನ್ನ ಬಾಲ್ಯದ ಅತ್ಯಮೂಲ್ಯ ದಿನಗಳು ಇಂದು ಬೀಸುವ ಗಾಳಿ ಕಸ ಹೊತ್ತು ತರುತ್ತಿದೆ. ಇನ್ನು ಹಕ್ಕಿಯ ಹಾಡನ್ನು ಮೊಬೈಲ್‌ನಲ್ಲಿ ಸರ್ಚ್ ಮಾಡಿ ಕೇಳುವ ಕಾಲ ಬಂದಿದೆ. ಆಧುನಿಕ ಭರಾಟೆಗೆ ಸಿಕ್ಕ ಮನುಷ್ಯನು ಭಾವಹೀನ ಮಾತ್ರವಲ್ಲದೇ ಯಾಂತ್ರಿಕವಾಗೇ ಬದುಕುತ್ತಿದ್ದಾನೆ. ಪ್ರತಿಯೊಂದರಲ್ಲೂ ಲಾಭದ ಲೆಕ್ಕಾಚಾರ ಮಾಡುವವನಿಗೆ ಈ ಸರಿ ತಪ್ಪುಗಳ ಗೊಡವೆ ಖಂಡಿತಾ ಇಲ್ಲ.
ಪರಿಸರ ಸಂರಕ್ಷಣೆ ಎಂದು ಘೋಷ ವಾಖ್ಯ ಕೂಗಿ ಒಂದು ಗಿಡ ನೆಡುವ ಅದೆಷ್ಟೊ ಜನರು ಮತ್ತೆ ವರ್ಷ ಪುರ್ತಿ ಅದರ ಕಡೆ ಮುಖ ಕೂಡ ತೋರಿರಲಾರರು. ನಿಗರ್ಸ ವರದಾನವಾಗಿಸಬೇಕಾದ ನಾವುಗಳೇ ಅದಕ್ಕೆ ಕೇಡನ್ನು ಮಾಡುತ್ತಾ ರಕ್ಕಸ ಪ್ರವೃತ್ತಿ ಮುಂದುವರಿಸಿದ್ದೇವೆಯೇ ಅನಿಸುತ್ತದೆ. ಈ ಪರಿಸ್ಥಿತಿ ಗ್ರಾಮೀಣ ಭಾಗದಲ್ಲಿ ಮಾತ್ರವಿರದೇ ನಗರದಲ್ಲೂ ಇದೇ ಮನೋಭಾವನೆ ಇದೆ ಆದರೆ ತೋರ್ಪಡಿಕೆಯ ಪರಿಸರ ಕಾಳಜಿ ನಗರಗಳ ನ್ಯೂನ್ಯತೆಯನ್ನು ಮರೆಮಾಚುತ್ತಿದೆ. ನಗರದಲ್ಲಿ ತಮ್ಮ ಗಾರ್ಡನ್ ಗಿಡದ ಪೋಷಣೆಗೆ ಬೆಲೆ ನೀಡುವ ಜನ ಮನೆ ಕಟ್ಟುವ ಸಲುವಾಗಿ ತಲೆತಲಾಂತರ ವರ್ಷದಿಂದ ಬೆಳೆದು ನಿಂತ ಹೆಮ್ಮರವನ್ನು ಧರೆಗುರುಳಿಸಿ ಬಿಡುತ್ತಾರೆ. ಇನ್ನೊಂದೆಡೆ ಪ್ಲಾಸ್ಟಿಕ್ ಮಿತಿ ಮೀರಿದ ಬಳಕೆ ಪರಿಣಾಮ ಸದಾ ಸದಾ ಸ್ವಚ್ಛಂದವಾಗಿ ಇರಬೇಕಾದ ಸಮುದ್ರ ಈಗ ಪ್ಲಾಸ್ಟಿಕ್ ಮಯವಾಗಿದೆ. ಅದಕ್ಕೂ ಮಿಗಿಲಾಗಿ ಮೈಕ್ರೋ ಪ್ಲಾಸ್ಟಿಕ್ ಸಂಖ್ಯೆ ಏರುತ್ತಿದ್ದು ಇದು ಜಲಚರ ಪ್ರಾಣಿಗಳ ಅವನತಿಗೂ ಕಾರಣವಾಗುತ್ತಿದೆ.
ದಿನನಿತ್ಯ ಹೊಗೆ ಉಗುಳುವ ವಾಹನಗಳು ನಮ್ಮ ಅಗತ್ಯಗಳಿಗಾಗಿ ಸೇವೆ ನೀಡುತ್ತಿದ್ದರೂ ನಮಗೆ ಗೊತ್ತಿಲ್ಲದಂತೆ ಕಲುಷಿತ ವಾಯು ಸೇವನೆಗೆ ಕೂಡ ಕಾರಣವಾಗುತ್ತಿದೆ. ಮನೆ ಪಕ್ಕ ಗಿಡ ಇರಬೇಕೆನ್ನುವ ಜನರು ಮನೆ ಪಕ್ಕದಲ್ಲೇ ಹತ್ತು ಇಪ್ಪತ್ತು ಸಾವಿರ ನೀಡಿ ಪುಟ್ಟ ಬೋನ್ಸೈ ಮರ ತಂದು ಅದರ ಪೋಷಣೆ ಮಾಡುತ್ತಿದ್ದಾರೆ. ಆದರೆ ಈ ಬೋನ್ಸೈ ಸಂಸ್ಕೃತಿ ಎಲ್ಲರಿಂದ ಸಾಧ್ಯವಿಲ್ಲ ಯಾರಿಗಾಗಿ ಅಲ್ಲವಾದರೂ ನಮಗಾಗಿ ನಾವು ಈ ಪ್ರಕೃತಿಯನ್ನು ಉಳಿಸಲೇಬೇಕಿದೆ. ನಮಗೆ ಸಿಕ್ಕ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ವರದಾನವಾಗಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.
-ದೀಕ್ಷಿತಾ,
ಶಾರದಾ ಕಾಲೇಜು, ಬಸ್ರೂರು