Advertisement
ನಗರದಿಂದ ಕೇವಲ 15 ಕಿಮೀ ದೂರದಲ್ಲಿರುವ ಬೋನ್ಹಾಳ ಕೆರೆಯನ್ನು 1990ರಲ್ಲಿ ಸರಕಾರ ಪಕ್ಷಿಧಾಮ ಎಂದು ಘೋಷಿಸಿದೆ. ಆದರೆ ಪಕ್ಷಿಧಾಮ ಹಲವಾರು ಸಮಸ್ಯೆಗಳಿಂದ ಸೊರಗಿ ಹೋಗಿದೆ. ದೇಶದಲ್ಲಿಯೇ ಬೃಹತ್ ಪಕ್ಷಿಧಾಮವಾಗಬೇಕಿದ್ದ ಇದು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷದಿಂದ ಪಕ್ಷಿ ಸಂಕುಲದ ವಿನಾಶಕ್ಕೆ ದಾರಿ ಮಾಡಿಕೊಟ್ಟಿದೆ.
Related Articles
Advertisement
ಜಾನುವಾರುಗಳ ತಾಣ: ಪ್ರವಾಸಿಗರ ಮನಸೆಳೆಯಲು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಣ್ಣ ಉದ್ಯಾನ ಜಾನುವಾರುಗಳು ಮೇಯಲು ಅನುಕೂಲವಾಗಿದೆ. ಉದ್ಯಾನದಲ್ಲಿನ ಹೂವಿನ ಗಿಡ, ಗರಕಿ ಜಾನುವಾರುಳಿಗೆ ನಿತ್ಯದ ಆಹಾರವಾಗಿದೆ. ಇನ್ನು ಜೋಕಾಲಿ, ಜಾರು ಬಂಡಿ ಇತರೆ ಆಟಿಕೆಗಳು ಮುರಿದು ಹೋಗಿವೆ.
ಜಾಲಿ ಗಿಡಗಳ ಅಬ್ಬರ: ಪಕ್ಷಿಧಾಮದ ಕೆರೆ ಸುತ್ತಲು ಜಾಲಿಗಿಡಗಳು ವ್ಯಾಪಕವಾಗಿ ಬೆಳೆದಿವೆ. ವೀಕ್ಷಣಾ ಗೋಪುರಗಳು ಎಲ್ಲಿವೆ ಎಂದು ಪ್ರವಾಸಿಗರು ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಹೇರಳವಾಗಿ ಜಾಲಿಗಿಡಗಳು ಬೆಳೆದಿದ್ದರಿಂದ ಹಾವು, ಚೇಳು, ಹುಳು ಹುಪ್ಪಡಿಗಳು ಸೇರಿ ಕೊಂಡಿವೆ. ಇದರಿಂದ ಭಯರಾಗುವ ಪ್ರವಾಸಿಗರು ವೀಕ್ಷಣಾ ಗೋಪರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಸ್ವಚ್ಛತೆ ಮಾಯ: ಪಕ್ಷಿಧಾಮದ ರಮಣೀಯ ದೃಶ್ಯ ಸವಿಯಲು ಪಿಕನಿಕ್ ಪಾಯಿಂಟ್‌ಗೆ ಸೂಕ್ತವಾಗಿದೆ. ಉದ್ಯಾನದಲ್ಲಿ ಸ್ವಚ್ಛತೆ ಮರೀಚೆಕೆಯಾಗಿದೆ. ನೆಲಕ್ಕೆ ಕೂತರೆ ಸಾಕು ಮುಳ್ಳುಗಳು ಮೈ ಕೈಗೆ ಚುಚ್ಚುತ್ತವೆ. ಎಲ್ಲೆಂದರಲ್ಲಿ ಮಲಮೂತ್ರಗಳ ವಿಸರ್ಜನೆ, ಸೆಗಣಿ, ಬೀಯರ್ ಬಾಟಲ್, ನಿರೋಧ ಪ್ಯಾಕೇಟ್, ಕಸ ಕಡ್ಡಿ, ತಿಂಡಿ, ತಿನಿಸು ಪದಾರ್ಥಗಳ ರಾಶಿ ರಾಶಿ ಪ್ಲಾಸ್ಟಿಕ್ ಕವರ್ ಇವೆಲ್ಲವುಗಳಿಂದ ಪ್ರವಾಸಿಗರು ವಿಶ್ರಾಂತಿ ತೆಗೆದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಕ್ಷಿಗಳ ವಾಸಕ್ಕಿಲ್ಲ ಆಶ್ರಯ: ಪಕ್ಷಿಗಳು ಕುಳಿತು ಆಹಾರ ಸೇವಿಸಲು ಕೆರೆಯಲ್ಲಿ ಕೋಲುಗಳು (ಪಕ್ಷಿ ಆಸನಗಳು) ನೆಡುಹಾಕಿಲ್ಲ. ಎಂದೊ ಹಾಕಿದ್ದ ಕೆಲ ಕೋಲುಗಳು ಮುರಿದು ಹೋಗಿವೆ. ಪಕ್ಷಿಗಳಿಗೆ ಕುಳಿತು ಆಹಾರ ಸೇವಿಸಲು ಆಸನಗಳ ವ್ಯವಸ್ಥೆ ಇಲ್ಲ. ಪಕ್ಷಿಗಳು ಸಮೀಪದ ಗಿಡಮರಗಳನ್ನೆ ಆಶ್ರಯಸಿವೆ. ನೋಡುಗರಿಗೆ ಪಕ್ಷಿಗಳೇ ಕಾಣಿಸುವುದಿಲ್ಲ. ಇದು ಪ್ರವಾಸಿಗರ ನಿರಾಶೆಗೆ ಕಾರಣವಾಗಿದೆ.
ಪಾಚಿಗಟ್ಟಿದ ನೀರು: ಕೆರೆಯಲ್ಲಿ 2ರಿಂದ 3 ಅಡಿಯಷ್ಟು ಪಾಚಿ ಬೆಳೆದಿದೆ. ನೀರು ಕೆಟ್ಟ ವಾಸನೆ ಬೀರುತ್ತಿದೆ. ಕೆರೆ ಬಳಿ ಹೋಗಿ ಪಕ್ಷಿಗಳನ್ನು ವೀಕ್ಷಿಸಿಸುವ ಪ್ರವಾಸಿಗರು ಮುಗೂ ಮುಚ್ಚಿಕೊಂಡೆ ಹೋಗಬೇಕು. ಇದು ಪಕ್ಷಿ ಸಂಕುಲದ ಆರೋಗ್ಯಕೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಬೋಟ್ ಎಲ್ಲಿ ಹೋದವು: ಪ್ರವಾಸಿಗರ ಜಲ ವಿಹಾರಕ್ಕಾಗಿ 2 ದೋಣಿಗಳನ್ನು ಕಾಯ್ದಿರಿಸ ಲಾಗಿತ್ತು ಈಗ ಅವೆಲ್ಲಿ ಮಾಯವಾದವು ಎನುವುದೇ ಕಾಣಿಸುತ್ತಿಲ್ಲ.
ಹದಗೆಟ್ಟ ರಸ್ತೆ: ಮುಖ್ಯ ರಸ್ತೆಯಿಂದ ಪಕ್ಷಿಧಾಮಕ್ಕೆ ತೆರರಳುವ 2 ಕಿಮೀ ರಸ್ತೆ ಹದಗೆಟ್ಟು ಹೋಗಿದೆ. ರಸ್ತೆ ಉದ್ದಕ್ಕೂ ಕಂಕರ ಕಲ್ಲುಗಳು ತುಂಬಿಕೊಂಡಿವೆ. ವಾಹನಗಳು ಚಲಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷಿಧಾಮ ತಲುಪುವರೆಗೆ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಗೆ ಹಿಡಿಶಾಪ ಹಾಕುತ್ತಲೇ ಸಾಗಬೇಕು.
ರಸ್ತೆ ಇಕ್ಕೆಲಗಳಲ್ಲಿ ಜಾಲಿಗಿಡ: ರಸ್ತೆ ಇಕ್ಕೆಲಗಳಲಿ ಜಾಲಿ ಗಿಡಗಳೆ ಆವರಿಸಿಕೊಂಡಿವೆ. ಅವಸರ ವಾಗಿ ಚಲಿಸುವಂತಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೆ ಜಾಲಿಮುಳ್ಳುಗಳಿಂದ ಗಾಯಗೊಳ್ಳುವುದು ಖಚಿತ. ಸಂತೋನೋತ್ಪತ್ತಿಗೆ ಪಕ್ಷಿಗಳ ಆಗಮನ: ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಪಕ್ಷಿಗಳು ನವೆಂಬರ್, ಡಿಸೆಂಬರ್‌ನಲ್ಲಿ ಇಲ್ಲಿಗೆ ಬರುತ್ತವೆ. ರಾಜಹಂಸ, ಬ್ಲಾಕ್ ಐಬಿಸ್, ವೈಟ್ ಐಬಿಸ್, ಸ್ಪೂನ್ ಬಿಲ್ ಸೇರಿದಂತೆ ಇನ್ನೂ ಅನೇಕ ತರಹದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಇದರಲ್ಲಿ ಇನ್ನೂ ಕೆಲ ಪಕ್ಷಿಗಳ ಹೆಸರನ್ನು ಅರಣ್ಯ ಇಲಾಖೆಗೆ ಇದುವರೆಗೂ ಗುರುತಿಸಲು ಸಾಧ್ಯವಾಗಿಲ್ಲ.
ಮೀನುಗಾರಿಕೆ ನಿಷೇಧ: ಹಿಂದೆ ಕೆರೆಯಲ್ಲಿ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರು. ಆದರೆ ಪಕ್ಷಿ ಸಂಕುಲಕ್ಕೆ ತೊಂದರೆ ಆಗದಿರಲಿ ಎಂಬ ಉದ್ದೇಶದಿಂದ ಸರಕಾರ 1990ರಲ್ಲಿ ಮೀನುಗಾರಿಕೆ ನಿಷೇಧಿಸಿದೆ. ನಿಷೇಧದ ನಡುವೆಯೂ ಇಲ್ಲಿ ಮೀನುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.
ಮೂಲ ಸೌಕರ್ಯ ಅವಶ್ಯಕತೆ: ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಮದ್ಯಪಾನ, ಧೂಮಪಾನ ಸಂಪೂರ್ಣವಾಗಿ ನಿಷೇಧಿಸಬೇಕು. ಕೆರೆ ಹೂಳು, ಪಾಚಿ ತೆಗೆಸಬೇಕು. ಜಾಲಿ ಗಿಡ ತೆರವುಗೊಳಿಸಿ ಕುಡಿಯುವ ನೀರು, ವಿದ್ಯುತ್, ರಸ್ತೆ ದುರಸ್ತಿ, ಉದ್ಯಾನ, ಮಕ್ಕಳ ಆಟಿಕೆ. ಕ್ಯಾಂಟೀನ್, ಶೌಚಾಲಯ, ವಸತಿ ಗೃಹ ನಿರ್ವಹಣೆ ಮಾಡಬೇಕು. ಕಾವಲುಗಾರರ ನೇಮಕ ಮಾಡಬೇಕು. ಜಲ ವಿಹಾರಗಳ ದೋಣಿ, ಪಕ್ಷಿಗಳ ಕೋಲು (ಆಸನ.) ವ್ಯವಸ್ಥೆ ಸೇರಿದಂತೆ ಪ್ರವಾಸಿಗರಿಗೆ ಎಲ್ಲ ಸೌಲಭ್ಯ ಕಲ್ಪಿಸಿ ಪಕ್ಷಿಧಾಮದ ಸೌಂದರ್ಯ ಹೆಚ್ಚಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂಬ ಮಾತು ಕೇಳಿ ಬಂದಿದೆ.
–ಸಿದ್ದಯ್ಯ ಪಾಟೀಲ