ನಿಡಗುಂದಿ: ಪಟ್ಟಣದ ಹೊರ ವಲಯದ ಮುದ್ದೇಬಿಹಾಳ ರಸ್ತೆಯಲ್ಲಿ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ 6.5 ಕಿ.ಮೀ. ಬಳಿ ಕಾಲುವೆಗೆ ದೊಡ್ಡದಾದ ಬೋಂಗಾ ಬಿದ್ದಿದೆ. ಇದರಿಂದ ಅಕ್ಕ ಪಕ್ಕದ ಜಮೀನಿಗೆ ನೀರು ಹರಿದು ಹೋಗಿ ಜವುಳಿಗೆ ತುತ್ತಾಗುವ ಭಯ ಎದುರಾಗಿದೆ.
2019ರಲ್ಲಿಯೇ ಮುಖ್ಯ ಕಾಲುವೆ ಸಂಪೂರ್ಣ ನವೀಕೃತಗೊಂಡಿದ್ದರೂ ಕಳಪೆ ಕಾಮಗಾರಿ ಕಾರಣ ಕಾಲುವೆಯ ಇದೇ ಸ್ಥಳದಲ್ಲಿ ಪದೆ ಪದೆ ಬೋಂಗಾ ಬೀಳುತ್ತಿದೆ. 2020ರಲ್ಲಿಯೂ ದೊಡ್ಡದಾದ ಬೋಂಗಾ ಬಿದ್ದಿತ್ತು. ಆಗ ದುರಸ್ತಿ ಕೈಗೊಳ್ಳಲಾಗಿತ್ತು. ಈಗ ಮತ್ತೆ ಬೋಂಗಾ ಬಿದ್ದಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಕಾಲುವೆಯ ಲೈನಿಂಗ್ ಹೊಸದಾಗಿ ನಿರ್ಮಿಸಿದರೂ ಕಳಪೆ ಕಾಮಗಾರಿಯೇ ಬೋಂಗಾ ಬೀಳಲು ಮುಖ್ಯ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ.
ಕಳಪೆ ಕಾಮಗಾರಿ ಹಾಗೂ ಕಾಲುವೆ ಒಡೆಯುವುದರ ಬಗ್ಗೆ ತನಿಖೆ ನಡೆಸಬೇಕು. ಆಧುನೀಕರಣ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕೆಬಿಜೆಎನ್ನೆಲ್ ಅಧಿ ಕಾರಿಗಳಿಗೆ ಸಾಕಷ್ಟು ಬಾರಿ ಈ ಬಗ್ಗೆ ದೂರಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ರೈತರಾದ ಆರ್.ಎಸ್. ಉಕ್ಕಲಿ, ಬಸಲಿಂಗಪ್ಪ ಸರಶೆಟ್ಟಿ, ಭೀಮಪ್ಪ ದಂಡಿನ, ಬಸವರಾಜ ಹೊಸಗೌಡರ, ಬಸನಗೌಡ ಪಾಟೀಲ, ಪ್ರಭು ಪಟ್ಟಣಶೆಟ್ಟಿ, ಬಂದಗಿಸಾಬ್ ಗೊಳಸಂಗಿ ಆರೋಪಿಸಿದರು.
ಇದೊಂದು ತಾಂತ್ರಿಕ ಸಮಸ್ಯೆಯಾಗಿದ್ದು ಬೋಂಗಾ ಬಿದ್ದ ಕಾಲುವೆಯ ಹಿಂಬದಿ ಇರುವ ಉಪ ಕಾಲುವೆ ಸಂಖ್ಯೆ 2ಕ್ಕೆ ನೀರು ಹೋಗಲು ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಸ್ವಲ್ಪ ಮಟ್ಟಿಗೆ ನೀರಿನ ರಭಸ ಹೆಚ್ಚುತ್ತದೆ. ಇದರಿಂದ ಬೋಂಗಾ ಬಿದ್ದಿದೆ. ಅಲ್ಲಿಯ ನೆಲ ಕೂಡಾ ಗಟ್ಟಿಯಾಗಿಲ್ಲ ಎನ್ನಲಾಗುತ್ತಿದೆ.